ಹಾಸನ : ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 30 ರೂ. ನೀಡಲು ಹಾಸನ ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದ್ದು, ಇನ್ನೊಂದು ವಾರದಲ್ಲಿ ಜಾರಿಗೆ ಬರಲಿದೆ ಎಂದು ಒಕ್ಕೂಟದ ಅಧ್ಯಕ್ಷ, ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಹಾಸನ ಹಾಲು ಒಕ್ಕೂಟದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸದ್ಯಕ್ಕೆ ಒಕ್ಕೂಟದಿಂದ ಪ್ರತಿ ಲೀಟರ್ 28 ರೂ.75 ಪೈಸೆ ದರ ನೀಡಲಾಗುತ್ತಿದ್ದು, ಹೊಸ ದರದ ನಂತರ ರಾಜ್ಯದಲ್ಲಿಯೇ ಗರಿಷ್ಠ ದರ ನೀಡುವ ಹಿರಿಮೆ ಹಾಸನ ಹಾಲು ಒಕ್ಕೂಟದ್ದಾಗಲಿದೆ ಎಂದರು.ಹಾಸನ ಹಾಲು ಉತ್ಪಾದಕರ ಒಕ್ಕೂಟದಿಂದ ರೈತರಿಗೆ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗಿದ್ದು, ರಾಸುಗಳು ಪೂರ್ಣ ಪ್ರಮಾಣದಲ್ಲಿ ಹಸಿರು ಮೇವನ್ನು ತಿಂದು ಗುಣಮಟ್ಟದ ಹಾಲನ್ನು ಪೂರೈಕೆ ಮಾಡಲು ಅನುಕೂಲವಾಗುತ್ತದೆ.ಇದರಿಂದ ಉತ್ಪಾದನಾ ವೆಚ್ಚದಲ್ಲಿ ಉಳಿತಾಯವಾಗುತ್ತದೆ.
ಅಲ್ಲದೆ, ಹಾಲು ಉತ್ಪಾದಕರಿಗೆ ರಬ್ಬರ್ ಮ್ಯಾಟ್‍ಗಳನ್ನು ವಿತರಿಸಲಾಗಿದ್ದು, ರಾಸುಗಳನ್ನು ಬಹುಮುಖ್ಯವಾಗಿ ಬಾಸುವ ಕೆಚ್ಚಲು ಬಾವು ರೋಗ, ಮಂಡಿ ನೋವು, ಕೀಲು ನೋವು ತಡೆಗಟ್ಟಲು ಸಾಧ್ಯವಾಗಲಿದೆ. ಶುದ್ಧ ಹಾಲು ಉತ್ಪಾದನೆಗೂ ಸಹಕಾರಿಯಾಗುತ್ತದೆ ಎಂದರು.