Monday, December 23, 2024

ಖ್ಯಾತ ಸುಗಮ ಸಂಗೀತ ಕಲಾವಿದೆ ಸುನೀತಾ ಚಂದ್ರಕುಮಾರ್​​ ಸಾಧನೆ

ಮೈಸೂರು ಜಿಲ್ಲೆಯು ಶ್ರೀಮಂತ ಇತಿಹಾಸದ ಜೊತೆಗೆ ಪುರಾತತ್ವ, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ ಮತ್ತು ಪರಂಪರೆಯ ಮೌಲ್ಯವನ್ನು ಚಿತ್ರಿಸುವ ಹಲವಾರು ಪ್ರಾಗೈತಿಹಾಸಿಕ ಸ್ಥಳಗಳು, ಸ್ಮಾರಕಗಳು, ಕೋಟೆಗಳು, ದೇವಾಲಯಗಳನ್ನ ಹೊಂದಿದೆ. ಕಲೆಯೆಂಬುದು ವಿಕಾಸಕ್ಕಾಗಿಯೇ ಹೊರತು ವಿಲಾಸಕ್ಕಲ್ಲ ಎನ್ನುವುದು ಮೈಸೂರಿನ ವಿಷಯದಲ್ಲಿ ಅಕ್ಷರಶಃ ನಿಜ..ಹೌದು ಈ ವಾರದ ನಮ್ಮ ಯಜಮಾನಿ ಕೂಡ ಮೈಸೂರಿನ ಅಪ್ಪಟ ಕನ್ನಡತಿ.

ಗಾಯನ, ರಾಗ ಸಂಯೋಜನೆ, ಗೀತ ರಚನೆ ಮತ್ತು ಕನ್ನಡದ ಸುಗಮ ಸಂಗೀತದ ಬರಹಗಳಿಗೆ ಹೆಸರಾಗಿರುವವರು ನಾಡಿನ ಶ್ರೇಷ್ಟ ಕಲಾವಿದರಲ್ಲೊಬ್ಬರಾದ ಸುನೀತ ಚಂದ್ರಕುಮಾರ್. ಸುನೀತರವರ ಸಂಯೋಜನೆಯ ಗೀತೆಗಳಿಗೆ ನಾಡಿನ ಅನೇಕ ಗಾಯಕರು ಧ್ವನಿಯಾಗಿದ್ದಾರೆ.

ಸುನೀತ ಚಂದ್ರಕುಮಾರ್ ಹುಟ್ಟಿದ್ದು 27 ಆಗಸ್ಟ್ 1967 ಮೈಸೂರಿನಲ್ಲಿ. ಇವರ ತಂದೆ ಅನಂತ ಕೃಷ್ಣ, ತಾಯಿ ಸುಮತಿ ಭಟ್. ತಾಯಿಯವರಿಗಿದ್ದ ಸಂಗೀತಾಸಕ್ತಿ ಸುನೀತಾರಿಗೂ ಬರಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಶಾಸ್ತ್ರೀಯ ಸಂಗೀತದ ನೆಲೆಗಟ್ಟಿನ ಗೀತೆಗಳ ರಾಗಕ್ಕೆ ಪದ ಜೋಡಿಸುವ ಕೆಲಸವನ್ನು ಮಾಡುತ್ತಿದ್ದರು. ತಾಯಿ ಹಾಡುತ್ತಿದ್ದ ಗೀತೆಗಳಲ್ಲದೆ, ಸಂಪ್ರದಾಯ ಗೀತೆಗಳು, ಭಕ್ತಿ ಗೀತೆಗಳು, ಭಾವಗೀತೆಗಳು ಸುನೀತಾರನ್ನ ಬಹಳಷ್ಟು ಆಕರ್ಷಿಸಿದ್ದವು. ಹಾಡುಗಳನ್ನು ಕಲಿತು ಬಾಲ್ಯದಿಂದಲೇ ನೃತ್ಯ ಹಾಗೂ ಸಂಗೀತಾಸಕ್ತಿ ಬೆಳೆಸಿಕೊಂಡಿದ್ದ ಸುನೀತ ಚಂದ್ರಕುಮಾರ್ 7 ಮಕ್ಕಳಲ್ಲಿ ಕೊನೆಯವರಾಗಿ ಜನಿಸಿದವರು. ಮನೆ ತುಂಬೆಲ್ಲ ಸಂಗೀತದ ವಾತಾವರಣವೇ ತುಂಬಿ ಹೋಗಿತ್ತು.

ಕೇವಲ ಪಠ್ಯ ವಿಚಾರಗಳಲ್ಲಿ ಮಾತ್ರವಲ್ಲದೆ ಪಠ್ಯೇತರ ವಿಷಯದಲ್ಲು ಹೆಚ್ಚಿನ ಆಸಕ್ತಿ ಹೊಂದಿದ್ದ ಸುನೀತ ಕ್ರೀಡೆಯಲ್ಲೂ ಮುಂಚೂಣಿಯಲ್ಲಿದ್ದರು. ತಾವು 7ನೇ ತರಗತಿಯಲ್ಲಿದ್ದಾಗ ಒಂದು ಸ್ಫರ್ಧೆಯಲ್ಲಿ ಹಾಡಿದಾಗ ನಾನು ಹಾಡುತ್ತೇನೆಂದು ನನ್ನ ಮನೆಯವರೆಲ್ಲರಿಗೂ ತಿಳಿಯಿತು ಎಂದು ತಮ್ಮ ನೆನಪಿನ ಬುತ್ತಿಯನ್ನ ತೆರೆದಿಟ್ಟರು. ವಿದ್ಯಾಭ್ಯಾಸದ ನಂತರ, ಚಂದ್ರಕುಮಾರ್​​ ಜೊತೆ ಸುನೀತಾ ವಿವಾಹವಾಯಿತು. ಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಚಂದ್ರಕುಮಾರ್​​ ಕೂಡ ಮದುವೆಯ ನಂತರ ಸುನೀತರಲ್ಲಿ ಹುದುಗಿದ್ದ ಸಂಗೀತದ ಪ್ರತಿಭೆ ಬೆಳೆಯಲು ಮತ್ತಷ್ಟು ಸಹಕರಿಸಿದ್ರು. ನೂರಾರು ಧ್ವನಿ ಸುರುಳಿಗಳಿಗೆ ಸಂಗೀತ ರಾಗ ಮತ್ತು ಸಂಗೀತ ಸಂಯೋಜನೆ ಮಾಡಿರುವ ಸುನೀತ ಅವರ ಹಿರಿಮೆ ಅಪಾರ. ತಮ್ಮದೇ ಆದ ವಿಭಿನ್ನ ಶೈಲಿಯ ರಾಗ ಸಂಯೋಜನೆಗೆ ಹೆಸರುವಾಸಿಯಾಗಿರುವ ಸುನೀತ ಸಾಂಸ್ಕೃತಿಕ ನಗರಿ ಮೈಸೂರಿನ ಕಳಶಪ್ರಾಯರಾಗಿದ್ದಾರೆ. ಸಾವಿರಾರು ಶಿಷ್ಯ ವೃಂದವನ್ನ ಹೊಂದಿರುವ ಇವರು ಸ್ವತಃ ಶಿಸ್ತಿನ ಸಿಪಾಯಿಯಾಗಿದ್ದು ತಮ್ಮ ಶಿಷ್ಯರಲ್ಲಿ ಕೂಡ ಅಷ್ಟೇ ಶಿಸ್ತನ್ನ ರೂಢಿಸಿದ್ದಾರೆ.

ರಘು ಲೀಲಾ ಸಂಗೀತ ಶಾಲೆಯ ಮುಖಾಂತರ ಸಂಗೀತ ತರಗತಿ ನಡೆಸುತ್ತಿರುವ ಸುನೀತ, ಒಲಿದು ಬಾ ಕೃಷ್ಣ, ಕೋಲುಮಂಡೆ ಜಂಗಮರು, ಚೆಲ್ವಿ, ಚಿತ್ತ ಚಿತ್ರ, ಕೋಲು ಕೋಲಣ್ಣ ಕೋಲು ಕೋಲೆ.. ಅಪ್ಪಾ ನೀನಿಲ್ಲದೆ ಬೆಪ್ಪಾದೋ.. ಸೇರಿದಂತೆ ಅನೇಕ ಗೀತೆಗಳಿ ರಾಗ ಸಂಯೋಜಿಸಿ ಧ್ವನಿ ಸುರಳಿಗಳನ್ನ ಹೊರತಂದಿದ್ದಾರೆ. ನಗರ ಸಂಕೀರ್ತನೆ ಎಂಬ ವಿಭಿನ್ನ ಶೈಲಿಯ ಕಾರ್ಯಕ್ರಮವನ್ನ ಆರಂಭಿಸಿ, ಅನೇಕ ನಗರಗಳಲ್ಲಿ ಸಂಕೀರ್ತನೆಗಳನ್ನ ನಡೆಸುತ್ತ ಹೊಸದೊಂದು ಸಾಂಪ್ರದಾಯಕ್ಕೆ ನಾಂದಿ ಹಾಡಿದ ಹೆಗ್ಗಳಿಕೆ ಸುನೀತಾರಿಗೆ ಸೆರಬೇಕು. KIMA ಬೆಸ್ಟ್ ಕಂಪೋಸರ್ ಪ್ರಶಸ್ತಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸುಬ್ಬಯ್ಯ ನಾಯ್ಡು ಸೈಟೇಶನ್ ಎಕ್ಸಲೆನ್ಸ್ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಸನ್ಮಾನಗಳು ಇವರ ಸಾಧನೆಗೆ ಒಲಿದು ಬಂದಿವೆ.

RELATED ARTICLES

Related Articles

TRENDING ARTICLES