Friday, June 7, 2024

ಭಾವನಾತ್ಮಕ ವಿಡಿಯೋ ಬಿಟ್ಟು ಠಾಕ್ರೆ ಅಂತಿಮ ಕಸರತ್ತು

ಮಹಾರಾಷ್ಟ್ರ ಪಾಲಿಟಿಕ್ಸ್‌ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ತಿದೆ. ಒಂದ್ಕಡೆ ಗುವಾಹಟಿಯಲ್ಲಿರೋ ಶಿಂಧೆ ಬಣದ ಸಂಖ್ಯೆ ಏರುತ್ತಲೇ ಇದೆ.. ಮತ್ತೊಂದೆಡೆ ಸರ್ಕಾರ ಉಳಿಸಿಕೊಳ್ಳಲು ಉದ್ಧವ್​ ಠಾಕ್ರೆ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ.. ಬಂಡಾಯವೆದ್ದಿರೋ ಶಿಂಧೆ ಮನಸು ಬದಲಿಸದಿದ್ದರೆ, ಉದ್ಧವ್‌ ಠಾಕ್ರೆ ರಾಜಕೀಯ ಯುಗಾಂತ್ಯವಾಗೋದ್ರಲ್ಲಿ ಅನುಮಾನವೇ ಇಲ್ಲ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ತಿದೆ. ಕಳೆದ ಐದು ದಿನಗಳಿಂದ ನಡೆಯುತ್ತಿರುವ ಹೈಡ್ರಾಮ ಮತ್ತಷ್ಟು ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಅಸ್ಸಾಂನ ಗುವಾಹಟಿಯಲ್ಲಿ ತಂಗಿರುವ ರೆಬೆಲ್‌ ಶಾಸಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.. ಏಕನಾಥ್‌ ಶಿಂಧೆ ನೇತೃತ್ವದಲ್ಲಿ ರೆಬೆಲ್‌ ಟೀಮ್​ನಲ್ಲಿ 44 ಶಾಸಕರಿದ್ದು, 37 ಶಿವಸೇನಾ ಶಾಸಕರು ಹಾಗೂ 7 ಪಕ್ಷೇತರ ಶಾಸಕರಿದ್ಧಾರೆ.. ಈ ಮೂಲಕ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರ್ಕಾರ ಪತನದಂಚಿಗೆ ತಲುಪಿದೆ.. ಈ ನಡುವೆ ಸರ್ಕಾರ ಉಳಿಸಿಕೊಳ್ಳಲು ತ್ರಿಪಕ್ಷಗಳು ಹರಸಾಹಸ ನಡೆಸುತ್ತಿದ್ರೆ.. ಶಿವಸೇನೆ ಪಕ್ಷದ ನಾಯಕತ್ವವೇ ಉದ್ಧವ್‌ ಠಾಕ್ರೆ ಅವರ ಕೈತಪ್ಪುವ ಸಾಧ್ಯತೆ ದಟ್ಟವಾಗಿ ಗೋಚರಿಸ್ತಿದೆ.

ಈ ನಡುವೆ ಬಂಡಾಯ ನಾಯಕ ಏಕನಾಥ್‍ ಸಿಂಧೆ, ತಮ್ಮನ್ನೇ ಶಾಸಕಾಂಗ ಪಕ್ಷದ ನಾಯಕ ಎಂದು ಪರಿಗಣಿಸುವಂತೆ ವಿಧಾನಸಭಾಧ್ಯಕ್ಷರಿಗೆ ಪತ್ರ ನೀಡಿದ್ದಾರೆ.. ಈ ನಡುವೆ ಶಿವಸೇನೆ ವಿಭಜನೆ ಖಚಿತವಾಗುತ್ತಿದ್ದು, ಮುಂದಿನ ಸವಾಲುಗಳನ್ನು ಎದುರಿಸಲು ಸಜ್ಜುಗೊಳ್ಳುವಂತೆ ಸಿಎಂ ಉದ್ಧವ್ ಠಾಕ್ರೆ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ.. ಆದರೆ ಇದಕ್ಕೆ ಜಗ್ಗದ ಬಂಡಾಯಗಾರರು ಶಾಸಕಾಂಗ ಪಕ್ಷದ ನಾಯಕನನ್ನೇ ಬದಲಾವಣೆ ಮಾಡಲು ಮುಂದಾಗಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ, ಸಿಎಂ ಉದ್ದವ್​ ಠಾಕ್ರೆ ಮತ್ತೊಂದು ಬಾವುಕ ವಿಡಿಯೋ ರಿಲೀಸ್​ ಮಾಡಿದ್ದಾರೆ.. ಅಧಿಕಾರಕ್ಕಾಗಿ ನಾನು ಯಾವತ್ತೂ ಆಸೆ ಪಟ್ಟಿಲ್ಲ.. ಮಹಾರಾಷ್ಟ್ರದ ವಿಕಾಸ ಮಾಡಬೇಕೆಂಬುದು ನನ್ನ ಆಸೆ..
ಬಾಳ್​ ಸಾಹೇಬ್ ಠಾಕ್ರೆ ಹೆಸರು ಹೇಳುತ್ತಿದ್ದಾರೆ.. ಆದರೆ ನಿಜವಾದ ನಿಷ್ಠೆ ಈಗ ತೋರಬೇಕು ಎಂದು ರೆಬೆಲ್ ನಾಯಕ ಏಕನಾಥ ಶಿಂಧೆಗೆ ತಿರುಗೇಟು ನೀಡಿದ್ದಾರೆ.

ಈ ಎರಡು ಪತ್ರಗಳು ಕಾನೂನು ಸಮರಕ್ಕೆ ನಾಂದಿ ಹಾಡಿವೆ. ಅನರ್ಹತೆಯ ಅಸ್ತ್ರಕ್ಕೆ ಜಗ್ಗದ ಶಿಂಧೆ, ತಮ್ಮ ಬಳಿ ಶಿವಸೇನೆಯ ಚಿನ್ಹೆಯಲ್ಲಿ ಆಯ್ಕೆಯಾದ 40 ಮಂದಿ ಶಾಸಕರಿದ್ದಾರೆ. ಪಕ್ಷದ 55 ಶಾಸಕರ ಪೈಕಿ ಮೂರನೇ ಎರಡು ಭಾಗದಷ್ಟು ಅಂದರೆ 38ಕ್ಕೂ ಹೆಚ್ಚು ಶಾಸಕರು ತಮ್ಮ ಬೆಂಬಲಕ್ಕಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.. ಇದಕ್ಕೆ ಪ್ರತಿಯಾಗಿ ಶಿವಸೇನೆಯ ವಕ್ತಾರ ಸಂಜಯ್ ರಾವತ್, ರಾಜಕೀಯ ಸಂದಿಗ್ಧತೆಯನ್ನು ನಾವು ಕಾನೂನು ಮತ್ತು ಅದರ ಹೊರಗೂ ಎದುರಿಸಲು ಸಿದ್ಧರಿದ್ದೇವೆ. ಅಗತ್ಯವೆಂದಾದರೆ ಶಿವಸೇನೆಯ ಸೈನಿಕರು ರಸ್ತೆಗಿಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಎನ್‌ಸಿಪಿ ನಾಯಕ ಶರದ್ ಪವಾರ್ ಅವರಿಗೆ ಕೇಂದ್ರ ಸಚಿವರೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಚಿವರು ಅಂತಹ ಬೆದರಿಕೆಗಳನ್ನು ಒಪ್ಪುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಅಘಾಡಿಯದು DNA ಮಿಸ್ ಮ್ಯಾಚ್ ಆಗಿದೆ.. ಅವರು ಇಷ್ಟು ದಿನ ಬದುಕಿದ್ದೇ ಪುಣ್ಯ ಎಂದು ಲೇವಡಿ ಮಾಡಿದ್ದಾರೆ..

ಮಹಾರಾಷ್ಟ್ರ ಸರ್ಕಾರ ಪತನದ ಅಂಚಿನಲ್ಲಿದೆ.. ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ 40ಕ್ಕೂ ಹೆಚ್ಚಿನ ಶಿವಸೇನಾ ಶಾಸಕರು, ಹೋಟೆಲ್​ನಲ್ಲೇ ಮೊಕ್ಕಾಂ ಹೂಡಿದ್ದಾರೆ. ಇದೆಲ್ಲವೂ ಬಿಜೆಪಿಯದೇ ಕೈವಾಡ ಎಂದು ಶಿವಸೇನಾ, ಕಾಂಗ್ರೆಸ್ ಸೇರಿ ಅನೇಕ ಪಕ್ಷಗಳು ಆರೋಪಿಸುತ್ತಿವೆ. ಈ ರಾಜಕೀಯ ಬೆಳವಣಿಗೆಗೂ, ತಮಗೂ ಯಾವ ಸಂಬಂಧವೂ ಇಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಆರೋಪ ನಿರಾಕರಿಸಿದ್ರೆ.. ನಾವು ವಿಶ್ವಾಶ ಮತಯಾಚನೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಸಂಜಯ್​ ರಾವತ್​ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ಮಹಾರಾಷ್ಟ್ರ ಪಾಲಿಟಿಕ್ಸ್‌ ಕ್ಲೈಮ್ಯಾಕ್ಸ್​ ಹಂತ ತಲುಪಿದ್ದು, ಉದ್ಧವ್​ ಠಾಕ್ರೆಗೆ ಶಾಕ್‌ ಕೊಟ್ಟು ಸರ್ಕಾರ ರಚನೆಗೆ ಏಕನಾಥ ಶಿಂಧೆ ರಣತಂತ್ರ ಹೆಣೆದಿದ್ದು, ರಾಜ್ಯಪಾಲರನ್ನ ಭೇಟಿಯಾಗುವ ಸಾಧ್ಯತೆಯಿದೆ.. ಪಕ್ಷದ ಶಾಸಕರ ವಿಶ್ವಾಸ ಗಳಿಸುವಲ್ಲಿ ವಿಫಲರಾಗಿರೋ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ರಾಜಕೀಯ ಯುಗಾಂತ್ಯ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಬ್ಯೂರೋ ರಿಪೋರ್ಟ್​, ಪವರ್ ಟಿವಿ

RELATED ARTICLES

Related Articles

TRENDING ARTICLES