Friday, November 22, 2024

ಜೂನಿಯರ್ ಠಾಕ್ರೆ ಮಾಡಿದ ಆ ತಪ್ಪೇ ಮಹಾಪತನಕ್ಕೆ ಕಾರಣ!

ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರು…ಮೀಸೆ ತಿರುವಿ ಮೆರೆದೋರೆಲ್ಲಾ ಮಣ್ಣಾದರು.. ಅಣ್ಣಾವ್ರು ಹಾಡಿರುವ ಈ ಹಾಡು ನೆನಪಿದೆ ತಾನೆ.. ಮಹಾರಾಷ್ಟ್ರದಲ್ಲಿ ಈಗ ಉದ್ಧವ್ ಠಾಕ್ರೆ ಗತಿಯೂ ಹೀಗೇ ಆಗಿದೆ. ಬಾಳಾ ಸಾಹೇಬ್ ಠಾಕ್ರೆ ಕಟ್ಟಿದ ಶಿವಸೇನೆ ಸಾಮ್ರಾಜ್ಯವನ್ನು ಅವರ ಮಗ ಉದ್ಧವ್ ಠಾಕ್ರೆ., ಮೊಮ್ಮಗ ಆದಿತ್ಯ ಠಾಕ್ರೆ ಹಾಳು ಮಾಡಿದ್ದಾರೆ.

ಮೊಘಲ್ ಸಾಮ್ರಾಜ್ಯದ ಅವನತಿ.. ವಿಜಯನಗರ ಸಾಮ್ರಾಜ್ಯದ ಅವನತಿ.. ಹೀಗೆ ವಿವಿಧ ಸಾಮ್ರಾಜ್ಯಗಳು ಅವನತಿಯಾಗಿದ್ದನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ. ಆದರೆ, ಸ್ವಾತಂತ್ರ್ಯಾನಂತರ ಹೀಗೆ ಸಾಮ್ರಾಜ್ಯವೊಂದು ಪತನವಾಗುತ್ತಿರುವುದನ್ನು ನೋಡುತ್ತಿರುವುದು ಇದೇ ಮೊದಲು. ಹೌದು ನಾವು ಇವತ್ತು ಮಾತನಾಡುತ್ತಿರುವುದು ಯಾವುದೋ ಚಕ್ರವರ್ತಿ, ಮಹಾರಾಜ ಆಳಿದ ಸಾಮ್ರಾಜ್ಯದ ಪತನದ ಕಥೆಯಲ್ಲ. ಬದಲಿಗೆ ಮಹತ್ವಾಕಾಂಕ್ಷೆಯಿಂದ ಕಟ್ಟಿದ ರಾಜಕೀಯ ಪಕ್ಷವೊಂದರ ಪತನದ ಬಗ್ಗೆ.

ಅದೊಂದು ಕಾಲವಿತ್ತು…ಶಿವಸೈನಿಕರ ನೆರಳು ಕಂಡರೂ ಸಾಕು.. ಹಿಂದೂ ವಿರೋಧಿಗಳು ಗಢ ಗಢ ನಡುಗುತ್ತಿದ್ದರು. ಇಡೀ ಮುಂಬೈಯನ್ನೇ ಆಳುತ್ತಿದ್ದ ಭೂಗತ ದೊರೆಗಳೂ ಸಹ ಶಿವಸೈನಿಕರ ಹೆಸರು ಕೇಳಿದ್ರೆ ಸಾಕು ಹುಲಿಯಂತೆ ಆಡುತ್ತಿದ್ದವರು ತಕ್ಷಣ ನಾಯಿ ಮರಿಗಳಂತೆ ಕುಯ್ ಗುಟ್ಟಿಕೊಂಡು ಗೂಡು ಸೇರಿಕೊಂಡು ಬಿಡುತ್ತಿದ್ದರು. ಮಾತೋಶ್ರೀಯಲ್ಲಿ ಕುಳಿತ ಹಿರಿ ಹುಲಿಯ ಒಂದು ಘರ್ಜನೆ ಸಾಕು.. ಇಡೀ ಮಹಾರಾಷ್ಟ್ರ ಅಲುಗಾಡಿ ಹೋಗುತ್ತಿತ್ತು. ಅಂತಹುದರಲ್ಲಿ ಈಗ ಅದೇ ಹುಲಿ ಸಾಮ್ರಾಜ್ಯ ಪತನದ ಹಾದಿಯಲ್ಲಿದೆ. ಅ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸುವುದರಲ್ಲಿ ತಾವೂ ಒಂದೊಂದು ಇಟ್ಟಿಗೆ ಹೊತ್ತಿದ್ದ ಶಿವಸೈನಿಕರು ತಮ್ಮ ಸಾಮ್ರಾಜ್ಯದ ಅಧಿಪತಿಯ ವಿರುದ್ದವೇ ತಿರುಗಿಬಿದ್ದಿದ್ದಾರೆ.

ಕ್ಷಣಿಕ ಸುಖದ ಆಸೆಗೆ ಬಿದ್ದು ಶಾಶ್ವತ ನೆಮ್ಮದಿ ಕಳೆದುಕೊಳ್ಳಬೇಡ ಎಂದು ಸಂಸ್ಕೃತದಲ್ಲಿ ಸುಭಾಷಿತವೊಂದಿದೆ. ಬಹುಷಃ ಈ ಸುಭಾಷಿತ ಈಗ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಸೂಕ್ತವಾಗಿಯೇ ಅನ್ವಯವಾಗುತ್ತದೆ. ಕೆಲವೇ ದಿನಗಳ ಕಾಲ ಸಿಗುವ ಅಧಿಕಾರದಾಸೆಗೆ ಬಿದ್ದು, ಉದ್ಧವ್ ಠಾಕ್ರೆ ಶಿವಸೇನೆ ಸಾಮ್ರಾಜ್ಯವನ್ನೇ ಕಳೆದುಕೊಳ್ಳುವ ಪರಿಸ್ಥಿತಿ ತಂದುಕೊಂಡಿದ್ದಾರೆ. ಉದ್ಧವ್ ಠಾಕ್ರೆ, ಶಿವಸೇನೆಯನ್ನು ಕಟ್ಟಿದವರೂ ಅಲ್ಲ,ಬೆಳೆಸಿದವರು ಮೊದಲೇ ಅಲ್ಲ. ಒಂದು ರೀತಿಯಲ್ಲಿ ಅಪ್ಪ ಸಂಪಾದನೆ ಮಾಡಿದ ಆಸ್ತಿಯನ್ನು ಅನುಭವಿಸುವ ಮಕ್ಕಳಂತೆ ಈ ಉದ್ದವ್ ಠಾಕ್ರೆ. ಯಾಕೆಂದ್ರೆ ಶಿವಸೇನೆಯನ್ನು ಕಟ್ಟಿದವರು, ಬೆಳೆಸಿದವರು ಭಾಳಾಸಾಹೇಬ್ ಠಾಕ್ರೆ.

ಭಾಳಾ ಸಾಹೇಬ್ ಠಾಕ್ರೆ, ಶಿವಸೇನೆ ಅನ್ನೋ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದೇ ಒಂದು ರೋಚಕ ಕಹಾನಿ.ಬಾಳಾ ಸಾಹೇಬ್ ಠಾಕ್ರೆಯವರ ತಂದೆ ಪ್ರಬೋಧನಕಾರ ಠಾಕ್ರೆ, ಮಹಾರಾಷ್ಟ್ರ ಏಕೀಕರಣ ಸಮಿತಿಯಲ್ಲಿ ಇದ್ದವರು. ಆಚಾರ್ಯ ಆತ್ರೆಯವರ ಜತೆಗೂಡಿ ಮಹಾರಾಷ್ಟ್ರ ಏಕೀಕರಣಕ್ಕೆ ಹೋರಾಡಿದವರು. ಹಾಗೆ ನೋಡಿದ್ರೆ, ಠಾಕ್ರೆ, ಕುಟುಂಬದವರು ಮೂಲ ಮರಾಠಿಗರೂ ಅಲ್ಲ, ಕ್ಷತ್ರಿಯ ಮರಾಠರು ಮೊದಲೇ ಅಲ್ಲ. ಮಹಾರಾಷ್ಟ್ರದಲ್ಲಿ ಬೆರೆಳಿಕೆಯಷ್ಟಿರಬಹುದಾದ ಕಾಯಸ್ಥ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಮಹಾರಾಷ್ಟ್ರದಲ್ಲಿ ಹಿಂದಿ ಮತ್ತು ಬಿಹಾರಿ ಪ್ರಾಭಲ್ಯ ಹೆಚ್ಚಾಗಿ,. ಮರಾಠಿ ಮಾನಸ್ ನ ಹಿತಕ್ಕೆ ಧಕ್ಕೆಯಾಯ್ತೋ ಆಗ ಎದ್ದ ಮರಾಠಿ ಉಳಿಸಿ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತವರು ಇದೇ ಬಾಳಾ ಸಾಹೇಬ್ ಠಾಕ್ರೆ. ಮರಾಠಿ ಭಾಷಿಗರ ಹಿತ ಕಾಯುವುದಕ್ಕೆ ಅವರು ಹುಟ್ಟುಹಾಕಿದ ಸಂಘಟನೆಯೇ ಶಿವಸೇನೆ. ಇದಕ್ಕೆ ಕೇವಲ ಪ್ರಾದೇಶಿಕತೆ ಮತ್ತು ಮರಾಠಿ ಭಾಷಾ ಹೋರಾಟ ಅಷ್ಟೇ ಸಾಕಾಗುವುದಿಲ್ಲ ಎನಿಸಿದಾಗ ಅದಕ್ಕೆ ಹಿಂದುತ್ವ ಸಿದ್ದಾಂತವನ್ನು ಜೋಡಿಸಿದ್ರು.

( ನಾನೊಬ್ಬ ಹಿಂದು.. ಹುಚ್ಚ ಹಿಂದೂ..ಹಿಂದುತ್ವದ ಹುಚ್ಚ ನಾನು..ನಮ್ಮನ್ನು ಹಿಟ್ಲರ್ ಗೆ ಸರ್ವಾದಿಕಾರಿಗಳಿಗೆ ಹೋಲಿಸುತ್ತೀರಿ, ಆದರೆ, ಅದೇ ಮುಸ್ಲೀಮರನ್ನು ಏಕೆ ಪ್ರಶ್ನಿಸುವುದಿಲ್ಲ.ವಾಸ್ತವದಲ್ಲಿ ಮುಸ್ಲೀಮರು ಹಿಂದೂಗಳ ಪ್ಯಾಂಟ್ ಎಳೆಯುತ್ತಿದ್ದಾರೆ ನೆನಪಿರಲಿ)

ಮರಾಠಿ ಪ್ರೇಮ ಹಾಗು ಖಡಕ್ ಹಿಂದುತ್ವ ವಾದ. ಇವೆರೆಡು ಕಾರಣಕ್ಕೆ ಬಾಳಾಸಾಹೇಬ್ ಠಾಕ್ರೆ, ಮಹರಾಷ್ಟ್ರದ ಜನ ಸಮುದಾಯದಲ್ಲಿ ಜನಪ್ರಿಯರಾದರು. ಜನ ಅವರನ್ನು ತಮ್ಮ ನಾಯಕ ಅಂತಾ ಒಪ್ಪಿಕೊಂಡರು, ಮೆಚ್ಚಿದ್ರು, ಆರಾಧನೆ ಮಾಡಿದ್ರು. ಮರಾಠಿ ಮತ್ತು ಹಿಂದುತ್ವದ ವಿಷಯದಲ್ಲಿ ಬಾಳಾ ಸಾಹೇಬ್ ಠಾಕ್ರೆ ಎಂದೂ ರಾಜಿ ಮಾಡಿಕೊಂಡವರಲ್ಲ. ಹಾ. ಇದರ ಜತೆಗೆ ಇನ್ನೊಂದು ವಿಷಯವೂ ಇದೆ. ಮಹಾರಾಷ್ಟ್ರದ ಹಿಂದೂಗಳಲ್ಲಿ ಆ ಪರಿಯ ಛಾಪು ಮೂಡಿಸಿದ್ದರೂ ಬಾಳಾಸಾಹೇಬ್ ಠಾಕ್ರೆ ಎಂದೂ ನೇರವಾಗಿ ಅಧಿಕಾರ ಹಿಡಿದು ಆಡಳಿತ ನಡೆಸಲಿಲ್ಲ. ಅವರು ಎಂದೂ ಗಾಡ್ ಆಗಲಿಲ್ಲ ಬದಲಿಗೆ ಗಾಡ್ ಫಾದರ್ ಆಗಿಯೂ ಉಳಿದಿದ್ದರು. ಮರಾಠಿ ಪತ್ರಕರ್ತರು, ಶಿವಸೈನಿಕರು ಎಲ್ಲರೂ ಬಹಳಷ್ಟು ಬಾರಿ ನೀವೇಕೆ ಮುಖ್ಯಮಂತ್ರಿಯಾಗಬಾರದು ಎಂದು ಬಾಳಾಸಾಹೇಬ್ ಠಾಕ್ರೆಯವರನ್ನು ಕೇಳಿದ್ದಾರೆ. ಆದರೆ, ಆಗೆಲ್ಲಾ ಬಾಳಾಸಾಹೇಬ್ ಠಾಕ್ರೆ ಕೊಡುತ್ತಿದ್ದ ಉತ್ತರ ಒಂದೇ ರಿಮೋಟ್ ಕಂಟ್ರೋಲ್ ನಲ್ಲಿ ಇರುವ ಮಜಾ ಆ ಖುರ್ಚಿಯಲ್ಲಿ ಇಲ್ಲ ಅಂತಾ. ಅಷ್ಟೇ ಅಲ್ಲ,ಅಧಿಕಾರ ಇಲ್ಲದೇ ಇದ್ದರೂ ಚಿಂತೆ ಇಲ್ಲ ಹಿಂದುತ್ವದ ವಿಷಯದಲ್ಲಿ ಎಂದೂ ರಾಜಿ ಇಲ್ಲ ಅಂತಾ ಬಾಳಾ ಸಾಹೇಬ್ ಠಾಕ್ರೆ ಹೇಳುತ್ತಿದ್ದರು.

(ಅಧಿಕಾರ ಹಿಡಿಯುವುದು ಮುಖ್ಯ. ಯಾವ ಪಕ್ಷಕ್ಕೆ ಬಹುಮತ ಬರುತ್ತದೋ ಆ ಪಕ್ಷ ಅಧಿಕಾರ ನಡೆಸುತ್ತದೆ. ಅದು ಬಿಜೆಪಿಯಾಗಲಿ, ಶಿವಸೇನೆಯಾಗಲಿ ವೆತ್ಯಾಸವಿಲ್ಲ.ಬಹುಮತವಿಲ್ಲದೇ ಇದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನೆಯಾಗಲಿ, ಬಿಜೆಪಿಯಾಗಲಿ ಆಸೆ ಪಡುವುದಿಲ್ಲ.ಎರಡೂ ಪಕ್ಷಗಳ ಜತೆ ಹೊಂದಾಣಿಕೆ ಚೆನ್ನಾಗಿದೆ.)
ಸಾಕಷ್ಟು ಬದ್ಧತೆಯುಳ್ಳ ತಂದೆಯ ಮಗ ಸಿಎಂ ಉದ್ಧವ್ ಠಾಕ್ರೆ. ಆದ್ರೆ ಅಧಿಕಾರದ ಆಸೆಯಿಂದ ವಂಶಪಾರಂಪರ್ಯವಾಗಿ ಸುಲಭವಾಗಿ ಬಂದಿದ್ದ ಶಿವಸೇನೆ ಸಾಮ್ರಾಜ್ಯವನ್ನು, ತಂದೆ ಅನುಸರಿಸಿಕೊಂಡು ಬಂದಿದ್ದ ಸಿದ್ದಾಂತವನ್ನೇ ಬಲಿಕೊಟ್ಟುಬಿಟ್ಟ. ವಿರೋಧಿ ಸಿದ್ದಾಂತದ ಕಾಂಗ್ರೆಸ್ ಮತ್ತು NCP ಜತೆ ಕೈ ಜೋಡಿಸಿಬಿಟ್ಟ. ಇದೇ..ಇದೇ.. ಉದ್ಧವ್ ಠಾಕ್ರೆ ಮಾಡಿದ ಅತಿದೊಡ್ಡ ತಪ್ಪು. ಆ ತಪ್ಪಿಗಾಗಿಯೇ ಈಗ ಉದ್ದವ್ ಠಾಕ್ರೆ ಖುರ್ಚಿ ಮತ್ತು ಪಕ್ಷ ಎರಡನ್ನೂ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.

ಯಾವುದೇ ಪಕ್ಷ ಅಥವಾ ಸಂಘಟನೆಯನ್ನು ಕಟ್ಟಿ ಬೆಳೆಸೋರು ಕೆಳಹಂತದ ಕಾರ್ಯಕರ್ತರು. ಆದರೆ, ಅದೇ ಪಕ್ಷದ ಹಿರಿಯರು ಅನ್ನಿಸಿಕೊಂಡವರು ತಮ್ಮ ಸ್ವಾರ್ಥಕ್ಕಾಗಿ ವಿರೋಧಿ ಸಿದ್ದಾಂತದ ಮತ್ತೊಂದು ಪಕ್ಷದ ಜತೆ ಕೈ ಜೋಡಿಸಿ ಮೈತ್ರಿ ಮಾಡಿಕೊಂಡರೆ ಕೆಳಹಂತದ ಕಾರ್ಯಕರ್ತರಿಗೆ ಆಘಾತವಾಗುತ್ತದೆ. ಯಾರ ವಿರುದ್ದ ಜೀವಮಾನವಿಡಿ ಹೋರಾಟ ಮಾಡುತ್ತ ಬಂದಿದ್ದರೋ ಅವರ ಜತೆಯೇ ದೋಸ್ತಿ ಮಾಡಿಕೊಂಡು, ಹೊಂದಾಣಿಕೆ ಮಾಡಿಕೊಳ್ಳಬೇಕಾದ ಸನ್ನಿವೇಶ ಬಂದಿದ್ದನ್ನ ಅರಗಿಸಿಕೊಳ್ಳಲು ಆಗಲ್ಲ. ಹಾಗಾಗಿಯೇ ಪಕ್ಷದ ನಾಯಕತ್ವದ ವಿರುದ್ದವೇ ಅನಿವಾರ್ಯವಾಗಿ ಬಂಡೇಳುತ್ತಾರೆ. ತಿರುಗಿಬೀಳುತ್ತಾರೆ. ಈಗ ಶಿವಸೇನೆ ವಿಷಯದಲ್ಲಿ ಆಗಿರೋದು ಇದೇ.

ದೇವೇಗೌಡ, ಜಗನ್ ರೆಡ್ಡಿ, ಶರದ್ ಪವಾರ್ ರಂತಹಾ ಜಾತಿ ಓಟ್ ಬ್ಯಾಂಕ್ ಇರುವ ಪ್ರಾದೇಶಿಕ ಪಕ್ಷಗಳು ಯಾರ ಜತೆ ಯಾವಾಗ ಕೈ ಜೋಡಿಸಿದರೂ ಸಮಸ್ಯೆ ಇರೋದಿಲ್ಲ. ಅವರ ಓಬ್ ಬ್ಯಾಂಕ್ ಆಗಿರುವ ಜಾತಿಯ ಮತದಾರರು ಅವರ ಕೈ ಬಿಡೋದಿಲ್ಲ. ಎಲ್ಲಿಯವರೆಗೆ ಅವರು ತಮ್ಮ ಆ ಜಾತಿಗಳವರ ಹಿತ ಕಾಯುತ್ತಿರುತ್ತಾರೋ ಆ ಜಾತಿ, ಜನಾಂಗದವರು ಅಲ್ಲಿಯವರಗೆ ಆ ನಾಯಕರ ಜತೆಗೆ ಇರುತ್ತಾರೆ. ಆದರೆ, ಒಂದು ನಿರ್ದಿಷ್ಟ ಸಿದ್ದಾಂತದ ಆಧಾರದ ಮೇಲೆ ಕೇಡರ್ ಗಳನ್ನು ಬೆಳೆಸಿದ ಓಟ್ ಬ್ಯಾಂಕ್ ಇರುವ ಪಕ್ಷಗಳು ಹೇಳಿದ ಸಿದ್ದಾಂತಕ್ಕೆ ಪೂರ್ತಿ ವಿರುದ್ದವಾಗಿ ಹೋದರೆ, ಮತದಾರರು ಮತ್ತು ಕಾರ್ಯಕರ್ತರು ಇಬ್ಬರೂ ಒಪ್ಪುವುದಿಲ್ಲ. ಒಂದು ಸಿದ್ದಾಂತದ ಆಧಾರದ ಕಟ್ಟಿದ ಪಕ್ಷ ಪೂರ್ತಿ ವಿರುದ್ಧ ದಿಕ್ಕಿಗೆ ಹೋದರೆ, ಆ ಪಕ್ಷದ ತಳಮಟ್ಟದ ಕೇಡರ್ ಸೆಟೆದು ನಿಲ್ಲುತ್ತದೆ. ಆಗ ಎಷ್ಟೇ ಪ್ರಭಲ ಕುಟುಂಬದ ನಾಯಕ ಇದ್ದರೂ ಆತ ಏಕಾಂಗಿಯಾಗುತ್ತಾನೆ.

ಬಾಳಾ ಸಾಹೇಬ್ ಠಾಕ್ರೆ, ಹಾಗೂ ಶರದ್ ಪವಾರ್ ಒಳ್ಳೆಯ ಸ್ನೇಹಿತರಾಗಿದ್ರು. ಇಬ್ಬರೂ ಅದೆಷ್ಟೋ ಸಂಜೆಗಳಲ್ಲಿ ಒಟ್ಟಿಗೆ ಕುಳಿತು ಪಾನಗೋಷ್ಟಿ ನಡೆಸಿದ್ದೂ ಇದೆ. ಆದರೆ, ರಾಜಕೀಯ ಮತ್ತು ಸಿದ್ದಾಂತದ ವಿಷಯ ಬಂದಾಗ ಮಾತ್ರ ಬಾಳಸಾಹೇಬ್ ಠಾಕ್ರೆ, ಶರದ್ ಪವಾರ್ ಜತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ನಿರಾಕರಿಸಿದ್ದರು. ಒಂದು ಹಂತದಲ್ಲಂತೂ ಠಾಕ್ರೆ, ಶರದ್ ಪವಾರ್ ರನ್ನು ಸ್ಕೌಂಡ್ರಲ್ ಎಂದು ಬಹಿರಂಗವಾಗಿ ನಿಂದಿಸಿದ್ದು ದೊಡ್ಡ ವಿವಾದವಾಗಿತ್ತು.

( ಹೌದು ರಾಜಕೀಯ ಸ್ಕೌಂಡ್ರಲ್ ಗಳ ಸಾಮ್ರಾಜ್ಯ. ಅದು ನನಗೂ ಚೆನ್ನಾಗಿ ಗೊತ್ತಿದೆ. ಶರದ್ ಪವಾರ್ ಸಹ ಅಂತಹುದ್ದೇ ಒಬ್ಬ ರಾಜಕೀಯದ ಸ್ಕೌಂಡ್ರಲ್. ಯಾವ ಕಾರಣಕ್ಕೂ ನಾನು ಅವರ ಎನ್ ಸಿಪಿ ಜತೆ ಗೆ ಹೋಗುವುದಿಲ್ಲ. ಅವರೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡುವ ಅವಶ್ಯಕತೆಯೂ ನನಗೆ ಇಲ್ಲ)

ಅಂತಹುದರಲ್ಲಿ ತಂದೆಯ ಸೈದ್ದಾಂತಿಕ ಬದ್ದತೆ ಗೊತ್ತಿದ್ದರೂ ಕೂಡ ಉದ್ಧವ್ ಠಾಕ್ರೆ,. ಅಧಿಕಾರದಾಸೆಗೆ ಬಿದ್ದು ದಾರಿ ತಪ್ಪಿದ ಮಗನಾದರು. ಕಾಂಗ್ರೆಸ್ ನ್ನು ಅಪ್ಪಿಕೊಂಡರು. ಮೋದಿ ಉಚ್ಛ್ರಾಯದ ಪರಿಸ್ಥಿತಿಗೆ ತಲುಪಿದ ನಂತರ ಬಿಜೆಪಿ ನಾಯಕರು ಠಾಕ್ರೆ ಕುಟುಂಬದ ಜತೆ ಸರಿಯಾಗಿ ನಡೆದುಕೊಳ್ಳಲಿಲ್ಲ ಎಂಬುದು ನಿಜವಾದರೂ ಕೂಡ, ಶಿವಸೇನೆ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದು ತಳಮಟ್ಟದ ಶಿವಸೈನಿಕರಿಗೆ ಒಪ್ಪಿಗೆ ಇರಲಿಲ್ಲ. 2019 ರಲ್ಲಿ ಶಿವಸೇನೆ ಗೆದ್ದ 56 ಕ್ಷೇತ್ರಗಳಲ್ಲಿ ಶಿವಸೇನೆಗೆ ನೇರ ಹೋರಾಟ ಇದ್ದಿದ್ದೇ ಕಾಂಗ್ರೆಸ್ ಮತ್ತು ಎನ್ ಸಿಪಿ ಜತೆಗೆ. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ವಿರುದ್ದ ಆ ಪರಿಯಲ್ಲಿ ಶರಂಪರ ಕಿತ್ತಾಡಿ, ಕೇಸ್ ಗಳನ್ನು ಹಾಕಿಸಿಕೊಂಡು ಹೋರಾಟ ನಡೆಸಿದ್ರೆ, ಗೆದ್ದ ತಕ್ಷಣ, ಉದ್ಧವ್ ಠಾಕ್ರೆ ನೇರವಾಗಿ ಹೋಗಿ ಶರದ್ ಪವಾರ್ ಮತ್ತು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು, ಮುಖ್ಯಮಂತ್ರಿ ಖುರ್ಚಿ ಮೇಲೆ ಕೂತು ಬಿಟ್ಟರೆ, ತಳಮಟ್ಟದ ಶಿವಸೈನಿಕರು ಹೇಗೆ ತಾನೆ ಅದನ್ನು ಅರಗಿಸಿಕೊಳ್ಳುತ್ತಾರೆ.

ಅಘಾಡಿ ಸರ್ಕಾರ ರಚನೆ ಮಾಡಿ, ಮುಖ್ಯಮಂತ್ರಿಯಾದ ಮೇಲಾದರೂ ಉದ್ಧವ್ ಠಾಕ್ರೆ, ಶಿವಸೈನಿಕರನ್ನು, ಶಿವಸೇನೆಯ ಶಾಸಕರು ಮತ್ತು ಕೆಳಹಂತದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕೆಲಸ ಮಾಡಿದ್ರಾ ಅಂದ್ರೆ ಅದೂ ಇಲ್ಲ. ಉದ್ಧವ್ ಠಾಕ್ರೆ, ಮುಖ್ಯಮಂತ್ರಿಯಾದ ಮೇಲೆ ಮೊದಲು ಕರೊನಾ, ಆ ಮೇಲೆ ಬೆನ್ನು ನೋವಿನ ನೆಪ. ಯಾರನ್ನೂ ಹೆಚ್ಚಾಗಿ ಭೇಟಿ ಮಾಡುತ್ತಿರಲಿಲ್ಲ. ಏಕನಾಥ ಶಿಂಧೆ,ರಾಮದಾಸ್ ಕದಂರಂತಹಾ ಹಿರಿಯ ನಾಯಕರೂ ಕೂಡ ಏನಾದರೂ ಕೆಲಸಗಳಿದ್ದರೆ, ಉದ್ಧವ್ ಠಾಕ್ರೆ ಭೇಟಿಯೇ ಆಗುತ್ತಿರಲಿಲ್ಲ. ಅವರು ಮೊದಲು ಹೋಗಿ ಆದಿತ್ಯ ಠಾಕ್ರೆ ಬಳಿ ನಿಲ್ಲಬೇಕಾಗಿತ್ತು. ಮುಖ್ಯಮಂತ್ರಿ ಭೇಟಿಗೆ ಸಮಯ ಕೇಳಿದ್ರೆ ತಿಂಗಳುಗಟ್ಟಲೆ ಕಾದರೂ ಸಮಯ ಕೊಡುತ್ತಿರಲಿಲ್ಲ. ಯಾವುದೇ ಇಲಾಖೆಯ ಫೈಲ್ ಆದರೂ ಮೊದಲು ಆದಿತ್ಯ ಠಾಕ್ರೆ ಟೀಮ್ ಅದನ್ನು ನೋಡಿದ ಮೇಲೆಯೇ ಅದು ಮುಖ್ಯಮಂತ್ರಿ ಸಹಿಗೆ ಹೋಗುತ್ತಿದುದು, ಮೂಲಗಳ ಹೇಳುವ ಪ್ರಕಾರ, ಮಹಾವಿಕಾಸ ಅಘಾಡಿ ಸರ್ಕಾರದ ಆಡಳಿತ ನಡೆಸುತ್ತಿದುದು ಉದ್ಧವ್ ಠಾಕ್ರೆ ಅಲ್ಲ, ಬದಲಿಗೆ ಆದಿತ್ಯ ಠಾಕ್ರೆ ಮತ್ತು ಸಂಜಯ ರಾವತ್.

(ಬಾಳಾ ಸಾಹೇಬ್ ಠಾಕ್ರೆಯವರ ವಿಡಿಯೋ ಏಕೆ ತೋರಿಸುತ್ತೀರಿ. ನೀವು ಯಾವ ಹಿಂದುತ್ವ ಶಾಲೆಯಲ್ಲಿ ಓದಿದ್ದಿರೋ ಆ ಹಿಂದುತ್ವ ಶಾಲೆಯಲ್ಲಿ ನಾವು ಮೊದಲೇ ಡಿಗ್ರಿ ಪಡೆದುಕೊಂಡಿದ್ದೇವೆ. ಬಾಳಾ ಸಾಹೇಬ್ ಠಾಕ್ರೆ, ಮತ್ತು ವೀರ ಸಾವರ್ಕರ್ ಇವರಿಬ್ಬರೇ, ಇಡೀ ದೇಶಕ್ಕೆ ಹಿಂದುತ್ವವನ್ನು ಹೇಳಿಕೊಟ್ಟಿದ್ದಾರೆ ಕಲಿಸಿದ್ದಾರೆ. ನಾವು ಪ್ರತಿಪಾದಿಸುವ ಹಿಂದುತ್ವವನೇ ಮೂಲ ಹಿಂದುತ್ವ ಸಿದ್ದಾಂತ. ಅದರ ಬಗ್ಗೆ ನಾವು ಬೇರೆಯವರಿಂದ ಕಲಿಯುವುದು ಬೇಕಾಗಿಲ್ಲ)

ಈಗಲೂ ಅಷ್ಟೇ.. 41 ಶಾಸಕರು 10 ಸಂಸದರು ಬಂಡಾಯ ಎದ್ದು ಹೊರನಡೆದ ಮೇಲೂ ಸಹ , ಬಂಡಾಯ ಶಾಸಕರನ್ನು ಸಮಾಧಾನ ಪಡಿಸುವ , ಅವರೊಂದಿಗೆ ನೇರವಾಗಿ ಮಾತುಕತೆ ನಡೆಸುವ ಕಷ್ವವನ್ನು ಉದ್ಧವ್ ಠಾಕ್ರೆ ತೆಗೆದುಕೊಳ್ಳುತ್ತಲೇ ಇಲ್ಲ. ಉದ್ಧವ್ ಠಾಕ್ರೆ ಆಡಬೇಕಾದ ಮಾತನ್ನೆಲ್ಲಾ ಸಂಜಯ್ ರಾವತ್ ಆಡುತ್ತಿದ್ದಾರೆ. ನೀವು ಬಂಡಾಯ ಬಿಟ್ಟು ವಾಪಸ್,. ಮುಂಬೈಗೆ ಬನ್ನಿ. ಬೇಕಾದ್ರೆ ನಾವು ಕಾಂಗ್ರೆಸ್ ಜತೆ ಸಖ್ಯ ಕಡಿದುಕೊಳ್ಳೋದಕ್ಕೆ ಸಿದ್ದವಿದ್ದೇವೆ ಅಂತಾ ಹೇಳಿದ್ದಾರೆ. ಈ ಮಾತನ್ನು ಹೇಳಬೇಕಾಗಿದ್ದು ಉದ್ಧವ್ ಠಾಕ್ರೆ, ಆದರೆ, ಹೇಳಿದ್ದು ಸಂಜಯ್ ರಾವತ್.. ಹಾಗಾಗಿ ಸಂಜಯ್ ರಾವತ್ ಮಾತಿಗೆ ಬಂಡಾಯ ಶಾಸಕರು ಬೆಲೆ ಕೊಡೋದಕ್ಕೆ ಸಾಧ್ಯವೇ.. ಬಂಡಾಯ ಶಾಸಕರನ್ನು ಮನವೊಲಿಸುವ ಬದಲಾಗಿ, ಅವರ ಸಂಖ್ಯೆ ಹೆಚ್ಚಿರುವಾಗ, ಅವರನ್ನು ಉಚ್ಛಾಟನೆ ಮಾಡುತ್ತೇವೆ ಅಂತಾ ಬೆದರಿಸಿದ್ರೆ, ಅದನ್ನು ಕೇಳಿ ಹೆದರಿಕೊಂಡು ಓಡಿ ಬರೋದಕ್ಕೆ ಬಂಡಾಯ ಶಾಸಕರೇನು ಪ್ರೈಮರಿ ಸ್ಕೂಲ್ ಮಕ್ಕಳಲ್ಲ.

(ಶಿವಸೇನೆಯ 40 ಶಾಸಕರು ಇಲ್ಲಿ ಉಪಸ್ಥಿತರಿದ್ದಾರೆ. ನಾವೆಲ್ಲರೂ ಬಾಳಾ ಸಾಹೇಬ್ ಠಾಕ್ರೆಯವರ ಹಿಂದುತ್ವ ವನ್ನು ಮುಂದೆ ತೆಗೆದುಕೊಂಡು ಹೋಗುತ್ತೇವೆ. ನಮಗೆ ಈಗ ಯಾರ ಕರುಣೆಯೂ ಬೇಕಾಗಿಲ್ಲ. ನಮ್ಮದು ಬಾಳಾಸಾಹೇಬ್ ಠಾಕ್ರೆಯವರ ಹಿಂದುತ್ವ. ಆ ಹಿಂದುತ್ವ ಪಾಲನೆಯೇ ನಮ್ಮ ಗುರಿ. ಅದನ್ನೇ ಪಾಲಿಸುತ್ತೇವೆ )
ಬಾಳಾ ಸಾಹೇಬ್ ಠಾಕ್ರೆ, ನಿಜವಾಗಲೂ ವಿಚಲಿತರಾಗಿದ್ದು ರಾಜ್ ಠಾಕ್ರೆ ಬಂಡಾಯದ ಸಮಯದಲ್ಲಿ. ಬಾಳಾ ಸಾಹೇಬ್ ಠಾಕ್ರೆಯವರ ಸಹೋದರನ ಮಗ ರಾಜ್ ಠಾಕ್ರೆ. ರಾಜ್ ಠಾಕ್ರೆಯನ್ನು ತಮ್ಮ ಉತ್ತರಾಧಿಕಾರಿ ಅಂತಲೇ ಬಾಳಾ ಸಾಹೇಬ್ ಠಾಕ್ರೆ ಭಾವಿಸಿಕೊಂಡಿದ್ದರು. ಆದರೆ, 2006 ರಲ್ಲಿ ರಾಜ್ ಠಾಕ್ರೆ, ಉದ್ಧವ್ ಠಾಕ್ರೆ ಜತೆ ಜಗಳವಾಡಿಕೊಂಡು, ಶಿವಸೇನೆ ಮಾತ್ರವಲ್ಲ, ಮಾತೋಶ್ರೀ ನಿವಾಸವನ್ನೂ ಬಿಟ್ಟು ಆಚೆ ಹೋದರು. ತಮ್ಮದೇ ನವ ನಿರ್ಮಾಣ ಸೇನೆಯನ್ನು ಕಟ್ಟಿಕೊಂಡರು. ಆಗ ಮಾತ್ರ ಬಾಳಾ ಠಾಕ್ರೆ ಘಾಸಿಗೊಂಡಿದ್ದರು. ಬಹುಷಃ ಅದೇ ಮಾನಸಿಕ ವ್ಯಥೆಯಲ್ಲೇ ಬಾಳಾ ಠಾಕ್ರೆ ಕೊನೆಯುಸಿರೆಳೆದ್ರು.

ಈಗ ಏಕನಾಥ ಶಿಂದೆ ಅಂಡ್ ಟೀಮ್ ನ ಬಂಡಾಯದ ಹಿಂದೆ ಇರೋದು ಬಿಜೆಪಿ ಮತ್ತು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅನ್ನೋದು ಎಲ್ಲರಿಗೂ ಗೊತ್ತಿರುವ ರಹಸ್ಯ. ಮಹಾರಾಷ್ಟ್ರ ದ ಅಘಾಡಿ ಸರ್ಕಾರದ ಅವಧಿ ಇನ್ನು ಬಾಕಿ ಇರೋದು ಕೇವಲ ಎರಡೂವರೆ ವರ್ಷ ಮಾತ್ರ. ಈ ಹಂತದಲ್ಲಿ ಸರ್ಕಾರವನ್ನು ಉರುಳಿಸಿ, ತಾನು ಅಧಿಕಾರ ಹಿಡಿಯುವುದರಿಂದ ಬಿಜೆಪಿಗೆ ಆಗುವ ಲಾಭವಾದರೂ ಏನು ? ಅಲ್ಲೇ ಇರೋದು ರಹಸ್ಯ.. ಇದೇ 2022 ರಲ್ಲಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಇದೆ. ಸಹಜವಾಗಿಯೇ ಅಧಿಕಾರ ಇದ್ದರೆ, ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಗೆಲ್ಲೋದು ಬಿಜೆಪಿಗೆ ಸುಲಭ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹೋದರೆ, ಠಾಕ್ರೆ ಕುಟುಂಬದ ಅಸ್ತಿತ್ವವೇ ಮುಗಿದು ಹೋಗುತ್ತದೆ. ಆಗ ಮರಾಠಿ ಮತ್ತು ಹಿಂದುತ್ವವನ್ನು ಒಪ್ಪಿಕೊಳ್ಳುವ ಮತದಾರರು ಶಿವಸೇನೆಯಿಂದ ಬಿಜೆಪಿ ಕಡೆಗೆ ವಾಲುತ್ತಾರೆ. ಮುಂದೆ ಇದು ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲೂ ನೆರವಾಗುತ್ತದೆ ಅನ್ನೋದು ಬಿಜೆಪಿ ಲೆಕ್ಕಾಚಾರ.

ಸಿದ್ದಾಂತದ ಜತೆ ಎಂದೂ ರಾಜಿ ಮಾಡಿಕೊಳ್ಳದ ಕಾರಣದಿಂದಲೇ ಬಾಳಾ ಸಾಹೇಬ್ ಠಾಕ್ರೆಯನ್ನು ಶಿವಸೈನಿಕರು ಮತ್ತು ಮತದಾರರು ಎಂದೂ ಬಿಟ್ಟುಕೊಟ್ಟಿರಲಿಲ್ಲ.ಅಧಿಕಾರದಿಂದ ದೂರ ಇದ್ದ ಬಾಳಾಸಾಹೇಬ್ ಠಾಕ್ರೆ ಸಿದ್ದಾಂತದ ಜತೆ ರಾಜಿ ಮಾಡಿಕೊಂಡಿರಲಿಲ್ಲ. ಆದರೆ ಈಗ ಅವರ ಪುತ್ರ ಉದ್ಧವ್ ಠಾಕ್ರೆ, ಅಧಿಕಾರದ ಆಸೆಗೆ, ಸಿದ್ದಾಂತದ ಜತೆ ರಾಜಿ ಮಾಡಿಕೊಂಡು, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡರು. ಅದಕ್ಕಾಗಿಯೇ ಶಿವಸೇನೆಯ ಇತಿಹಾಸದಲ್ಲಿಯೇ ಅತಿದೊಡ್ಡ ಬಂಡಾಯ ನಡೆದಿದೆ.

RELATED ARTICLES

Related Articles

TRENDING ARTICLES