ತುಮಕೂರು : ಜಿಲ್ಲೆಯ ಗಡಿಭಾಗದ ತಾಲೂಕು ಪಾವಗಡದಲ್ಲಿ ಖಾಸಗಿ ಬಸ್ ಅಪಘಾತ ದುರಂತ ನಡೆದು ಇನ್ನು ಮೂರು ತಿಂಗಳು ಕಳೆದಿಲ್ಲ, ಈಗಲೂ ತಾಲೂಕಿನಲ್ಲಿ ಬಸ್ ಸಮಸ್ಯೆ ಬಗೆಹರಿದಿಲ್ಲ ಎಂಬುದು ಕಂಡು ಬರುತ್ತಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ, ಬಿ.ಕೆ.ಹಳ್ಳಿ, ಬೂದಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಈಗಲು ಬಸ್ ಸಮಸ್ಯೆ ಬಗೆಹರಿದಿಲ್ಲ. ಸಾರಿಗೆ ಇಲಾಖೆಯ ಕೆಎಸ್ಆರ್ ಟಿ ಸಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದ್ದು, ಡೋರ್‌ಗಳಲ್ಲಿ ಜೋತಾಡಿಕೊಂಡು, ಸರ್ಕಸ್ ಮಾಡುತ್ತಾ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತ ಕೆ.ಎಸ್.ಆರ್.ಟಿಸಿ ಬಸ್ ಡಿಪೋ ಮ್ಯಾನೇಜರ್ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಬಸ್ ನಲ್ಲಿ ವಿದ್ಯಾರ್ಥಿಗಳು ತಾವೆ ಸೆಲ್ಫೀ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು, ಜೊತೆಗೆ ಬಸ್‌ಗಳನ್ನು ತಡೆದು ಪ್ರತಿಭಟಿಸಿದ್ದಾರೆ. ಇದರಿಂದ ಕೆಲಕಾಲ ಪಾವಗಡ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾರಿಗೆ ಬಸ್ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದ ಸಾರಿಗೆ ಸಚಿವರು ಒಮ್ಮೆ ಇತ್ತ ಗಮನ ಹರಿಸಬೇಕಿದೆ.