Sunday, November 24, 2024

ಕೃತಕ ನೆರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕಿ ರೂಪಾಲಿ ನಾಯ್ಕ

ಕಾರವಾರ : ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಚೆಂಡಿಯಾ, ಅರ್ಗಾ ಮೊದಲಾದ ಕಡೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪಡೆದ ಐಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ಪ್ರತಿವರ್ಷ ಕೃತಕ ಜಲಾವೃತ ಉಂಟಾಗುತ್ತಿದ್ದು, ಈ ಬಗ್ಗೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಳೆಗಾಲದಲ್ಲಿ ಕೃತಕ ಜಲಾವೃತವಾಗಿ ಜನತೆಗೆ ತೊಂದರೆಯಾಗುವುದನ್ನು ಮನಗಂಡು ಶಾಸಕಿ ರೂಪಾಲಿ ನಾಯ್ಕ ಅವರು ಖುದ್ದು ಘಟನಾ ಸ್ಥಳಕ್ಕೆ ತೆರಳಿ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಸರಾಗವಾಗಿ ನೀರು ಹರಿದುಹೋಗುವಂತೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ.

ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರ್ಗಾ, ಚೆಂಡಿಯಾ ಗ್ರಾಮದ ಸ್ಥಳಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೋಗವಿರ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಮುಂದಾಲೋಚನೆ ಇಲ್ಲದೆ ವಿವಿಧ ಕಾಮಗಾರಿಗಳಿಂದ ಗುಡ್ಡದಿಂದ ಹರಿದುಬರುವ ನೀರು ಸರಾಗವಾಗಿ ಸಮುದ್ರಕ್ಕೆ ಹರಿದು ಹೋಗದಂತಾಗಿದೆ. ಇದರಿಂದ ಹೆದ್ದಾರಿ ಅಕ್ಕಪಕ್ಕ ಜನ್ರು ಪ್ರತಿ ಮಳೆಗಾಲದಲ್ಲೂ ತೊಂದರೆಗೊಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸರಾಗವಾಗಿ ನೀರು ಸಮುದ್ರಕ್ಕೆ ಹರಿದುಹೋಗಬೇಕು. ನಿಮ್ಮ ಕಾಮಗಾರಿಗಳಿಂದ ಜನತೆ ಯಾಕೆ ತೊಂದರೆ ಅನುಭವಿಸಬೇಕು. ಸ್ಥಳೀಯರಿಗೆ ತೊಂದರೆ ಆಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕರು ಕೆಂಡಾಮಂಡಲರಾದರು.

ಪ್ರತಿ ಮಳೆಗಾಲದಲ್ಲೂ ಜನತೆ ತೊಂದರೆ ಅನುಭವಿಸಬೇಕು ಅಂದರೆ ಏನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕಿ ರೂಪಾಲಿ ನಾಯ್ಕ ನಿರಾಶ್ರಿತರು ಇಲ್ಲಿ ಬಂದು ಮನೆ ಕಟ್ಟಿಕೊಂಡಿದ್ದಾರೆ. ಅವರು ಮೊದಲೇ ತೊಂದರೆಯಲ್ಲಿದ್ದಾರೆ. ಇಂತಹ ಬಡ ಜನತೆಗೆ ಏಕೆ ತೊಂದರೆ ಕೊಡುತ್ತೀರಿ. ಐಆರ್‌ಬಿ ಇಷ್ಟು ದೊಡ್ಡ ಕಂಪನಿ ಎಂದು ಹೇಳಿಕೊಳ್ಳುತ್ತೀರಿ. ಆದರೆ ಏಕೆ ಹೀಗೆ ಮಾಡುತ್ತೀರಿ. ನನ್ನ ಕ್ಷೇತ್ರದ ಜನರಿಗೆ ತೊಂದರೆ ಆಗುವುದನ್ನು ಯಾವುದೆ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇಲ್ಲಿನ ಅವಾಂತರಗಳ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಅಧಿಕಾರಿಗಳ‌ ವಿರುದ್ಧ ಹರಿಹಾಯ್ದರು.

ಈ ಹಿಂದಿನ ರಸ್ತೆ ಇದ್ದಾಗ ನೀರು ತುಂಬುತ್ತಿರಲಿಲ್ಲ. ಈಗ ಯಾಕೆ ತುಂಬುತ್ತಿದೆ. ಇಂತಹ ರಸ್ತೆ ಮಾಡಿ ಏನು ಪ್ರಯೋಜನ. ಜನರಿಗೆ ತೊಂದರೆ ಉಂಟುಮಾಡುವುದಾದರೆ ರಸ್ತೆಯೇ ಬೇಡ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೇವಲ ಎರಡೇ ಎರಡು ಮಳೆಗೆ ನೀರು ನಿಂತು ಇಷ್ಟೊಂದು ಸಮಸ್ಯೆ ಆಗಿದೆ. ಮಳೆಗಾಲ ಮುಂದೆ 3-4 ತಿಂಗಳು ಇದೆ. ಜನತೆ ಹೇಗೆ ಕಳೆಯಬೇಕು..? ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ನೀರು ಬರುತ್ತಿದೆ. ಮಳೆ ಬಂದಾಗ ಎಷ್ಟು ಪ್ರಮಾಣದಲ್ಲಿ ನೀರು ಬರುತ್ತದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಕಾಮಗಾರಿ ಮಾಡಬೇಕು.

ರಸ್ತೆ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಯನ್ನು ನಿರ್ಮಾಣ ಮಾಡಿ ನೀರು ಹೋಗಲು ಅನುಕೂಲ ಕಲ್ಪಿಸಬೇಕು. ಐದು ದಿನಗಳ ಒಳಗಾಗಿ ಎಲ್ಲವನ್ನು ಸರಿ ಪಡಿಸಬೇಕು ಇಲ್ಲದಿದ್ದರೆ ಐಆರ್ ಬಿ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES

Related Articles

TRENDING ARTICLES