Tuesday, November 5, 2024

ಡಯಾಲಿಸಿಸ್ ಮಾಡಿಸಿಕೊಳ್ಳಲಾಗದೇ ರೋಗಿಗಳ ಪರದಾಟ

ಚಾಮರಾಜನಗರ : ಜಿಲ್ಲಾಸ್ಪತ್ರೆ ಹಳೇ ಕಟ್ಟಡದ ಮುಂಭಾಗ ಡಯಾಲಿಸಿಸ್ ಮಾಡಿಸಿಕೊಳ್ಳಲು ಮಧ್ಯಾಹ್ನದವರೆಗೂ ಕಾದು 27 ಕ್ಕೂ ಹೆಚ್ಚು ಮಂದಿ ರೋಗಿಗಳು ಪರದಾಡಿದರು. ಕೆಲವರು ಆಸ್ಪತ್ರೆ ಆವರಣದಲ್ಲಿ ನಿತ್ರಾಣರಾಗಿ ಮಲಗಿಕೊಂಡರೇ ಚೇತರಿಕೆಯಿಂದ ಇದ್ದ 13 ಮಂದಿ ಜಿಲ್ಲಾಡಳಿತ ಭವನ ಆವರಣದಲ್ಲಿ ಧರಣಿ ಕುಳಿತು ಆಕ್ರೋಶ ಹೊರಹಾಕಿದರು‌.

ಇನ್ನು, ಡಯಾಲಿಸಿಸ್ ರೋಗಿಗಳು ಈ ಹಿಂದೆ ಇದ್ದ ಬಿ.ಆರ್.ಎಸ್. ಏಜೆನ್ಸಿ ಸೇವೆ ಉತ್ತಮವಾಗಿತ್ತು, ಈಗಿನ ಸಂಜೀವಿನಿ ಏಜೆನ್ಸಿಯವರು ದುಡ್ಡು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ರೋಗಿಗಳು ಕಿಡಿಕಾರಿದ್ದಾರೆ. 4 ದಿನಗಳಿಗೊಮ್ಮೆ ತಾವು ಡಯಾಲಿಸಿಸ್ ಮಾಡಿಸಿಕೊಳ್ಳಬೇಕಿದ್ದು ಸಿಬ್ಬಂದಿ ಈ ರೀತಿ ಮುಷ್ಕರ ಹೂಡಿ ಪ್ರಾಣದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಡಯಾಲಿಸಿಸ್​​ನ್ನು ಆರು ಮಾತ್ರ ಬಳಸುವುದು, ಪ್ರತಿದಿನವೂ ಬೆಡ್ ಶೀಟ್ ಬದಲಿಸುವುದು, ಸರಿಯಾದ ಕ್ರಮದಲ್ಲಿ ಎಫಾರಿನ್ ಬಳಸುವುದು, ಕಬ್ಬಿನಾಂಶ ಮತ್ತು ರಕ್ತ ಹೆಚ್ಚುವ ಇಂಜೆಕ್ಷನ್ ಗಳನ್ನು ನೀಡಬೇಕು‌.ಆದರೆ, ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್​​​ನ್ನು 10-11 ಬಾರಿ ಮಾಡಲಾಗುತ್ತದೆ, ಸ್ವಂತ ಹಣದಿಂದ ಇಂಜೆಕ್ಷನ್ ತೆಗೆದುಕೊಂಡು ಹೋಗಬೇಕಾಗಿದೆ ಇಷ್ಟೆಲ್ಲಾ ಮಾಡಿದರೂ ಸಿಬ್ಬಂದಿ ಮುಷ್ಕರದಿಂದ ಪರದಾಡುತ್ತಿದ್ದೇವೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಪ್ರತಿಭಟನಾಕಾರರ ಒಟ್ಟಿಗೆ ಡಿಎಚ್ಒ ಡಾ.ವಿಶ್ವೇಶ್ವರಯ್ಯ ಮಾತನಾಡಿ, ಸಂಜೀವಿನಿ ಏಜೆನ್ಸಿ ವಿರುದ್ಧ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಿಬ್ಬಂದಿ ಮೈಸೂರಿಗೆ ತೆರಳಿದ್ದಾರೆ, ಮಧ್ಯಾಹ್ನ 3-4 ರ ವೇಳೆಗೆ ಬರಲಿದ್ದು ಡಯಾಲಿಸಿಸ್ ಮಾಡಲಿದ್ದಾರೆ,ಇಲ್ಲವೇ ನಾಳೆಯಾದರೂ ಮಾಡುತ್ತಾರೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಡಿಎಚ್ಇ ಮಾತಿಗೆ ಬಗ್ಗದ ರೋಗಿಗಳು ತಮಗೇ ಡಯಾಲಿಸಿಸ್ ಮಾಡುವ ತನಕ ತಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ, ಕೆಲವರು ಆಸ್ಪತ್ರೆಯಲ್ಲೇ ಉಳಿದಿದ್ದಾರೆ.

RELATED ARTICLES

Related Articles

TRENDING ARTICLES