Wednesday, January 22, 2025

ಇಬ್ಬರು ಜೆಡಿಎಸ್ ಶಾಸಕರ ಉಚ್ಛಾಟನೆ : ಬಂಡೆಪ್ಪ ಕಾಶೆಂಪೂರ್

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ,ಪಕ್ಷದ ವಿಪ್  ಉಲ್ಲಂಘಿಸಿ ದಳಪತಿಗಳಿಗೆ ಇರುಸುಮುರುಸು ಉಂಟು ಮಾಡಿದ್ದ ಇಬ್ಬರು ಶಾಸಕರ ಉಚ್ಛಾಟನೆ ಮಾಡಲಾಗಿದೆ. ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ.

ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕೋರ್ ಕಮಿಟಿ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ರಾಜ್ಯಸಭೆ ಚುನಾವಣೆಯಲ್ಲಿ ನಡೆದ ಬೆಳೆವಣಿಗೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಯಿತು.ಚರ್ಚೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ಜಪ್ರುಲ್ಲಾ ಖಾನ್, ಎಂ.ಕೃಷ್ಣಾರೆಡ್ಡಿ, ರಾಜಾ ವೆಂಕಟಪ್ಪ ನಾಯಕ, ಕೆ.ಎಂ.ತಿಮ್ಮರಾಯಪ್ಪ, ಟಿ.ಎ.ಶರವಣ, ಶಾರದಾ ಪೂರ್ಯನಾಯಕ್, ರುತ್ ಮನೋರಮಾ, ವಿ.ನಾರಾಯಣಸ್ವಾಮಿ, ಸಮೃದ್ಧಿ ಮಂಜುನಾಥ್, ವಿಲ್ಸನ್ ರೆಡ್ಡಿ, ಸುಧಾಕರ ಲಾಲ್, ಎಚ್.ಎಂ.ರಮೇಶ್ ಗೌಡ, ಆರ್.ಪ್ರಕಾಶ್, ಸಯ್ಯದ್ ಶಫಿ ಉಲ್ಲಾ, ನಾಸಿರ್ ಉಸ್ತಾದ್ ಹಾಗೂ ಕೋರ್ ಕಮಿಟಿ ಸಂಚಾಲಕರಾದ ಕೆ.ಎನ್.ತಿಪ್ಪೇಸ್ವಾಮಿ ಅವರು ಭಾಗವಹಿಸಿದ್ದರು.

ಸುದೀರ್ಘ ಚರ್ಚೆಯ ನಂತರ ಅಡ್ಡಮತದಾನ ಮಾಡಿದ್ದ ಶ್ರೀನಿವಾಸ ಗೌಡ ಹಾಗೂ ಎಸ್,ಆರ್ ಶ್ರೀನಿವಾಸ್ ಅವರನ್ನು ಉಚ್ಛಾಟನೆ ಮಾಡಲಾಯಿತು.​

ಹಾಗೆಯೇ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಇಬ್ಬರೂ ಶಾಸಕರನ್ನು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲು ತಕ್ಷಣವೇ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲು ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಎರಡು ಮೂರು ದಿನದೊಳಗೆ ಸ್ಪೀಕರ್ ಅವರಿಗೆ ದೂರು ನೀಡಲಾಗುವುದು ಎಂದು ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಖಾಷೆಂಪೂರ್ ಅವರು ಮಾಧ್ಯಮಗಳಿಗೆ ತಿಳಿಸಿದರು.

RELATED ARTICLES

Related Articles

TRENDING ARTICLES