Thursday, January 23, 2025

228 ಕೋಟಿ ರೂಪಾಯಿ ವೆಚ್ಚದಲ್ಲಿ ಏತನೀರಾವರಿ ಯೋಜನೆ

ಬಾಗಲಕೋಟೆ : ಅದು ಆ ಭಾಗದ ರೈತರ 25 ವರ್ಷಗಳ ಕನಸು. ಆ ಯೋಜನೆಗಾಗಿ ಅನೇಕ ಹೋರಾಟಗಳೇ ನಡೆದಿದ್ದವು. ಆದ್ರೆ ಈಗ ಆ ಕನಸು ಈಡೇರುತ್ತಿದೆ. ಯೋಜನೆಯ ಕಾಮಗಾರಿ ಭರಪೂರವಾಗಿ ನಡೆದಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ಆ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದ ಬಳಿಯ ಕೃಷ್ಣಾ ನದಿ ಪಕ್ಕದಲ್ಲಿ ನಡೆಯುತ್ತಿರೋ ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಕಾಮಗಾರಿಯ ದೃಶ್ಯಗಳು. ಹೌದು ಹೀಗೆ ಭರದಿಂದ ಸಾಗಿರುವ ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಬೀಳಗಿ ಭಾಗದ ಸುಮಾರು 25 ವರ್ಷಗಳ ಕನಸಾಗಿತ್ತು. ಈ ಯೋಜನೆಗಾಗಿ ಅನೇಕ ಹೋರಾಟಗಳು ನಡೆದಿದ್ದವು. ಈಗ ಯೋಜನೆ ಕಾಮಗಾರಿ ಭರದಿಂದ ಸಾಗಿದೆ.

ಈ ಯೋಜನೆಯಿಂದ ಘಟಪ್ರಭಾ ಎಡದಂಡೆ ಕಾಲುವೆಯಿಂದ 103 ಕಿ.ಮೀ ಕೆಳಭಾಗದಲ್ಲಿರುವ ಮುಧೋಳ ತಾಲೂಕಿನ ಹಾಗೂ ಬೀಳಗಿ ತಾಲ್ಲೂಕಿನ ಒಟ್ಟು 43 ಹಳ್ಳಿಗಳ ಅಚ್ಚುಕಟ್ಟು ಪ್ರದೇಶವು ನೀರಾವರಿಯಾಗಲಿದೆ.

ಪೈಪ್ ಲೈನ್ ಸೇರಿ ಏತ ನೀರಾವರಿಗಾಗಿ ಬೇಕಾದ ಎಲ್ಲ ಕಾಮಗಾರಿಗಳು ನಡೆದಿವೆ. ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಾಗಿ 228 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಇದರಿಂದ ಮುಧೋಳ ಹಾಗೂ ಬೀಳಗಿ ತಾಲ್ಲೂಕಿನ 43 ಹಳ್ಳಿಗಳ 29,669 ಎಕರೆ ಪ್ರದೇಶ ನೀರಾವರಿ ಆಗಲಿದೆ. ಈ ಯೋಜನೆಗಾಗಿ ಕೃಷ್ಣಾ ನದಿಯಿಂದ ಸುಮಾರು 2.06 ಟಿಎಂಸಿ ನೀರು ಬಳಕೆಯಾಗಲಿದೆ. ಅಲ್ಲದೇ ಮುಂಗಾರು ಹಂಗಾಮಿನಲ್ಲಿ ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಭಾಗದ ಭಾದಿತ ಕ್ಷೇತ್ರಗಳಿಗೆ ಈ ಯೋಜನೆ ಅನುಕೂಲ ಆಗಲಿದೆ.

ಒಟ್ಟಾರೆ ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆ ಭರದಿಂದ ಸಾಗಿದ್ದು, ‌ಮುಧೋಳ ಹಾಗೂ ಬೀಳಗಿ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇವರ ಬಹುಕಾಲದ ಹೋರಾಟಕ್ಕೆ ಇಂದು ಪ್ರತಿಫಲ ದೊರಕಿದೆ.

ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ

RELATED ARTICLES

Related Articles

TRENDING ARTICLES