Wednesday, January 22, 2025

ಮಹಾರಾಷ್ಟ್ರದಲ್ಲಿ ರಾಜಕೀಯ ಮಹಾ ಡ್ರಾಮಾ..!

ಮಹಾರಾಷ್ಟ್ರ : ಒಂದ್ಕಡೆ ಅಗ್ನಿಪಥ್‌ ಕಿಚ್ಚು.. ಮತ್ತೊಂದ್ಕಡೆ, ಕಾಂಗ್ರೆಸ್‌ನವರ ಪ್ರತಿಭಟನೆ.. ಈ ಮಧ್ಯೆ ಮಹಾರಾಷ್ಟ್ರದಲ್ಲಿ ಭಾರಿ ರಾಜಕೀಯ ಹೈಡ್ರಾಮಾ ಶುರುವಾಗಿದೆ. ರಾಜ್ಯಸಭಾ ಮತ್ತು ಪರಿಷತ್ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಹಿನ್ನಡೆಯಾದ ಬೆನ್ನಲ್ಲೇ ಈಗ ಈ ಸರ್ಕಾರವೇ ಪತನವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಶಿವಸೇನೆಯ ಪ್ರಭಾವಿ ನಾಯಕ, ಸರ್ಕಾರದ ನಗರಾಭಿವೃದ್ಧಿ ಸಚಿವರಾಗಿರುವ ಏಕ್‌ನಾಥ್‌ ಶಿಂಧೆ ಜೊತೆ ಪಕ್ಷೇತರರು ಸೇರಿದಂತೆ 24 ಶಾಸಕರು ಗುಜರಾತಿನ ಸೂರತ್ ಹೋಟೆಲಿಗೆ ಶಿಫ್ಟ್ ಆಗಿದ್ದು, ಭಾರಿ ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಗಿದೆ.

ಪರಿಷತ್ ಚುನಾವಣೆಯಲ್ಲಿ ಬೆಂಬಲ ಇಲ್ಲದೇ ಇದ್ದರೂ ಬಿಜೆಪಿ ತನ್ನ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿತ್ತು. ಈ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈಗ ಬಿಜೆಪಿ ನಾಯಕರು ಸರ್ಕಾರ ರಚಿಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಅಷ್ಟೇ ಅಲ್ಲ, ಏಕ್‌ನಾಥ್‌ ಶಿಂಧೆಗೆ ಬಿಜೆಪಿ ಉಪ ಮುಖ್ಯಮಂತ್ರಿಯ ಆಫರ್ ನೀಡಿದೆ ಎನ್ನಲಾಗ್ತಿದೆ. ಮೈತ್ರಿ ಸರ್ಕಾರದಲ್ಲಿ ಶಿಂಧೆ ಅವರು ಅಸಮಾಧಾನಗೊಂಡಿದ್ದರು. ಪಕ್ಷ ತನ್ನನ್ನು ಕಡೆಗಣಿಸುತ್ತಿರುವ ವಿಚಾರ ತಿಳಿದು ಈಗ ಬಿಜೆಪಿಗೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಈ ಮಧ್ಯೆ, ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದ ಶಿವಸೇನಾ ಮುಖಂಡ ಏಕನಾಥ್ ಶಿಂಧೆಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ ಪಕ್ಷ.. ಶಾಸಕರನ್ನು ಕರೆದುಕೊಂಡು ಗುಜರಾತಿನ ಸೂರತ್ ಪಟ್ಟಣದ ಹೋಟೆಲ್ ವೊಂದರಲ್ಲಿ ಬೀಡುಬಿಟ್ಟಿರುವ ಶಿಂಧೆಗೆ ಪಕ್ಷದಿಂದ ಭಾರಿ ಹೊಡೆತ ನೀಡಲಾಗಿದೆ. ಶಾಸಕಾಂಗ ಪಕ್ಷ ನಾಯಕ ಸ್ಥಾನದಿಂದ ಏಕನಾಥ್ ಶಿಂಧೆಗೆ ಕೊಕ್ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಸದ್ಯ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಸರ್ಕಾರಕ್ಕೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ನೀಡಿವೆ. ಮಹಾರಾಷ್ಟ್ರ ಅಘಾಡಿಯ ಬುಡವನ್ನು ಅಲ್ಲಾಡಿಸುವಂಥ ಕೃತ್ಯಕ್ಕೆ ಏಕನಾಥ್ ಕೈ ಹಾಕಿದ್ದಾರೆ ಎಂಬ ಆರೋಪ ಅವರ ಮೇಲಿದೆ.

ಒಂದು ವೇಳೆ, ರೆಬಲ್‌ ಶಾಸಕರು ಕೈ ಕೊಟ್ರೆ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಇನ್ನಿಲ್ಲದಂತೆ ನೆಲ ಕಚ್ಚಲಿದೆ.. ಹೀಗಾಗಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಟೆನ್ಷನ್ ಶುರುವಾಗಿದೆ.. ಏನಾದ್ರೂ ಮಾಡಿ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಮಾಡ್ತಿದ್ದು, ತಮ್ಮ ಆಪ್ತರನ್ನು ಬಿಟ್ಟು ಸೂರತ್‌ ಹೋಟೆಲ್‌ನಲ್ಲಿ ಡೀಲ್‌ ಮಾಡಿಸುವ ಪ್ರಯತ್ನ ಮಾಡಿದ್ದಾರೆ.

ಒಂದು ವೇಳೆ ಮೈತ್ರಿ ಸರ್ಕಾರ ಬಿದ್ರೆ ಬಿಜೆಪಿ ಸರ್ಕಾರ ರಚನೆ ಮಾಡಲು ತಯಾರಿ ನಡೆಸಿದೆ ಎನ್ನಲಾಗ್ತಿದೆ.. ಎನ್‌ಡಿಎ ಬಲ ಕೇವಲ 113 ಇದ್ದು, ಮಹಾ ವಿಕಾಸ್ ಅಘಾಡಿ 136 ಸಂಖ್ಯೆ ಇದೆ..ಸರ್ಕಾರ ರಚಿಸಲು 128 ಬೇಕು.. ಹೀಗಾಗಿ, ಆಪರೇಷನ್ ಕಮಲಕ್ಕೆ ಕೈ ಹಾಕಲಾಗಿದೆ ಎನ್ನಲಾಗ್ತಿದೆ.. ಒಟ್ಟಾರೆ, ಮಹಾರಾಷ್ಟ್ರದಲ್ಲಿ ಶುರುವಾಗಿರುವ ರಾಜಕೀಯ ಹೈಡ್ರಾಮಾಕ್ಕೆ ಫುಲ್‌ ಸ್ಟಾಪ್‌ ಯಾವಾಗ ಅನ್ನೋದನ್ನು ಕಾದು ನೋಡ್ಬೇಕಿದೆ.

 

RELATED ARTICLES

Related Articles

TRENDING ARTICLES