Friday, November 22, 2024

ಮನಸ್ಸು ಮಾಡಿದ್ರೆ ನಾನು ಸಿಎಂ ಆಗುವೆ- ಜಿ.ಜನಾರ್ಧನ ರೆಡ್ಡಿ

ಬಳ್ಳಾರಿ: ಮುಂದಿನ ದಿನಗಳಲ್ಲಿ ನಾನು ಮಂತ್ರಿ ಆಗಬೇಕು, ಸಿಎಂ ಆಗಬೇಕೆಂಬ ಆಸೆಯಿಲ್ಲ, ಆದರೆ ಮನಸ್ಸು ಮಾಡಿದರೆ ಒಂದು ದಿನ ಸಿಎಂ ಆಗಿಯೇ ಆಗುತ್ತೇನೆ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಹೇಳಿದರು.

ಬಳ್ಳಾರಿ ನಗರದ ಹೊರ ವಲಯದಲ್ಲಿರುವ ಕ್ಲಾಸಿಕ್ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಜನ್ಮ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ನನಗೆ ಅಧಿಕಾರ ಬೇಕಾಗಿಲ್ಲ, ಆದರೆ ಮನಸ್ಸು ಮಾಡಿದರೆ ನಾನು ಒಂದು ದಿನ ಸಿಎಂ ಆಗುವೆ ಎಂದರು.

ಕರುಣಾಕರ ರೆಡ್ಡಿ ಸಾಮಾನ್ಯ ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಕರುಣಾಕರ ರೆಡ್ಡಿ ಕೆಲಸ ಮಾಡಿದರು, ಸೋಮಶೇಖರರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷ ಆಗಿ ಕೆಲಸ ಮಾಡಿದರು, ನನಗಂತೂ ಯಾರಿಗೂ ಕೊಡಲಾರದಷ್ಟು ಕಷ್ಟ ಕೊಟ್ಟರೂ ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಅಂತಹ ವಿಶೇಷ ಆಶೀರ್ವಾದ ಶ್ರೀ ಕನಕದುರ್ಗಮ್ಮ ದೇವಿ ನನಗೆ ನೀಡಿದ್ದಾಳೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲಾಗುತ್ತಿರಲಿಲ್ಲ, ಅಷ್ಟು ತೊಂದರೆ ನನಗೆ ನೀಡಿದರು ಎಂದು ಹೇಳಿದ ರೆಡ್ಡಿ, ನನ್ನ ಬಂಧನಕ್ಕೆ ಬಂದಿದ್ದ ಸಿಬಿಐ ಅಧಿಕಾರಿಗಳೇ ಖುದ್ದು ಹೇಳಿದಂತೆ ರೆಡ್ಡಿಯವರೇ ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ, ಆದರೆ ಬಳ್ಳಾರಿಯ ಪ್ರತಿ ಸಾಮಾನ್ಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಹೇಳಿದ್ದರು ಎಂಬ ಮಾತನ್ನು ನೆನಪಿಸಿಕೊಂಡರು.

ನಮ್ಮ ಕುಟುಂಬದಲ್ಲೇ ಅತಿ ಹೆಚ್ಚು ಜನರನ್ನು ಪ್ರೀತಿಯಿಂದ ಕಾಣುವ ಶಕ್ತಿ ಇರುವುದು ಸೋಮಶೇಖರರೆಡ್ಡಿ ಅವರಿಗಿದೆ, ಅವರು ಜನರ ಜೊತೆ ಬೆರೆಯುತ್ತಾರೆ ಎಂದು ಸೋದರ, ಶಾಸಕ ಸೋಮಶೇಖರ ರೆಡ್ಡಿ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು.

ಇಲ್ಲಿನ ಅದಿರಿಗೆ ಪ್ರತ್ಯೇಕ ತೆರಿಗೆ ವಿಧಿಸುವಂತೆ ನಾನು ಹೇಳಿದಾಗ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಿದರು, ತೆರಿಗೆ ವಿಧಿಸಿದರು, ಆದರೆ ಕೆಲವರು ನ್ಯಾಯಾಲಯಕ್ಕೆ ಹೋದರು, ಆದರೆ ನ್ಯಾಯಾಲಯ ನನ್ನ ವಾದವನ್ನು ಒಪ್ಪಿ ತೆರಿಗೆ ವಿಧಿಸಿದ್ದನ್ನು ಎತ್ತಿ ಹಿಡಿಯಿತು, ಹೀಗಾಗಿ ಕಳೆದ 13 ವರ್ಷಗಳಲ್ಲಿ 25 ಸಾವಿರ ಕೋಟಿ ತೆರಿಗೆ ಸಂಗ್ರಹ ಆಗಿದೆ, ಇದರಿಂದಾಗಿ ಬಳ್ಳಾರಿ ವಿಜಯನಗರ ಎರಡೂ ಜಿಲ್ಲೆಗಳು ಅಭಿವೃದ್ಧಿ ಆಗಲಿವೆ, ಈ ಎರಡೂ ಜಿಲ್ಲೆಗಳು ನಮ್ಮ ಎರಡು ಕಣ್ಣುಗಳಿದ್ದಂತೆ ಎಂದರು.

ಮಾಜಿ ಸಚಿವ, ಶಾಸಕ ಕರುಣಾಕರ ರೆಡ್ಡಿ, ಬುಡಾ ಅಧ್ಯಕ್ಷ ಪಿ.ಪಾಲನ್ನ ಸೇರಿದಂತೆ ಹಲವು ಜನ ಗಣ್ಯರು ಹಾಜರಿದ್ದರು. ಇದೇ ಸಂದರ್ಭ ಮಹಾನಗರ ಪಾಲಿಕೆಯ ವಿಜೇತ ನೂತನ ಸದಸ್ಯರಿಗೆ ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.

RELATED ARTICLES

Related Articles

TRENDING ARTICLES