Sunday, September 8, 2024

ಗ್ರಾಹಕರೇ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರ :ನಂಬಿ ಮೋಸಹೋಗಬೇಡಿ

ವಿಜಯಪುರ: ಎಸ್ ಎಮ್ ಎನ್ ಕ್ರೆಡಿಟ್ ಸೌಹಾರ್ಧದ ಹಲವಾರು ಶಾಖೆಗಳು. ಇದನ್ನ ನಂಬಿ ಸಾವಿರಾರು ಸಂಖ್ಯೆಯ ಜನರು ಕೊಟ್ಯಾಂತರ ರೂಪಾಯಿ ಠೇವಣಿ ಮಾಡಿದ್ದರು. ಜೊತೆಗೆ ಸಾವಿರಾರು ಸಾಲಗಾರರು ಹಣ ಮರುಪಾವತಿ ಮಾಡದೇ ವಂಚನೆ, ಹಣ ದುರ್ಬಳಕೆ, ಅವ್ಯವಹಾರ ಆರೋಪ. ವಂಚನೆಗೊಳಗಾದ ಠೇವಣಿದಾರರಿಂದ ನ್ಯಾಯಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ. ಸತ್ಯಾಗ್ರಹದ ಅಸ್ತ್ರಕ್ಕೆ ಮಣಿದ ಸರಕಾರದಿಂದ ಸಕ್ಷಮ ಪ್ರಾಧಿಕಾರದ ನೇಮಕ ಮಾಡಿದ್ದರು, ಇನ್ನೇನು ಸಕ್ಷಮ ಪ್ರಾಧಿಕಾರದಿಂದ ಸ್ಪಂದನೆ ದೊರಕುತ್ತಿದೆ ಎನ್ನುವಾಗಲೇ ಸರಕಾರದಿಂದ ಮತ್ತೆ ಸಕ್ಷಮ ಪ್ರಾಧಿಕಾರದ ಬದಲಾವಣೆ ಮಾಡಿ ಮತ್ತೆ ವಿಳಂಬ, ಮತ್ತೆ ಪ್ರತಿಭಟನೆ ಹಾದಿ ಹಿಡಿಯುವಂತಾಗಿದೆ.

ಹೌದು ಈ ಹಿಂದೆ ವಿಜಯಪುರ ಜಿಲ್ಲೆ ಸೇರಿದಂತೆ ಹಲವೆಡೆ ಶಾಖೆ ಹೊಂದಿದ್ದ ಎಸ್ ಎಮ್ ಎನ್ ಕ್ರೆಡಿಟ್ ಸೌಹಾರ್ಧದಲ್ಲಿ ಹಣ ತೊಡಗಿಸಿದ್ದ ಸಹಸ್ರಾರು ಠೇವಣಿದಾರರಿಗೆ, ಗ್ರಾಹಕರಿಗೆ ಕೊಟ್ಯಾಂತರ ಹಣ ವಂಚನೆಯಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಮತ್ತು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಅವರೆಲ್ಲ 2020 ನೇ ಸಾಲಿನಲ್ಲಿ ಉಪವಾಸ ಸತ್ಯಾಗ್ರಹ ಸಹ ನಡೆಸಿದ್ದರು.

ಈ ಹಿನ್ನಲೆಯಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಸ್ಪಂದಿಸಿದ ಸರಕಾರ ತನಿಖೆ‌ ನಡೆಸಿ ನೊಂದವರಿಗೆ ನ್ಯಾಯ ಕೊಡಿಸುವ ಕಾರಣಕ್ಕಾಗಿ ವಿಜಯಪುರದ ಉಪ ವಿಭಾಗಾಧಿಕಾರಿಗಳನ್ನ ಸಕ್ಷಮ ಪ್ರಾಧಿಕಾರವೆಂದು ನೇಮಕ ಮಾಡಿತ್ತು. ಅವರು ಅಧಿಕಾರ ವಹಿಸಿಕೊಂಡ ನಂತರ ಸೌಹಾರ್ಧಕ್ಕೆ ಸಂಬಂಧಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ವಿವಿಧ ಶಾಖೆಗಳಿಂದ ಪಡೆದುಕೊಂಡ ಸಾಲವನ್ನು ವಸೂಲಿ ಮಾಡಲು ಸೂಮಾರು 3374 ಸಾಲಗಾರರಿಗೆ ನೋಟಿಸ್‌ ನೀಡಿ ಸಾಲ ಮರು ಪಾವತಿಸುವಂತೆ ಸೂಚಿಸಲು ಮುಂದಾದ ಸಂದರ್ಭದಲ್ಲಿ ಸರಕಾರ ಧಿಡೀರನೆ ವಿಜಯಪುರ ಎಸಿ ಅವರನ್ನ ನಿಯಮಿಸದ್ದ ಸಕ್ಷಮ ಪ್ರಾಧೀಕಾರಿ ಹುದ್ದೆಯನ್ನು ಸರಕಾರ ಹಿಂಪಡೆದು ಬೆಂಗಳೂರಿನ ಕರ್ನಾಟಕ ಸಹಕಾರಿ ಮಹಾಮಂಡಳಿಯ ಕಾರ್ಯದರ್ಶಿಯಾದ ಲಕ್ಷ್ಮೀ ಪತಯ್ಯ ಇವರನ್ನು ಎಸ್ ಎಮ್ ಎನ್ ಸೌಹಾರ್ಧದ ಸಕ್ಷಮ ಪ್ರಾಧಿಕಾರಿ ಎಂದು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಆದರೇ ಇದಾಗಿ ಏಳೆಂಟು ತಿಂಗಳು ಗತಿಸಿದರೂ ಸಹ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಕಾರಣ ಸಕ್ಷಮ ಪ್ರಾಧಿಕಾರ ಬದಲಾಯಿಸಿ, ಮೊದಲಿನವರನ್ನೇ ನೇಮಿಸಿ, ಶೀಗ್ರ ನ್ಯಾಯ ದೊರಕಿಸಿಕೊಡಿ ಎನ್ನುವುದು ಹೋರಾಟ ಪ್ರತಿಭಟನೆ ಮಾಡುತ್ತಿರುವವರ ಆಗ್ರಹವಾಗಿದೆ. ಈ ಹಿನ್ನಲೆಯಲ್ಲಿ ಬ್ಯಾಂಕಿನ ಅವ್ಯವಹಾರದ ಹಿನ್ನಲೆಯಲ್ಲಿ ರಚಿತಗೊಂಡ ಹೋರಾಟ ಸಮಿತಿ ಸದಸ್ಯರು ವಿಜಯಪುರ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಸಕ್ಷಮ ಪ್ರಾಧಿಕಾರಿಯಾಗಿ ನೇಮಕಗೊಂಡ ಲಕ್ಷ್ಮೀಪತಯ್ಯ ಇಲ್ಲಿಯವರೆಗೂ ವಿಜಯಪುರಕ್ಕೂ ಆಗಮಿಸಿಲ್ಲ. ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸಿ ನೋಟಿಸ್‌ ನೀಡುವುದು ಹಾಗೂ ಹಣ ವಸೂಲಿ ಮಾಡುವುದು ಅವರಿಂದ ಸಾದ್ಯವಾಗದ ಮಾತು. ಇದರಿಂದ ಮತ್ತಷ್ಟು ವಿಳಂಬವಾಗಿ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಪುನಃ ಸರಕಾರ ವಿಜಯಪುರದ ಉಪವಿಭಾಗಾಧಿಕಾರಿಯವರನ್ನೇ ಸಕ್ಷಮ ಪ್ರಾಧಿಕಾರಿ ಅಂತ ನೇಮಕ ಮಾಡಿ ಆದೇಶ ಹೊರಡಿಸಿ, ಸಾಲಗಾರರಿಂದ ಹಣ ವಸೂಲಿ ಮಾಡಿಕೊಟ್ಟು, ನೊಂದ ಗ್ರಾಹಕರಿಗೆ ಶೀಘ್ರದಲ್ಲಿ ಹಣ ಮರುಪಾವತಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ.

ತಾಸಿಗೂ ಹೆಚ್ಚು ಕಾಲ ಡಿಸಿ ಕಚೇರಿ ಎದುರು ಕುಳಿತು ನ್ಯಾಯ ಕೋರಿ ಘೋಷಣೆ ಕೂಗಿದರು. ಇದೇ ವೇಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಯೋವೃದ್ಧೆಯೊಬ್ಬರಿಗೆ ಆರೋಗ್ಯದಲ್ಲಿ ಏರುಪೇರಾಗಿ ನಂತರ ಚೇತರಿಸಿಕೊಂಡರು. ಇನ್ನಾದರೂ ಸರಕಾರ ತಮ್ಮ‌ ಮನವಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ವಿಜಯಪುರ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ‌ಸರ್ಕಾರ ಈ ವಿಚಾರವಾಗಿ ಯಾವ ತೀರ್ಮಾನ ಕೈಗೊಳ್ಳತ್ತೋ ಕಾದು ನೋಡಬೇಕಿದೆ.

ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ

RELATED ARTICLES

Related Articles

TRENDING ARTICLES