Sunday, January 5, 2025

ವಿಕ್ಕಿ ಮೊದಲ ಹೆಜ್ಜೆಗೆ ಇಡೀ ಇಂಡಸ್ಟ್ರಿ ಬೆನ್ನೆಲುಬು..!

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ  ವಿಕ್ರಮ್ ಆಭಿನಯದ ತ್ರಿವಿಕ್ರಮನ ಪರಾಕ್ರಮಕ್ಕೆ ದಿನಗಣನೆ ಶುರುವಾಗಿದೆ. ಇಡೀ ಸ್ಯಾಂಡಲ್​ವುಡ್​​ ತ್ರಿವಿಕ್ರಮ  ಸಿನಿಮಾಗೆ ಸಾಥ್ ನೀಡಿದೆ. ಸೆಂಚುರಿ ಸ್ಟಾರ್ ಶಿವಣ್ಣ, ಕ್ರೇಜಿಸ್ಟಾರ್ ರವಿಚಂದ್ರನ್ ಒಟ್ಟೊಟ್ಟಿಗೆ ವಿಕ್ರಮ್​ಗೆ ಮುತ್ತಿಕ್ಕಿ ಶುಭ ಹಾರೈಸಿದ್ದಾರೆ. ಸ್ಯಾಂಡಲ್​ವುಡ್​ಗೆ ಮತ್ತೊಬ್ಬ ಶೋ ಮ್ಯಾನ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಟಗರು ಜೋಡಿಯ ಮೋಡಿ.. ಕಳೆಗಟ್ಟಿದ ವೇದಿಕೆ

ರವಿಮಾಮನ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಮೊದಲ ಬಾರಿಗೆ ತ್ರಿವಿಕ್ರಮ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. ರಣಧೀರನ ಚಾರ್ಮಿಂಗ್ ಜೊತೆಗೆ ಅಂಜದ ಗಂಡಿನ ಕಳೆ ಇರೋ ಹ್ಯಾಂಡ್ಸಮ್ ಬಾಯ್ ವಿಕ್ರಮ್. ಸ್ಯಾಂಡಲ್​ವುಡ್​​ ಶೋ ಮ್ಯಾನ್ ವಿಕ್ರಮ್​ಗೆ ಇದು ಚೊಚ್ಚಲ ಸಿನಿಮಾ. ಡ್ಯಾನ್ಸಿಂಗ್ , ಆ್ಯಕ್ಟಿಂಗ್ ಎಲ್ಲಾ ಫಾರ್ಮ್ಯಾಟ್ ಗಳಲ್ಲೂ ಫಸ್ಟ್ ಕ್ಲಾಸ್ ಅಭಿನಯದ ಕಲಾವಿದ.

ಕನಸುಗಾರನ ಆಸೆಯಂತೆ ವಿಭಿನ್ನ ಕಥೆಯ ಮೂಲಕ ಸ್ಯಾಂಡಲ್​ವುಡ್​ಗೆ ಅದ್ಧೂರಿಯಾಗಿ  ಲಾಂಚ್ ಮಾಡಲಾಗ್ತಿದೆ. ಚಿತ್ರರಸಿಕರಿಗೆ ಪಕ್ಕಾ ಇಷ್ಟವಾಗೋ ಸೂಪರ್ ಕಮರ್ಷಿಯಲ್ ಕಥೆ ಇದು. ಹಾಗಾಗಿ ಲೇಟ್ ಆದ್ರೂ ಪರವಾಗಿಲ್ಲ ಲೇಟೆಸ್ಟ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚೋಕೆ ಸಜ್ಜಾಗಿದ್ದಾರೆ ವಿಕ್ರಮ್.

ಕನ್ನಡ ಚಿತ್ರರಂಗಕ್ಕೆ ಮೊದಲ ಹೆಜ್ಜೆಯ ಮೂಲಕ ಚಿತ್ರಪ್ರೇಮಿಗಳ ಹೃದಯ ಗೆಲ್ಲಲು ತ್ರಿವಿಕ್ರಮ ತುದಿಗಾಲಲ್ಲಿ ನಿಂತಿದೆ. ಟೀಸರ್, ಪೋಸ್ಟರ್ ಮೂಲಕ ಹಲ್ಚಲ್ ಎಬ್ಬಿಸಿರೋ ತ್ರಿವಿಕ್ರಮನ ಭರಾಟೆ ಕೂಡ ಜೋರಾಗಿದೆ. ಕರ್ನಾಟಕದ ಮೂಲೆ ಮೂಲೆಗಳಲ್ಲೂ ಪ್ರೊಮೋಷನ್ ದರ್ಬಾರ್ ಸೌಂಡ್ ಮಾಡ್ತಿದೆ. ಜೂನ್ 24ಕ್ಕೆ ತ್ರಿವಿಕ್ರಮನ ದಂಡಯಾತ್ರೆಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

ಈ ನಡುವೆ ನಗರದ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅದ್ದೂರಿ ಪ್ರೀ- ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಈ ಸಡಗರದಲ್ಲಿ ಕುಚಿಕು ಫ್ರೆಂಡ್ಸ್ ಶಿವಣ್ಣ- ಕ್ರೇಜಿಸ್ಟಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ್ರು. ಮಗನ ಸಿನಿಮಾಗೆ ರವಿಮಾಮ  ತುಂಬು ಹೃದಯದಿಂದ ಹಾರೈಸಿದ್ರು. ಈ ಸುಂದರ ಕ್ಷಣಕ್ಕೆ ಇಡೀ ಸ್ಯಾಂಡಲ್​ವುಡ್​​ ಸಾಕ್ಷಿಯಾಗಿತ್ತು. ಡಾಲಿ ಧನಂಜಯ, ಶ್ರೀನಗರ ಕಿಟ್ಟಿ, ಶರಣ್, ನಟಿ ನಿಶ್ವಿಕಾ, ಹಿರಿಯ ನಟಿ ಶೃತಿ, ಅರ್ಜುನ್ ಜನ್ಯಾ ಸೇರಿ ಹಲವು ಕಲಾವಿದರು ಪಾಲ್ಗೊಂಡಿದ್ರು.

ಅನದರ್ ಅಪ್ಪು ಅಂದೇಬಿಟ್ರು ಕರುನಾಡ ಚಕ್ರವರ್ತಿ..!

ತಾಕತ್ತಿದ್ರೆ ನನ್ನ ಅಳಿಸಿ.. ಮಕ್ಕಳಿಗೆ ಕ್ರೇಜಿಸ್ಟಾರ್ ಚಾಲೆಂಜ್

ಮಿಡ್ಲ್ ಕ್ಲಾಸ್ ಲವ್ ಸ್ಟೋರಿ ಇರೋ ತ್ರಿವಿಕ್ರಮನಿಗೆ ಪಕ್ಕಾ ಗೆಲುವು ಸಿಗಲಿದೆ ಅನ್ನೋದು ಸಿನಿರಸಿಕರ ಲೆಕ್ಕಾಚಾರ. ಅಂತೂ ಮೊದಲ ಸಿನಿಮಾದಲ್ಲೇ ಪ್ರೀತಿಯ ಅಭಿಮಾನಿಗಳಿಂದ  ರೆಡ್ ಕಾರ್ಪೆಟ್ ವೆಲ್ಕಮ್ ಸಿಕ್ಕಿದೆ. ಪ್ರೀ- ರಿಲೀಸ್ ಇವೆಂಟ್ ಗೆ ಅತಿಥಿಯಾಗಿ ಆಗಮಿಸಿದ್ದ ಶಿವಣ್ಣ ಕೂಡ ಸಿನಿಮಾ ಮೇಲಿನ ಕುತೂಹಲವನ್ನು ಹೊರ ಹಾಕಿದ್ರು. ಇದ್ರ ಜೊತೆಯಲ್ಲಿ ವಿಕ್ರಮ್ ಡ್ಯಾನ್ಸ್ ನೋಡಿದ್ರೆ ಅನದರ್ ಅಪ್ಪು ಅನಿಸುತ್ತೆ ಅಂತ ಕೊಂಡಾಡಿದ್ರು.

ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಕಿರಿಮಗನ ಸಿನಿಮಾ ಬಗ್ಗೆ ಮನಸಾರೆ ಮಾತನಾಡಿದ್ರು. ಅಪ್ಪು ಕೂಡ ನನ್ ಮಗನ ಮೇಲೆ ಪ್ರೀತಿ ಇಟ್ಟಿದ್ರು. ಶಿವಣ್ಣ ಕೂಡ ಪದೇ ಪದೇ ಕಾಲ್ ಮಾಡಿ ಕೇಳ್ತಾರೆ ಸಿನಿಮಾ ಬಗ್ಗೆ. ನಾನು ಇದೀನಿ, ನಿನ್ ಸಿನಿಮಾ ಜೊತೆ ಇರ್ತೀನಿ ಅಂತಾರೆ. ನೀವು ಕೂಡ ನನ್ ಮಗನ ಸಿನಿಮಾ ಗೆಲ್ಲಿಸ್ತೀರಾ ಅನ್ಕೊಂಡಿದ್ದೀನಿ ಅಂದ್ರು.

ಒಬ್ಬ ಡೈರೆಕ್ಟರ್ ಮನೇಲಿ ಇದೀನಿ. ಆದ್ರೂ ಕೂಡ ನೀವು ಯಾಕೆ ಮಕ್ಕಳಿಗೆ  ಸಿನಿಮಾ ಮಾಡಿಲ್ಲ ಅಂತ ಎಲ್ಲರೂ ಕೇಳ್ತಾರೆ. ಶುರು ನಾನೇ ಮಾಡ್ಬೇಕಿತ್ತು. ಅವರ ಕಾಲಲ್ಲಿ ಅವರೇ ನಿಲ್ಲಲಿ. ನಾನು ಡೈರೆಕ್ಟ್ ಮಾಡಿದ್ರೆ ಅದು ನನ್ ಸಿನಿಮಾ ಆಗುತ್ತೆ. ನಾನು ಯಾವತ್ತೂ ಅತ್ತಿಲ್ಲ. ತಾಕತ್ತಿದ್ರೆ ನಿಮ್ ಸಿನಿಮಾ ಮೂಲಕ ನನ್ನ ಅಳಿಸಿ ಅಂತ ಮಕ್ಕಳಿಗೆ ಚಾಲೆಂಜ್ ಹಾಕಿದ್ರು ಕನಸುಗಾರ.

ರವಿ ಸರ್ ಮಕ್ಕಳು ನನ್ನ ಮಕ್ಕಳಿದ್ದ ಹಾಗೆ. ತ್ರಿವಿಕ್ರಮ ಸಿನಿಮಾದ ಟ್ರೈಲರ್ ನೋಡಿ ಸಖತ್ ಫಿದಾ ಆಗಿದ್ದೀನಿ ಅಂತ ಸೆಂಚುರಿ ಸ್ಟಾರ್ ಗುಣಗಾನ ಮಾಡಿದ್ರು. ಅಪ್ಪುನೇ ನೋಡಿದ ಹಾಗೆ ಆಯ್ತು ವಿಕ್ರಮ್ ಡ್ಯಾನ್ಸ್ ನೋಡಿ. ಇವತ್ತು ಹೇಳ್ತಾ ಇದೀನಿ  ಖಂಡಿತ ನಿಮ್ಮ ಮಕ್ಕಳು ನಿನ್ನ ಅಳಿಸ್ತಾರೆ. ಅವರ ಮೇಲೆ ನಂಬಿಕೆ ನನಗಿದೆ ಎಂದು ಭರವಸೆ ಕೊಟ್ರು ಬೈರಾಗಿ.

ವಿಕ್ರಮ್ ನೋಡಿ ಟಗರು ಡಾಲಿ ಹೇಳಿದ್ದೇನು..?

ತ್ರಿವಿಕ್ರಮನ ಖದರ್ ಡೈಲಾಗ್​ಗೆ  ಫ್ಯಾನ್ಸ್ ಫಿದಾ

ಆಂಕರ್ ಅನುಶ್ರೀ ನಿರೂಪಣೆಯಲ್ಲಿ ತ್ರಿವಿಕ್ರಮ ಚಿತ್ರದ ಪ್ರೀ- ರಿಲೀಸ್ ಇವೆಂಟ್ ಅದ್ಧೂರಿಯಾಗಿ ನಡೆಯಿತು. ವೇದಿಕೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಮಸ್ತ್ ಮನರಂಜನೆಯ ರಸದೌತಣ ಸಿಕ್ತು. ಟಗರು ಡಾಲಿ ಕೂಡ ತ್ರಿವಿಕ್ರಮ ಸಿನಿಮಾ ಡೈಲಾಗ್ ಹೊಡೆದು ಟಗರು ಸ್ಟೈಲ್​ನಲ್ಲೇ  ವಿಶ್ ಮಾಡಿದ್ರು.

ಸಹನಾಮೂರ್ತಿ ನಿರ್ದೆಶನದಲ್ಲಿ ಕಾಶ್ಮೀರ ಸೇರಿ ಅದ್ಭುತ ಲೊಕೇಶನ್​ಗಳಲ್ಲಿ ತ್ರಿವಿಕ್ರಮ ಸಿನಿಮಾ ತಯಾರಾಗಿದೆ.  ಚಿತ್ರದ ಮೇಲೆ ಕುತೂಹಲ, ಕಾತರ ದುಪ್ಪಟ್ಟಾಗಿದೆ. ಚೊಚ್ಚಲ ಸಿನಿಮಾಗೆ ವಿಶ್ ಮಾಡೋ ಸಲುವಾಗಿಯೇ ಒಂದೇ ವೇದಿಕೆಯಲ್ಲಿ ಹಲವು ಸ್ಟಾರ್​ಗಳು ಒಂದಾಗಿದ್ರು. ನಟಿ ಶ್ರುತಿ,  ಶ್ರೀನಗರ ಕಿಟ್ಟಿ, ನಿಶ್ವಿಕಾ ನಾಯ್ಡು ಮಾತನಾಡಿ, ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತೆ ಅಂದ್ರು.

ಇದಾದ ನಂತ್ರ ಚಿತ್ರದ ನಾಯಕ ವಿಕ್ರಮ್ ಮಾತನಾಡಿ ಅಪ್ಪುನ ನೆನಪು ಮಾಡಿಕೊಂಡ್ರು. ಶಿವನಿಗೆ ಮೂರು ಕಣ್ಣು. ನಂಗೂ ಕೂಡ ಮೂರು ಕಣ್ಣು ಇದೆ ಒಂದು ನನ್ ಬ್ರದರ್, ಎರಡನೆಯ ಕಣ್ಣು ನನ್ ತಂದೆಯ ಸಮಾನ ಶಿವಣ್ಣ, ಮೂರನೇಯ ಕಣ್ಣು ನನ್ ತಂದೆ ವಿ ರವಿಚಂದ್ರನ್. ನನ್ ತಂದೆಗೆ ಪ್ರೀತಿ ಕೊಟ್ಟಿದೀರಾ ನಂಗೂ ಒಂದ್ ಚಾನ್ಸ್ ಕೊಡಿ ಎಂದ್ರು.

ಸಂಗೀತ ರಸಸಂಜೆಯಲ್ಲಿ ಎಲ್ಲರಿಗೂ ಹಾಡುಗಳ ಮೂಲಕ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯಾ ರಂಜಿಸಿದ್ರೆ, ನಿರೂಪಣೆಯ ಮೂಲಕ ಎಲ್ಲರ ಗಮನ ಸೆಳೆದಿದ್ದು ಆ್ಯಂಕರ್ ಅನುಶ್ರೀ. ಒಟ್ಟಾರೆ ಇದೇ ಜೂನ್ 24ಕ್ಕೆ ತ್ರಿವಿಕ್ರಮನ ಅಬ್ಬರ ಶುರುವಾಗಲಿದೆ. ವಿಕ್ರಮ್ ಗತ್ತು ಗಮ್ಮತ್ತು ತಾಕತ್ತು ನೋಡೋಕೆ ಕಾಯಲೇಬೇಕು. ರಾಮ್ಕೋ ಸೋಮಣ್ಣ ಕೂಡ ಅದ್ಧೂರಿಯಾಗಿ ಸಿನಿಮಾನ ನಿರ್ಮಿಸಿದ್ದು, ಸಖತ್ ಕಾನ್ಫಿಡೆಂಟ್ ಆಗಿದ್ದಾರೆ. ಡೈರೆಕ್ಟರ್ ಸಹನಾ ಮೂರ್ತಿ ಅವ್ರಿಗೂ ಇದು ಭರ್ಜರಿ ಕಂಬ್ಯಾಕ್​​ ಸಿನಿಮಾ ಆಗಲಿದೆ. ತ್ರಿವಿಕ್ರಮ ಸಿನಿಮಾಗೆ ಪವರ್ ಟಿವಿ ಕಡೆಯಿಂದ ಆಲ್ ದಿ ಬೆಸ್ಟ್ ಹೇಳೋಣ.

ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES