Thursday, January 23, 2025

ಉಗ್ರರ ನಿಗ್ರಹಕ್ಕೆ ಮಂಗಳೂರಿನಲ್ಲಿ ಸ್ಪೆಷಲ್ ಸ್ಕ್ವಾಡ್ ರೆಡಿ..!

ಮಂಗಳೂರು: ಉಗ್ರರ ಸ್ಲೀಪರ್ ಸೆಲ್ ಎಂದೇ ಕುಖ್ಯಾತಿ ಪಡೆದಿರುವ ಮಂಗಳೂರಿಗೆ ಉಗ್ರರನ್ನು ನಿಗ್ರಹಿಸುವ ದಳ ಅಗತ್ಯವಾಗಿ ಬೇಕಾಗಿತ್ತು. 2008ರ ಮುಂಬೈ ಸರಣಿ ಸ್ಫೋಟದ ಬಳಿಕ ದೇಶದ ಎಲ್ಲ ಜಿಲ್ಲೆಗಳಲ್ಲೂ ಕೌಂಟರ್ ಟೆರರಿಸ್ಟ್ ಸ್ಕ್ವಾಡ್ ಅನುಷ್ಠಾನಕ್ಕೆ ತರಬೇಕು ಎನ್ನುವ ಬಗ್ಗೆ ಸರಕಾರ ಹೆಜ್ಜೆ ಇಟ್ಟಿತ್ತು. ಆದರೆ, ಅದಾಗಿ 15 ವರ್ಷಗಳ ಬಳಿಕ ಮಂಗಳೂರಿನಲ್ಲಿ ಉಗ್ರ ನಿಗ್ರಹದ ಬಗ್ಗೆ ತರಬೇತಿ ಪಡೆದ ದಳ ಒಂದನ್ನು ರೆಡಿ ಮಾಡಲಾಗಿದೆ. ಅದಕ್ಕೆಂದೇ ಪ್ರತ್ಯೇಕ ತರಬೇತಿ ಪಡೆದ ದಳ ಇದಾಗಿದ್ದು, ಅದರ ಕಾರ್ಯಕ್ಷಮತೆ ಹೇಗಿರುತ್ತೆ ಅನ್ನುವ ಬಗ್ಗೆ ಮಂಗಳೂರಿನಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.

ಕಟ್ಟಡದಲ್ಲಿ ಅಡಗಿದ್ದ ಉಗ್ರರನ್ನು ಸದೆಬಡಿಯುವುದು ಹೇಗೆ, ಕಟ್ಟಡದ ಒಳಹೊಕ್ಕು ಹೊರಗೆ ಬರುವ ರೀತಿಯ ಚಿತ್ರಣವನ್ನೂ ಸಿಬಂದಿ ಕಟ್ಟಿಕೊಟ್ಟರು. ಅಲ್ಲದೆ, ವಿದೇಶಿ ನಿರ್ಮಿತ ಪಿಸ್ತೂಲ್, ರೈಫಲ್‌ಗಳನ್ನು ಅದರ ಬಳಕೆಯ ಪ್ರಾತ್ಯಕ್ಷಿಕೆಯನ್ನೂ ತೋರಿಸಿದರು. ಸದ್ಯಕ್ಕೆ ಅಮೆರಿಕ ನಿರ್ಮಿತ ಕೋಲ್ಟ್ ರೈಫಲ್, ಎಕೆ 47 ರೈಫಲ್, ಇನ್ಸಾಸ್ ಎಕ್ಸ್ ಕ್ಯಾಲಿಬರ್, ಎಸ್ಎಲ್‌ಆರ್, ಅಸಾಲ್ಟ್ ರೈಫಲ್, 9 ಎಂಎಂ ಪಿಸ್ತೂಲನ್ನು ತಂಡ ಹೊಂದಿದ್ದು, ಅವುಗಳ ಕಾರ್ಯ ನಿರ್ವಹಣೆ ಬಗ್ಗೆ ತಂಡದ ನೇತೃತ್ವ ವಹಿಸಿರುವ ಸುಬ್ರಹ್ಮಣ್ಯ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಬಸ್ಸನ್ನು ಅಪಹರಿಸಿ, ಅದರಲ್ಲಿ ತಪ್ಪಿಸಿಕೊಂಡು ಹೋಗುವ ಉಗ್ರರನ್ನು ಪೊಲೀಸ್ ಜೀಪಿನಲ್ಲಿ ಅಡ್ಡಹಾಕಿ ನಿಗ್ರಹಿಸುವ ಕಾರ್ಯಾಚರಣೆ ಸೂಪರ್ ಆಗಿತ್ತು. ಬಸ್ಸಿನ ಒಂದು ಬದಿಯಿಂದ ಒಳಭಾಗಕ್ಕೆ ಶೂಟ್ ಮಾಡಿದರೆ, ಇನ್ನೊಂದು ಬದಿಯಿಂದ ಕಮಾಂಡೋ ಯೋಧರು ಒಳಹೊಕ್ಕ ರೀತಿಯಲ್ಲಿ ಬಸ್ಸಿನೊಳಗೆ ತೆರಳಿ ಒಬ್ಬೊಬ್ಬರನ್ನೇ ಹೊರಕ್ಕೆ ತಂದು ನೆಲಕ್ಕುರಳಿಸುವ ಸನ್ನಿವೇಶ ತೋರಿಸಿಕೊಟ್ಟರು.

ಇದೇ ವೇಳೆ, ನಗರ ಸಶಸ್ತ್ರ ದಳಕ್ಕೆ ಹೊಸತಾಗಿ ಸೇರ್ಪಡೆಯಾದ ವರುಣ್ ಹೆಸರಿನ ಜಲಫಿರಂಗಿ ವಾಹನದ ಕಾರ್ಯಾಚರಣೆಯನ್ನೂ ಸಿಬ್ಬಂದಿ ಸಮರ್ಥವಾಗಿ ಕಟ್ಟಿಕೊಟ್ಟರು. ಜನರ ಪ್ರತಿಭಟನೆ ಹಿಂಸೆಗೆ ತಿರುಗಿದ ಸಂದರ್ಭದಲ್ಲಿ ಇಂತಹ ಜಲಫಿರಂಗಿಗಳ ಕಾರ್ಯ ಹೆಚ್ಚು ಉಪಯೋಗಕ್ಕೆ ಬರುತ್ತದೆ. ದೆಹಲಿ, ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗಳನ್ನು ಇದೇ ಜಲಫಿರಂಗಿಯ ಮೂಲಕ ಹತ್ತಿಕ್ಕುವ ಕಾರ್ಯ ನಡೆಸಲಾಗುತ್ತದೆ. ಇದೇ ಮೊದಲ ಬಾರಿಗೆ ಮಂಗಳೂರಿಗೆ ಜಲಫಿರಂಗಿ ಯಂತ್ರವನ್ನು ತರಲಾಗಿದ್ದು ಪ್ರತಿಭಟನೆ ನಡೆಸುತ್ತಿದ್ದ ಯುವಕರ ಗುಂಪಿನ ಮೇಲೆ ನೀರನ್ನು ಪ್ರಬಲ ವೇಗದಲ್ಲಿ ಹಾಯಿಸಿ, ಹಿಂದಕ್ಕಟ್ಟುವ ಜಲಫಿರಂಗಿ ಪ್ರಾತ್ಯಕ್ಷಿಕೆಯನ್ನು ಮಾಡಲಾಗಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮುಂಚೂಣಿಯಲ್ಲಿ ನಿಂತು ಉಗ್ರ ನಿಗ್ರಹ ದಳದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಮಂಗಳೂರಿನ ಸಿಎಆರ್ ಯೂನಿಟ್‌ನಲ್ಲಿರುವ 35 ಸಿಬಂದಿಯನ್ನು ಬೆಂಗಳೂರಿನಲ್ಲಿ ವಿಶೇಷ ತರಬೇತಿಗೆ ಒಳಪಡಿಸಿದ್ದು ಉಗ್ರರನ್ನು ನಿಗ್ರಹಿಸುವ ಕಾರ್ಯಕ್ಕೆ ರೆಡಿ ಮಾಡಲಾಗಿದೆ. ಯಾವುದೇ ತುರ್ತು ಸ್ಥಿತಿಯನ್ನು ಎದುರಿಸುವ ರೀತಿ 35 ಮಂದಿಯನ್ನು ಸಜ್ಜುಗೊಳಿಸಲಾಗಿದ್ದು, ಮಂಗಳೂರಿನಲ್ಲಿ ಈ ತಂಡವನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಮಾಡಲಾಗಿದೆ.

ಗಿರಿಧರ್ ಶೆಟ್ಟಿ, ಪವರ್ ಟಿವಿ ಮಂಗಳೂರು

RELATED ARTICLES

Related Articles

TRENDING ARTICLES