ಮಂಗಳೂರು: ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿರುವುದನ್ನು ವಿರೋಧಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಫಳ್ನೀರ್ ನಿಂದ ಮೆರವಣಿಗೆ ಬಂದ ಕಾರ್ಯಕರ್ತರು ಅತ್ತಾವರದ ಆದಾಯ ತೆರಿಗೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಆಗಿದ್ದರಿಂದ ನಡುವಲ್ಲೇ ಕಾರ್ಯಕರ್ತರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ, ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಲೇ ಕಾರ್ಯಕರ್ತರು ಪೊಲೀಸರ ಜೊತೆ ಜಟಾಪಟಿ ನಡೆಸಿದ್ದಾರೆ.
ಅದಲ್ಲದೇ, ಪೊಲೀಸರ ಬ್ಯಾರಿಕೇಡ್ ಮೇಲೆ ಕಾರ್ಯಕರ್ತರು ಏರಿ ಹೋಗಿದ್ದು ತಳ್ಳಾಟ ನಡೆಸಿದ್ದಾರೆ. ಬಳಿಕ ಇನ್ನೊಂದು ಕಡೆಯಿಂದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ರಾಹುಲ್ ಗಾಂಧಿಗೆ ಜೈಕಾರ, ಮೋದಿ ಸರಕಾರಕ್ಕೆ ಧಿಕ್ಕಾರ ಕೂಗುತ್ತಾ ಕಾರ್ಯಕರ್ತರು ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮಾನಾಥ ರೈ, ಐವನ್ ಡಿಸೋಜ, ಹರೀಶ್ ಕುಮಾರ್, ಮಿಥುನ್ ರೈ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.