Wednesday, January 22, 2025

ಬಿಸಿಯೂಟ ನೌಕರರಿಗೆ ವೇತನ ಹೆಚ್ಚಿಸಲು ಶಿಕ್ಷಣ ಸಚಿವರಿಗೆ ಮನವಿ

ಬೆಂಗಳೂರು: 60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಬಿಸಿಯೂಟ ಯೋಜನೆಯಿಂದ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ ಹಾಗೂ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್‍ರಿಗೆ ಮನವಿ ಸಲ್ಲಿಸಿದ್ದಾರೆ.

ಬಿಸಿಯೂಟ ನೌಕರರಿಗೆ ತಿಂಗಳಿಗೆ 3 ವರೆ ಸಾವಿರ ರೂ. ಮಾತ್ರ ನೀಡಲಾಗುತ್ತಿದ್ದು, ಇದು ಏರಿಸಬೇಕೆಂದು ಒತ್ತಾಯಿಸಿದ್ದಾರೆ. ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭವಾದ ವರ್ಷದಿಂದಲೂ ಮಕ್ಕಳ ಶೈಕ್ಷಣಿಕ ಉನ್ನತಿಗೆ, ಗೈರುಹಾಜರಿ ತಡೆಗಟ್ಟಲು, ಶಿಕ್ಷಣ ಇಲಾಖೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆಯವರನ್ನು 60 ವರ್ಷ ವಯೋಮಾನ ನೆಪವೊಡ್ಡಿ ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಲಾಗಿದೆ ಎಂದು ದೂರಿದ್ದಾರೆ.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುವುದರ ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಮತ್ತು ಉತ್ತಮ ಫಲಿತಾಂಶ ಹೊರಹೊಮ್ಮಲು ಯೋಜನೆಯಡಿ ಸೇವೆ ಸಲ್ಲಿಸಿದ ತಾಯಂದಿರು ತಮ್ಮ ಜೀವ ಸವೆಸಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಬಡ, ರೈತ, ಕೃಷಿಕೂಲಿಕಾರರ, ದೀನದಲಿತ ಮಕ್ಕಳಿಗೆ ದಿನನಿತ್ಯ ಬಿಸಿ ಆಹಾರ ಬೇಯಿಸಿ ಬಡಿಸುವುದರೊಟ್ಟಿಗೆ ಆ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಮಹಿಳೆಯರ ತಾಯ್ತನದ ಪರಿಶ್ರಮವಿದೆ. ಆದರೆ ಸರ್ಕಾರ ಏಕಾಏಕಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಗೊಳಿಸುತ್ತಿರುವುದು ಅಮಾನವೀಯ ಮತ್ತು ಮಹಿಳಾ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES