ಬೆಂಗಳೂರು: ಸದ್ಯ ನಗರದ ರಸ್ತೆಗಳಲ್ಲಿ ಸಂಚಾರ ನಿಜಕ್ಕೂ ಸವಾಲಿನ ಕೆಲಸ. ಕಳೆದ ಹಲವು ವರ್ಷದಿಂದ ನಡೆಯುತ್ತಿರೋ ಮೆಟ್ರೋ ಕಾಮಗಾರಿ ಜನರ ನಿದ್ದೆ ಹಾಳು ಮಾಡಿದೆ. ಜಯನಗರ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿತ್ಯ ವಾಹನ ಸಂಚಾರ ತೀವ್ರವಾಗಿದೆ, ರಸ್ತೆ ವಿಭಜಕವಿಲ್ಲದ ಕಾರಣ ವಾಹನಗಳು ಅಡ್ಡಾದಿಡ್ಡಿಯಾಗಿ ಚಲಿಸಿ ಸಂಚಾರಕ್ಕೆ ತೊಂದರೆಯಾಗ್ತಿದೆ. ಇದೀಗ ಮೆಟ್ರೊ ಕಾಮಗಾರಿಗಾಗಿ ರಸ್ತೆಯ ಮಧ್ಯಭಾಗದಲ್ಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪರಿಣಾಮ ಸಂಚಾರ ದಟ್ಟಣೆ ತೀವ್ರವಾಗಿದ್ದು, ಜೊತೆಗೆ ರಸ್ತೆ ಹದಗಟ್ಟಿರೋ ಕಾರಣ ಸಂಚಾರ ದುಸ್ಥರ ಎನ್ನಿಸಿದೆ.
ಕಾಮಗಾರಿ ಆರಂಭವಾದ ಬಳಿಕ ಯಾವುದೇ ರೀತಿಯ ನಿರ್ವಹಣೆ ಕೈಗೊಳ್ಳದಿರುವುದನ್ನು ರಸ್ತೆಯ ಸ್ಥಿತಿಯೇ ಹೇಳುತ್ತಿದೆ. ಹತ್ತು ಅಡಿ ಅಂತರಕ್ಕೂ ಗುಂಡಿ. ಅಲ್ಲಲ್ಲಿ ಭಾರೀ ಕಲ್ಲುಗಳು. ಇದರಿಂದ ಸ್ವಲ್ಪ ಆಯತಪ್ಪಿದ್ರೂ ಅಪಘಾತ ಖಚಿತ. ಮಳೆಗಾಲದ ಜತೆಗೆ ನಮ್ಮ ಮೆಟ್ರೋ ಕಾಮಗಾರಿ ನಡೆಯುವ ಮಾರ್ಗ ಅಕ್ಷರಶಃ ಹೊಂಡಗಳಾಗಿವೆ. ಆರ್ ವಿ ರಸ್ತೆ ಎಲೆಕ್ಟ್ರಾನಿಕ್ ಸಿಟಿ ಮಾರ್ಗದ ಮೆಟ್ರೋ ನಿಲ್ದಾಣಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಈ ಮಾರ್ಗದಲ್ಲಿ ವಾಹನಗಳ ಚಾಲನೆ ತಂತಿ ಮೇಲಿನ ನಡಿಗೆಯಂತಾಗಿದೆ.
ಆದರೆ, BMRCL ಮಾತ್ರ ಈ ವಿಚಾರದಲ್ಲಿ ಜಾಣಮೌನ ವಹಿಸಿದೆ. ಗುತ್ತಿಗೆದಾರರು ಮೆಟ್ರೋ ಕಾಮಗಾರಿಯಲ್ಲಿ ಬ್ಯುಸಿ ಆಗಿದ್ದಾರೆ. ಇದೆಲ್ಲದರ ನಡುವೆ ಮೆಟ್ರೋ ಕಾಮಗಾರಿಗಳ ರಸ್ತೆ ಡೇಂಜರ್ ಝೋನ್ ಆಗಿ ಮಾರ್ಪಟ್ಟಿದೆ. ಹದಗೆಟ್ಟ ರಸ್ತೆಗಳು ಮತ್ತು ಕಾಮಗಾರಿ ಪ್ರಗತಿಯಲ್ಲಿರುವುದರಿಂದ ವಾಹನಗಳ ವೇಗ ಕೂಡ ಕುಸಿದಿದೆ. ಆದ್ರೆ ಮೆಟ್ರೋ ಕಾಮಗಾರಿ ವೇಳೆ ರಸ್ತೆ ಜವಾಬ್ದಾರಿ ಹೊತ್ತುಕೊಂಡಿರೋ ನಮ್ಮ ಮೆಟ್ರೋ ಯಾವುದೇ ಕ್ರಮ ಕೈಗೊಂಡಿಲ್ಲ.
ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳು, ಯಂತ್ರಗಳನ್ನು ಇದೇ ರಸ್ತೆಯಲ್ಲಿ ಕೊಂಡೊಯ್ಯಲಾಗುತ್ತಿದ್ದು. ಭಾರಿ ಗಾತ್ರದ ಸಲಕರಣೆಗಳ ಸಾಗಣೆಯಿಂದ ರಸ್ತೆ ಡಾಂಬರು ಕಿತ್ತುಹೋಗಿದೆ. ಇದರಿಂದ ರಸ್ತೆ ಗುಂಡಿಗಳು ವಾಹನ ಸವಾರರಿಗೆ ಮೃತ್ಯುಕೂಪಗಳಂತೆ ಕಾದುಕುಳಿತಿವೆ. ಎರಡನೇ ಹಂತದ ಮೆಟ್ರೋ ಕಾಮಗಾರಿ ನಾಲ್ಕೈದು ವರ್ಷದಿಂದ ಪ್ರಗತಿಯಲ್ಲಿದೆ. ಆದರೆ, ಆಮೆಗತಿಯ ಕಾಮಗಾರಿಯ ಎಫೆಕ್ಟ್ ಸ್ಥಳೀಯರು ಮತ್ತು ಆ ಮಾರ್ಗದ ವಾಹನ ಸವಾರರ ಮೇಲೆ ಬೀರುತ್ತಿದೆ.
ಒಟ್ಟಾರೆ ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರಿಗೆ ಸಂಚಾರ ಸವಾಲಾಗಿ ಪರಿಣಮಿಸಿರೋದಂತು ಸತ್ಯ. ಮೊನ್ನೆ ಮೈಸೂರು ರಸ್ತೆ ಸರಣಿ ಅಪಘಾತವಾದ್ರೂ ಮೆಟ್ರೋನಿಗಮ ತಲೆಕೆಡಿಸಿಕೊಂಡಿಲ್ಲ, ಇನ್ನಾದ್ರು ಅನಾಹುತ ಆಗುವ ಮುನ್ನ ಮೆಟ್ರೋ ನಿಗಮ ಎಚ್ಚೆತ್ತು ರಸ್ತೆಗಳನ್ನು ದುರಸ್ಥಿ ಮಾಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು