Sunday, January 19, 2025

ವೃದ್ಧ ಮಹಿಳೆಯರಿಗೆ ಶಿವಮೊಗ್ಗ ಪೊಲೀಸರ ನೆರವು; ಸಾರ್ವಜನಿಕರಿಂದ ಮೆಚ್ಚುಗೆ

ಶಿವಮೊಗ್ಗ : ಪೊಲೀಸರೆಂದರೆ ದರ್ಪ, ಹಮ್ಮು, ಬಿಮ್ಮು, ಸದಾ ಒರಟುತನ, ಕೇಸು, ಎಫ್.ಐ.ಆರ್, ಅದು, ಇದು ಅಷ್ಟೇನಾಇದಕ್ಕೆಲ್ಲದಕ್ಕೂ ಮೀರಿ ಕೆಲವೊಮ್ಮೆ ಪೊಲೀಸರು ಜನರಿಗೆ ಬಹಳ ಹತ್ತಿರವಾಗಿಬಿಡುತ್ತಾರೆ. ನಮಲ್ಲೂ ಮಾನವೀಯತೆ ಇದೆ ಎಂದು ಹಲವಾರು ಬಾರಿ ಕೆಲ ಪೊಲೀಸರು ತೋರಿಸಿಕೊಟ್ಟಿದ್ದಾರೆ. ಪೊಲೀಸರೆಂದರೆ ಕೇವಲ ಕೇಸು, ಎಫ್.ಐ.ಆರ್. ಲಾಠಿ ಬೀಸೋದು ಅಷ್ಟೇ ಅಲ್ಲ. ನಮ್ಮಲ್ಲೂ ಮಾನವೀಯತೆ ಇದೆ ಎಂಬುದನ್ನು ಇಲ್ಲಿಯೂ ತೋರಿಸಿಕೊಟ್ಟಿದ್ದಾರೆ. ಅರೇ ಪೊಲೀಸರು ಅಂತದ್ದೇನು ಮಾಡಿದ್ದಾರೆ ಅಂತಾ ಪ್ರಶ್ನೆ ಮಾಡ್ತಾ ಇದ್ದಿರಾ.!?

ಪೊಲೀಸರೆಂದರೆ, ಕೇವಲ ಟಾಕು-ಟೀಕು, ಹಮ್ಮು-ಬಿಮ್ಮು, ಸದಾ ದರ್ಪ, ರೋಫ್ ಹೊಡೆಯೋದು, ಒರಟುತನ, ಕೇಸು, ಎಫ್.ಐ.ಆರ್. ಎಂಬುದಷ್ಟೇ ನಮ್ಮ ಮನಸ್ಸಿನಲ್ಲಿ ಬಂದು ಬಿಡುತ್ತೆ. ಆದ್ರೆ, ಇವಕ್ಕೆಲ್ಲಾ ಅಪವಾದ ಎಂಬಂತೆ, ಮಲೆನಾಡು ಜಿಲ್ಲೆ ಶಿವಮೊಗ್ಗದ ಪೊಲೀಸರು, ನಮ್ಮಲ್ಲೂ ಮಾನವೀಯತೆ ಇದೆ ಎಂಬುದನ್ನ ತೋರಿಸಿಕೊಟ್ಟಿದ್ದಾರೆ.

ಶಿವಮೊಗ್ಗದ ಕುಂಸಿ ಠಾಣೆ ಪೊಲೀಸರು, ಇತ್ತೀಚಿಗಷ್ಟೇ, ಯಾರಿಗೂ ತಿಳಿಯದಂತೆ, ಒಂದು ಮಹತ್ಕಾರ್ಯ ಮಾಡಿದ್ದು, ಆದ್ರೆ, ಒಳ್ಳೆಯ ಕೆಲಸ ಎಲ್ಲರಿಗೂ ತಿಳಿದಿದ್ದು, ಶಿವಮೊಗ್ಗದ ಜನತೆ, ಈ ಪೊಲೀಸರನ್ನ ತುಂಬು ಹೃದಯದಿಂದ ಶ್ಲಾಘಿಸುತ್ತಿದ್ದಾರೆ.

ಶಿವಮೊಗ್ಗದ ಕುಂಸಿಯ ಮುಖ್ಯ ರಸ್ತೆಯಲ್ಲಿರುವ ಈ ಗೂಡಂಗಡಿ ಹೊಟೇಲ್​​ನ ಇಬ್ಬರು ಅಜ್ಜಿಯರು ನಡೆಸುತ್ತಿದ್ದು, ಇನ್ನೇನು ಒಂದೆರೆಡು ಮಳೆ ಬಿದ್ದಿದ್ದರೆ, ಈ ಗೂಡಂಗಡಿ ಹೊಟೇಲ್​ ಬೀಳುವಂತಿತ್ತು. ಇದನ್ನು ಕಂಡ ಕುಂಸಿ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಮತ್ತು ಸಿಬ್ಭಂಧಿಗಳು, ಕೂಡಲೇ, ಹೊಟೇಲ್​​ಗೆ ತಮ್ಮದೇ ಖರ್ಚಿನಲ್ಲಿ ತಗಡಿನ ಶೀಟುಗಳು, ಮರಗಳನ್ನು ತರಿಸಿ, ನವೀಕರಿಸಿದ್ದಾರೆ. 16 ವರ್ಷಗಳಿಂದ ಜೋಪಡಿ ರೀತಿಯಲ್ಲಿದ್ದನ್ನು ಹೊಸ ರೀತಿಯ ನವೀಕರಣ ಮಾಡಿ ಇಬ್ಬರು ಅಜ್ಜಿಯರ ಪಾಲಿಗೆ ಮರೆಯಲಾರದ ಮಾಣಿಕ್ಯ ಎನಿಸಿಕೊಂಡಿದ್ದಾರೆ.

ಅಂದಹಾಗೆ, ತಮ್ಮ ಇಳಿ ವಯಸ್ಸಿನಲ್ಲಿಯೂ, ಯಾರ ಮೇಲೂ ಅವಲಂಬಿಸದೇ, ಇಬ್ಬರು ಸಹೋದರಿಯರಾದ ವೃದ್ಧೆಯರಿಗೆ, ಕುಂಸಿ ಠಾಣಾ ಪೊಲೀಸರು, ತುಂಬು ಹೃದಯದ ಅಂತರಾಳದಿಂದ ತಮ್ಮ ಸಹಾಯಹಸ್ತವನ್ನು ಚಾಚಿದ್ದು, ಇದೀಗ, ತಮ್ಮ ಹೊಟೆಲ್ ನವೀಕರಣವಾಗಿದ್ದಕ್ಕೆ ಅಜ್ಜಿ ಸಂತಸ ವ್ಯಕ್ತಪಡಿಸಿ, ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಒಟ್ಟಿನಲ್ಲಿ, ಹಲವಾರು ಕಾರಣಗಳಿಗಾಗಿ ಪೊಲೀಸರಿಗೆ ಜರಿಯುವ ನಾವುಗಳು, ಅವರು ಮಾಡಿದ ಒಳ್ಳೆಯ ಕಾರ್ಯಕ್ಕೆ ಶ್ಲಾಘಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಏನೇಯಾಗ್ಲೀ, ಇಂದಿನ ಬಹುತೇಕ ಅಧಿಕಾರಿಗಳು ದುಡ್ಡು ಮಾಡುವುದೊಂದೇ ನಮ್ಮ ಕಾಯಕ ಎಂದುಕೊಂಡು, ಸರ್ಕಾರ ನಮಗೆ ಸಂಬಳ ಕೊಡುತ್ತದೆ ಓಡಾಡಲು ವಾಹನ ನೀಡಿದೆ ದುಡ್ಡು ಮಾಡಲು ಅಧಿಕಾರವಿದೆ ಎಂದು ಕುಳಿತುಕೊಳ್ಳದೇ ಕುಂಸಿ ಪೊಲೀಸರು, ನಮ್ಮಲ್ಲೂ ಮಾನವೀಯತೆ ಇದೆ ಎಂದು ತೋರಿಸಿಕೊಟ್ಟಿದ್ದಲ್ಲದೇ, ಇತರೇ ಪೊಲೀಸರಿಗೆ ಮಾದರಿಯಾಗಿದ್ದಾರೆ. ಅಭಯ್ ಪ್ರಕಾಶ್ ಅಂಡ್ ಟೀಮ್ ಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

ಗೋ.ವ. ಮೋಹನಕೃಷ್ಣ, ಪವರ್ ಟಿ.ವಿ. ಶಿವಮೊಗ್ಗ

RELATED ARTICLES

Related Articles

TRENDING ARTICLES