Monday, December 23, 2024

ನ್ಯಾಷನಲ್​​ ಹೆರಾಲ್ಡ್ ಕೇಸ್​​: ED ಅಧಿಕಾರಿಗಳಿಗೆ ರಾಗಾ ಗೊಂದಲದ ಹೇಳಿಕೆ

ನವದೆಹಲಿ: ನ್ಯಾಷನಲ್​​ ಹೆರಾಲ್ಡ್​​ ಪತ್ರಿಕೆ ಖರೀದಿ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಅವರನ್ನು 2ನೇ ದಿನವೂ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ರು. ವಿಚಾರಣೆಗೆ ಹಾಜರಾಗುವ ಮುನ್ನ ಇಂದು ಕೂಡ ಕಾಂಗ್ರೆಸ್ ಕಚೇರಿಗೆ ತೆರಳಿ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಲ್ಲಾ ಕಾರ್ಯಕರ್ತರ ನೈತಿಕ ಬೆಂಬಲ ಪಡೆದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎರಡನೇ ದಿನವೂ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.ರಾಗಾ ವಿಚಾರಣೆಯಲ್ಲಿ ಯಂಗ್ ಇಂಡಿಯಾಗೆ ಹಣಕಾಸು ನೆರವು ನೀಡಿದ್ದ ಕೊಲ್ಕತ್ತಾ ಮೂಲದ ಡಾಟೇಕ್ಸ್ ಬಗ್ಗೆ ED ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಯಂಗ್ ಇಂಡಿಯಾಕ್ಕಿರುವ ವಿದೇಶಿ ಹಣ ವರ್ಗಾವಣೆ ಬಗ್ಗೆಯೂ ಇಡಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು
ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

2ನೇ ದಿನವೂ ಕೂಡ ವಿಚಾರಣೆಗೆ ಹಾಜರಾಗುವ ಮುನ್ನ ರಾಹುಲ್ ಗಾಂಧಿ ಅವರು ತಮ್ಮ ಝುಡ್ ಪ್ಲಸ್ ವರ್ಗದ ಸಿಆರ್​ಪಿಎಫ್​ ಭದ್ರತಾ ಬೆಂಗಾವಲಿನೊಂದಿಗೆ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿಗೆ ಆಗಮಿಸಿದ್ರು. ರಾಗಾ ಅವರೊಂದಿಗೆ ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ರು.

ರಾಹುಲ್ ಗಾಂಧಿಯ ಇಡಿ ವಿಚಾರಣೆ ವಿರೋಧಿಸಿ, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಪ್ರತಿಭಟನೆ ನಡೆಸಿದ್ರು. ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಛತ್ತೀಸ್ಗಢ ಸಿಎಂ ಭೂಪೇಶ್ ಭಗೇಲ್, ರಾಜ್ಯ ಸಭೆ ಸಂಸದರಾದ ರಣದೀಪ್‌ ಸುರ್ಜೇವಾಲಾ, ವೇಣುಗೋಪಾಲ, ಸಂಸದ ಮಾಣಿಕಂ ಟಾಗೋರ್‌, ಪಿ.ಎಲ್‌. ಪೂನಿಯಾ, ಮಾಜಿ ಸಿಎಂ. ಹರೀಶ್ ರಾವತ್ ಸೇರಿದಂತೆ ಹಲವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಎದುರು ವಶಕ್ಕೆ ಪಡೆದ್ರು.

ಇನ್ನು ಎರಡನೇ ದಿನವೂ ದೆಹಲಿಯಲ್ಲಿ ಹೈಡ್ರಾಮಾ ಜರುಗಿತು. ಕಾಂಗ್ರೆಸ್ ಕಚೇರಿಗೆ ಆಗಮಿಸುತ್ತಿದ್ದಂತೆ ಸಂಸದ ಡಿ.ಕೆ ಸುರೇಶ್, ಮಾಜಿ ಸಚಿವ ದಿನೇಶ್ ಗುಂಡೂರಾವ್ ಸೇರಿ ಹಲವು ನಾಯಕರನ್ನು ದೆಹಲಿ ಪೊಲೀಸರು ಆರಂಭದಲ್ಲೇ ತಡೆದರು. ವಾಪಸ್ ಹೋಗುವಂತೆ ಸೂಚಿಸಿದ್ರು. ಆದರೂ ಕಾಂಗ್ರೆಸ್ ನಾಯಕರು ಕ್ಯಾರೆ ಎನ್ನಲಿಲ್ಲ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಡಿ.ಕೆ ಸುರೇಶ್ ಅವರನ್ನು ಪೊಲೀಸರು ಬ್ಯಾರಿಕೇಡ್‌ನಿಂದ ಆಚೆ ತಳ್ಳುವ ಪ್ರಯತ್ನ ಮಾಡಿದ್ರು. ಇದರಿಂದ ಆಕ್ರೋಶಗೊಂಡ ಡಿ.ಕೆ ಸುರೇಶ್ ಪೊಲೀಸರ ಜೊತೆಗೆ ವಾಗ್ವಾದಕ್ಕೆ ಇಳಿದ್ರು. ಇದೇ ವೇಳೆ ಅವರನ್ನು ಬಂಧಿಸಿ ನರೇಲಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

ಇನ್ನು ಎರಡನೇ ದಿನವೂ ರಾಹುಲ್ ಗಾಂಧಿ ವಿಚಾರಣೆ ವೇಳೆ ನೀಡಿರುವ ಹೇಳಿಕೆಗಳು ದಾಖಲೆಗಳಿಗೆ ಹೋಲಿಕೆ ಆಗ್ತಿಲ್ಲ ಅಂತಾ ಇಡಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಅಲ್ಲದೆ, ರಾಹುಲ್ ಗಾಂಧಿಯನ್ನು ED ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವುದಕ್ಕೆ ದೇಶವ್ಯಾಪಿ ಕಾಂಗ್ರೆಸ್ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದು, ಮುಂದೆ ಇದು ಯಾವ ಸ್ವರೂಪ ತಾಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ

RELATED ARTICLES

Related Articles

TRENDING ARTICLES