ಚಿಕ್ಕಮಗಳೂರು : ಇನ್ನು ಪೂರ್ಣ ಪ್ರಮಾಣದಲ್ಲಿ ಮಳೆಗಾಲ ಆರಂಭವೇ ಆಗಿಲ್ಲ. ಈಗಲೇ, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಗೆ ರಸ್ತೆಗಳು ಕುಸಿಯುತ್ತಿದ್ದು ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಸುರಿದ ಮಳೆಯಿಂದ ದತ್ತಪೀಠ ಮಾರ್ಗದಲ್ಲಿ ಅರ್ಧ ರಸ್ತೆಯೇ ಕುಸಿದು ಬಿದ್ದಿದೆ. ವಾಹನ ಸವಾರರು ಆತಂಕದಲ್ಲೇ ಸಂಚಾರ ಮಾಡುತ್ತಿದ್ದಾರೆ.
ಕಳೆದ ಎರಡ್ಮೂರು ದಿನಗಳಿಂದ ಮುಳ್ಳಯ್ಯನಗಿರಿ, ದತ್ತಪೀಠದ ಸುತ್ತಮುತ್ತ ಸುರಿದ ಭಾರೀ ಮಳೆಯಿಂದ ದತ್ತಪೀಠದ ಮುಖ್ಯರಸ್ತೆಯೇ ಅರ್ಧಕ್ಕೆ ಕಟ್ ಆಗಿ ಬಿದ್ದಿದೆ. ಸುಮಾರು 40-50 ಅಡಿ ರಸ್ತೆಯ ಕೆಳಭಾಗದ ಮಣ್ಣು ಸಂಪೂರ್ಣ ಕುಸಿದಿದ್ದು, ಮತ್ತೆ ದುರಸ್ಥಿ ಕಷ್ಟಸಾಧ್ಯ ಎಂಬಂತಹ ಸ್ಥಿತಿಯಲ್ಲಿದೆ.ಎರಡ್ಮೂರು ವರ್ಷಗಳಿಂದ ಸುರಿದ ಭಾರೀ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದು ಈ ವರ್ಷ ಎನಾಗುತ್ತೋ ಎಂಬ ಆತಂಕ ಮಲೆನಾಡಿಗರದ್ದಾಗಿದೆ.
ರಸ್ತೆ ಕಟ್ ಆಗಿರುವ ಬದಿಯ ಕೆಳಭಾಗದಲ್ಲಿ ಸಾವಿರಾರು ಅಡಿ ಪ್ರಪಾತವಿದೆ. ಅಲ್ಲಿಗೆ ಹೋಗಿ ಜೆಸಿಬಿಯಲ್ಲಿ ಕೆಲಸ ಮಾಡೋದು ಕೂಡ ಕಷ್ಟ. ಆ ಮಟ್ಟಕ್ಕೆ ರಸ್ತೆ ಕಟ್ ಆಗಿ ಬಿದ್ದಿದೆ. ದತ್ತಪೀಠಕ್ಕೆ ಇರೋದು ಇದೊಂದೇ ಮಾರ್ಗ. ಈ ಮಾರ್ಗ ಬಿಟ್ಟಿರೆ ಬೇರೆ ಯಾವುದೇ ದಾರಿ ಇಲ್ಲ. ನಿತ್ಯ ರಾಜ್ಯ ಹಾಗೂ ಹೊರರಾಜ್ಯದಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ರಸ್ತೆಯ ಕೆಳಭಾಗದಲ್ಲಿ ಮಣ್ಣು ಉದುರುವುದು ಇನ್ನೂ ನಿಂತಿಲ್ಲ. ಕೂಡಲೇ ಸರ್ಕಾರ ಈ ರಸ್ತೆಯ ದುರಸ್ಥಿಗೆ ಕ್ರಮ ಕೈಗೊಳ್ಳದಿದ್ದರೆ ಬಹುಶಃ ಈ ರಸ್ತೆ ಸಂಪೂರ್ಣ ಕುಸಿದು ಬಿದ್ದರೂ ಆಶ್ಚರ್ಯವಿಲ್ಲ.
ಈಗ ಕುಸಿದಿರುವ ಜಾಗ ಹೋಗಿ-ಬರುವ ಎರಡೂ ಮಾರ್ಗದಲ್ಲೂ ಟರ್ನ್ ಇರುವಂತದ್ದು. ಹಾಗಾಗಿ, ಹೋಗಿ-ಬರುವ ವಾಹನಗಳು ಟರ್ನ್‍ನಲ್ಲಿ ವೇಗವಾಗಿ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಗಾಡಿ ಟರ್ನ್ ಆಗಿ ಹತ್ತಿರ ಬರುವವರೆಗೂ ರಸ್ತೆ ಕುಸಿದಿರುವುದು ಗೊತ್ತಾಗಲ್ಲ. ಅಷ್ಟೆ ಅಲ್ಲದೆ, ಹೊರಜಿಲ್ಲೆ-ರಾಜ್ಯದ ಪ್ರವಾಸಿಗರಿಗೆ ಈ ಮಾರ್ಗದ ಪರಿಚಯ ಇರುವುದಿಲ್ಲ. ಈ ವರ್ಷದ ಮಳೆಗಾಲದಲ್ಲಿ ಇನ್ನು ಯಾವ-ಯಾವ ಅನಾಹುತ ಸಂಭವಿಸುತ್ತೋ ಎಂದು ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ.
ಒಟ್ಟಾರೆ, ಈ ವರ್ಷವೂ ಹೆಚ್ಚು ಮಳೆ ಇದೆ ಎಂದು ಈಗಾಗಲೇ ಜಿಲ್ಲಾಡಳಿತ ಅಪಾಯದ ಗ್ರಾಮ, ಅಪಾಯದ ಸ್ಥಳಗಳನ್ನ ಗುರುತಿಸಿದೆ. ಮಳೆಗಾಲವನ್ನ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಮಧ್ಯೆ ರಸ್ತೆಗಳು ಕುಸಿಯುತ್ತಿರುವುದನ್ನ ಕಂಡು ಜಿಲ್ಲೆಯ ಜನ ಚಿಂತಾಕ್ರಾಂತರಾಗಿದ್ದಾರೆ.
ಸಚಿನ್ ಶೆಟ್ಟಿ, ಪವರ್ ಟಿವಿ, ಚಿಕ್ಕಮಗಳೂರು