ಬೆಂಗಳೂರು: ಹೋದ್ಯಾ ಪಿಶಾಚಿ ಎಂದ್ರೆ ನಾ ಬಂದೆ ಗವಾಕ್ಷೀಲಿ ಎಂಬಂತೆ ಕೊರೋನಾ ಮತ್ತೆ ವಕ್ಕರಿಸಲು ಅಣಿಯಾಗುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಐನೂರರ ಗಡಿ ದಾಟುತ್ತಿದೆ. ಅದರಲ್ಲೂ ಶೇ.95ರಷ್ಟು ಕೇಸಸ್ ಬೆಂಗಳೂರಿನಲ್ಲಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು, ಕೊರೋನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ ಎಂ.ಕೆ.ಸುದರ್ಶನ್ ಸೇರಿದಂತೆ ಸಮಿತಿ ಸದಸ್ಯರ ಜೊತೆ ಸಭೆ ಜರುಗಿತು. ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಬೆಂಗಳೂರು ಕೇಸ್ ಏರಿಕೆಯ ಬಗ್ಗೆ ಪ್ರಸ್ತಾಪವಾಯಿತು. ಬೆಂಗಳೂರಿನಲ್ಲಿ 500 ಸನಿಹಕ್ಕೆ ಕೇಸ್‌ಗಳು ದಾಖಲಾಗ್ತಿವೆ. ಇದರಲ್ಲಿ ಮಹದೇವಪುರ ವಲಯದಲ್ಲಿ ಹೆಚ್ಚು ಕೇಸ್‌ಗಳು ಕಾಣಿಸಿಕೊಳ್ತಿವೆ. ಸದ್ಯಕ್ಕೆ ಕೊರೋನಾ ಸಾವಿನ ಕೇಸ್ ಇಲ್ಲ. ಮುಂದಿನ ನಾಲ್ಕು ವಾರದಲ್ಲಿ ಕೇಸ್ ಪೀಕ್‌ಗೆ ಹೋಗಬಹುದು.ಮಕ್ಕಳ ಸೆರೋ ಸರ್ವೆ ಮಾಡಬೇಕು ಮತ್ತು ವಲಯವಾರು ಜೆನೆಮಿಕ್ ಸೀಕ್ವೆನ್ಸ್ ಗೆ ವೇಗ ನೀಡೋದ್ರ ಬಗ್ಗೆ ಚರ್ಚೆ ಆಯಿತು. ಐಐಟಿ ಕಾನ್ಪುರ್ ವರದಿ ಪ್ರಕಾರ ಜೂನ್ ನಿಂದ ಆರಂಭವಾಗಿ ಜುಲೈ ಆಗಸ್ಟ್ ವರೆಗೂ ಇರಬಹುದೆಂದಿದ್ದಾರೆ. ಇದನ್ನ ನಾವು ಅಲೆಗಳು ಎಂದು ನಾವು ಹೇಳೋದಿಲ್ಲ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.
ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷ ಡಾ.ಸುದರ್ಶನ್, ಸಚಿವರಿಗೆ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಬಗ್ಗೆ ವಿವರಿಸಿದರು. ಸಭೆಯಲ್ಲಿ ಬೇರೆ ದೇಶಗಳಲ್ಲಿ ಅದರಲ್ಲೂ ಅಮೆರಿಕ, ಯುಕೆ, ಪೋರ್ಚುಗಲ್‌ನಲ್ಲಿ ಸೋಂಕು ಹೆಚ್ಚಾಗಿ ಕಡಿಮೆ ಆಗಿದೆ. ಸಾವು ನೋವು ಸಂಭವಿಸಿಲ್ಲ, ಆಸ್ಪತ್ರೆಗೆ ದಾಖಲಾಗಿಲ್ಲ. ಇದನ್ನೆಲ್ಲಾ ಆಧರಿಸಿ ಟಾಸ್ಕ್ ಫೋರ್ಸ್ ಮಾಹಿತಿ ನೀಡಿತು. ದೆಹಲಿ, ಮಹಾರಾಷ್ಟ್ರದಲ್ಲಿ ಏರಿಕೆ ಕಂಡಿದೆ. ಬೆಂಗಳೂರಲ್ಲೂ ಸ್ವಲ್ಪ ಹೆಚ್ಚಾಗಿದೆ. ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಶೇ. 10ರಷ್ಟು ಜಿನೋಮ್ ಸರ್ವೆಗೆ ಸೂಚಿಸಲಾಗಿದೆ. ಕೋವಿಡ್ ಹೆಚ್ಚಳವಾದ್ರೂ ತೀವ್ರತೆ ಇಲ್ಲ. ಆಸ್ಪತ್ರೆಗೆ ದಾಖಲಾಗ್ತಿಲ್ಲ. ಸಾವು ನೋವುಗಳಿಲ್ಲ
ಹೀಗಿದ್ರೂ ಮೈಮರೆಯುವಂತಿಲ್ಲ. 60 ವರ್ಷದ ಮೇಲ್ಪಟ್ಟವರು, ಇತರೆ ರೋಗಗಳಿಂದ ಬಳಲ್ತಿರೋರು ಕಡ್ಡಾಯವಾಗಿ ಬೂಸ್ಟರ್ ಡೋಸ್ ಪಡೀಬೇಕು. ಅದರಲ್ಲೂ 12 ವರ್ಷ ಮೇಲ್ಪಟ್ಟ ಮಕ್ಕಳು ಲಸಿಕೆ ಪಡೆಯಬೇಕು. ಮನೆ ಮನೆಗೆ ತೆರಳಿ ಲಸಿಕೀಕರಣದ ಅಭಿಯಾನ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಮಾಸ್ಕ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಆದರೆ, ಸಾರ್ವಜನಿಕರು ಮಾಸ್ಕ್ ಹಾಕದೆ ನಿರ್ಲಕ್ಷ್ಯ ವಹಿಸಿದರೆ ಕೊರೋನಾ ಕೇಸ್ ಹೆಚ್ಚಾದರೆ ಮುಂದೆ ದಂಡ ಹಾಕುವ ಸಾಧ್ಯತೆ ಹೆಚ್ಚಿದೆ. ಆದರೆ ಸದ್ಯಕ್ಕಂತೂ ಟಫ್ ರೂಲ್ಸ್ ಬೇಡವೆಂದಿರುವುದು ಸಮಾಧಾನದ ಸಂಗತಿಯಾಗಿದೆ .