ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಜುಗರವನ್ನುಂಟು ಮಾಡಿದೆ. ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿಗೆ ಫೆಡರಲ್ ಏಜೆನ್ಸಿ ಮುಂದೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು. ಕೊವಿಡ್ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ವಿಚಾರಣೆಯಿಂದ ವಿನಾಯಿತಿ ಪಡೆದಿದ್ರು. ರಾಹುಲ್ ಗಾಂಧಿ ಅವರು ಎಐಸಿಸಿ ಕಚೇರಿಯಿಂದ ಇಡಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ವಿಚಾರಣೆಗೆ ಹಾಜರಾದ್ರು.
ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮುಂಚೆಯೇ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪಕ್ಷದ ಎಲ್ಲಾ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ನಾಯಕರಿಗೆ ಸೂಚನೆ ನೀಡಿತ್ತು. ಆದ್ರೆ, ಕಾಂಗ್ರೆಸ್ ನಾಯಕರು ಎಐಸಿಸಿ ಕಚೇರಿಗೆ ಬರುವ ಮುನ್ನವೇ ಪೊಲೀಸರು ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ರು. ಹಾಗಾಗಿ ಬಹುತೇಕ ಕಾಂಗ್ರೆಸ್ ನಾಯಕರು ಮತ್ತು ಸಂಸದರು ಮೆರವಣಿಗೆಯಲ್ಲಿ ಭಾಗಿಯಾಗದಂತೆ ತಡೆಯೊಡ್ಡಲಾಯಿತು.
ರಾಹುಲ್ ಗಾಂಧಿಗೆ ಬೆಂಬಲ ನೀಡಲು ಬಂದ ಕಾಂಗ್ರೆಸ್ ನಾಯಕರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಹಾಗಾಗಿ ಮೆರವಣಿಗೆ ಮಾಡಲು ಅವಕಾಶ ಕೊಡದ ಪೊಲೀಸರ ಕ್ರಮ ಖಂಡಿಸಿ ಕಾಂಗ್ರೆಸ್ ನಾಯಕರು, ಇಡಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾದ್ರು. ಬಳಿಕ ಪೊಲೀಸರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿ, ತುಘಲಕ್ ಠಾಣೆ ಸೇರಿದಂತೆ ನಾನಾ ಠಾಣೆಗಳಿಗೆ ಕರೆದೊಯ್ಯಲಾಯಿತು. ಅದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಸಂಸದರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.
ಸದ್ಯ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ, ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಳಿಗ್ಗೆ ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ರು. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಮತ್ತೆ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ದಾಖಲೆಗಳ ಮೂಲಕ ಮಾಹಿತಿ ಸಂಗ್ರಹಿದ್ದಾರೆ.
ಜಾರಿ ನಿರ್ದೇಶನಾಲಯದ ಕಚೇರಿ ಹೊರ ಭಾಗ ಕಾಂಗ್ರೆಸ್ ಬೆಂಬಲಿಗರು ಪ್ರತಿಭಟನೆ ನಡೆಯುತ್ತಿತ್ತು.. ಈ ನಡುವೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಪೊಲೀಸರಿಂದ ತಪ್ಪಿಸಕೊಳ್ಳಲು ಎದ್ನೋ ಬಿದ್ನೋ ಎಂಬಂತೆ ಓಟಕ್ಕಿತ್ತಿದ್ದಾರೆ.
ಇತ್ತ, ಕಾಂಗ್ರೆಸಿಗರ ವೀರೋಚಿತ ಹೋರಾಟದ ಪರಿಯಿದು. ಇಡಿ ವಿರುದ್ಧ ಪ್ರತಿಭಟನೆಯ ಪೋಸು ಕೊಡಲು ಬಂದ ಐವೈಸಿ ಅಧ್ಯಕ್ಷ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಲಿಗೆ ಬುದ್ಧಿ ಹೇಳುತ್ತಿದ್ದಾರೆ. ಪಲಾಯವಾದವೇ ಇವರ ಬಂಡವಾಳ ಎಂದು ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.