Monday, December 23, 2024

ಅಬ್ಬಬ್ಬಾ.. ಚಾರ್ಲಿ ನೋಡಿ ಸಿಎಂ ಕೂಡ ಹಾಕಿದ್ರು ಕಣ್ಣೀರು

ಅಬ್ಬಬ್ಬಾ.. ಚಾರ್ಲಿ- ಧರ್ಮ ಜೋಡಿ ಮಾಡ್ತಿರೋ ಮೋಡಿಗೆ ಬರೀ ಸಿನಿಪ್ರಿಯರಷ್ಟೇ ಅಲ್ಲ, ರಾಜ್ಯದ ಸಿಎಂ ಕೂಡ ಕಣ್ಣೀರು ಹಾಕಿದ್ದಾರೆ. ರಾಜಕೀಯ ಜಂಜಾಟಗಳ ಮಧ್ಯೆ ರಿಲ್ಯಾಕ್ಸ್ ಆಗಲು ಬಂದ ಸಿಎಂನ ಭಾವನಾತ್ಮಕವಾಗಿ ಕಟ್ಟಿ ಹಾಕಿತು ಚಾರ್ಲಿ. ಗಳ ಗಳನೆ ಅತ್ತು, ಆ ಅನ್​ಕಂಡೀನಲ್ ಲವ್ ಬಗ್ಗೆ ಅವ್ರು ಹೇಳಿದ ಆ ಅದ್ಭುತ ಮಾತುಗಳನ್ನ ಒಮ್ಮೆ ಕೇಳಿ.

ರಾಜಕೀಯ ಜಂಜಾಟಗಳ ಮಧ್ಯೆ ಸಿನಿಮಾ ನೋಡಿದ ಸಿಎಂ

ಬೊಮ್ಮಾಯಿಗೆ ಸುಧಾಕರ್, ನಾಗೇಶ್, ಅಶೋಕ್ ಸಾಥ್..!

ಅಬ್ಬಬ್ಬಾ.. ಚಾರ್ಲಿ ನೋಡಿ ಸಿಎಂ ಕೂಡ ಹಾಕಿದ್ರು ಕಣ್ಣೀರು

ಪ್ರಾಣಿಗಳನ್ನು ದತ್ತ ಪಡೆದು ರಕ್ಷಿಸಿ, ಹಿಂಸಿಸಬೇಡಿ – ಸಿಎಂ

ಯೆಸ್.. ಚಾರ್ಲಿ ಚಮತ್ಕಾರಕ್ಕೆ ಇಡೀ ದೇಶವೇ ಬಹುಪರಾಕ್ ಅಂತಿದೆ. 777 ಚಾರ್ಲಿ ನಿಜಕ್ಕೂ ಪ್ರತಿಯೊಬ್ಬರಿಗೂ ಕನೆಕ್ಟ್ ಆಗ್ತಿದೆ. ಅದ್ರಲ್ಲೂ ನಾಯಿ ಸಾಕೋರು, ನಾಯಿ ಕಳಕೊಂಡಿರೋರು ಹಾಗೂ ಅದನ್ನ ಅತಿಯಾಗಿ ಪ್ರೀತಿಸೋರಿಗೆ ಇದು ಇನ್ನಿಲ್ಲದೆ ಕಾಡ್ತಿದೆ. ಹೌದು.. ಶುಕ್ರವಾರ ತೆರೆಕಂಡ ಚಾರ್ಲಿ ಸಿನಿಮಾ ಪ್ಯಾನ್ ಇಂಡಿಯಾ ಧೂಳೆಬ್ಬಿಸ್ತಿದೆ. ರಕ್ಷಿತ್ ಶೆಟ್ಟಿ ಈಸ್ ಬ್ಯಾಕ್ ಅನ್ನುವಂತೆ ಮಾಡಿದೆ.

ರಿಲೀಸ್​ಗೂ ಮೊದಲೇ ಪೂನಾ, ಡೆಲ್ಲಿ, ಹೈದ್ರಾಬಾದ್, ಮುಂಬೈ ಸೇರಿದಂತೆ ಒಂದಷ್ಟು ಕಡೆ ಪ್ರೀಮಿಯರ್ ಆಗಿದ್ದ ಈ ಸಿನಿಮಾಗೆ ಎಲ್ಲಿಲ್ಲದ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗಿದ್ದವು. ನಟಿ, ಮಾಜಿ ಸಂಸದೆ ರಮ್ಯಾ ಕೂಡ ಸಿನಿಮಾ ಬಗ್ಗೆ ಹಾಡಿ ಹೊಗಳಿದ್ರು. ಚಾರ್ಲಿ ಶ್ವಾನ, ರಕ್ಷಿತ್ ಶೆಟ್ಟಿಯ ಸ್ವಾಭಾವಿಕ ಹಾಗೂ ನೈಜ ನಟನೆಗೆ ಎಲ್ರೂ ಫಿದಾ ಆಗ್ತಿದ್ದಾರೆ. ಇಡೀ ಚಿತ್ರರಂಗ ಸಿನಿಮಾ ನೋಡಿ ಮೆಚ್ಚಿದ್ದಾಯ್ತು. ಇದೀಗ ಸಿಎಂ ಕೂಡ ಸಿನಿಮಾ ನೋಡಿ ಕಣ್ಣೀರು ಹಾಕಿರೋದು ಇಂಟರೆಸ್ಟಿಂಗ್ ಅನಿಸಿದೆ.

ಹೌದು.. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ್ರು ತಮ್ಮ ರಾಜಕೀಯ ಜಂಜಾಟಗಳ ನಡುವೆ 777 ಚಾರ್ಲಿ ಸಿನಿಮಾ ನೋಡಿದ್ರು. ಒರಾಯಲ್ ಮಾಲ್​ನಲ್ಲಿ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಆಯೋಜಿಸಿದ್ದ ವಿಶೇಷ ಪ್ರದರ್ಶನಕ್ಕೆ ಸಿಎಂರನ್ನ ಆಹ್ವಾನಿಸಲಾಗಿತ್ತು. ಸಿನಿಮಾ ನೋಡಲು ಬಂದ ಚೀಫ್ ಮಿನಿಸ್ಟರ್​ಗೆ ಸಚಿವರುಗಳಾದ ಕೆ ಸುಧಾಕರ್, ಬಿ.ಸಿ. ನಾಗೇಶ್ ಹಾಗೂ ಅಶೋಕ್ ಸೇರಿದಂತೆ ಸಾಕಷ್ಟು ಮಂದಿ ಸಾಥ್ ನೀಡಿದ್ದು ವಿಶೇಷ. ಮೊದಲಾರ್ಧ ನೋಡಿ, ಪ್ರಾಣಿಗಳನ್ನ ದತ್ತು ಪಡೆಯೋ ಮೂಲಕ ರಕ್ಷಿಸಿ, ದಯವಿಟ್ಟು ಹಿಂಸಿಸಬೇಡಿ ಅಂತ ಕಳಕಳಿಯಿಂದ ಕೇಳಿಕೊಂಡ್ರು ಸಿಎಂ.

ಆದ್ರೆ ಕೊನೆಯವರೆಗೂ ಸಿನಿಮಾ ನೋಡಿದ ಸಿಎಂ, ಕೊನೆಯಲ್ಲಿ ಮಗುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ದು ಮಾತ್ರ ಅವರ್ಣನೀಯ. ಕಾರಣ ಚಿತ್ರದಲ್ಲಿರೋ ಎಮೋಷನ್ಸ್​ಗೆ ಅಷ್ಟು ಕನೆಕ್ಟ್ ಆಗಿದ್ರು. ಅವ್ರೂ ಸಹ ಪ್ರಾಣಿಪ್ರಿಯರಾಗಿದ್ದು, ಅವ್ರ ಮನೆಯಲ್ಲಿ ರೀಸೆಂಟ್ ಆಗಿ ತೀರಿಕೊಂಡ ಶ್ವಾನದ ಬಗ್ಗೆ ಮಮ್ಮಲ ಮರಗಿದ್ದರು. ಹಾಗಾಗಿ ಆ ನೋವನ್ನು ತಡೆಯಲಾಗದೆ ಗಳ ಗಳನೆ ಅತ್ತು ಎಲ್ಲರನ್ನ ಅಚ್ಚರಿ ಮೂಡಿಸಿದ್ರು.

ಒಟ್ಟಾರೆ ರಕ್ಷಿತ್ ಶೆಟ್ಟಿ ಸಿಕ್ಕಾಪಟ್ಟೆ ಖುಷಿಯಾಗಿದ್ದು, ಅವ್ರ ಮೂರ್ನಾಲ್ಕು ವರ್ಷದ ಶ್ರಮಕ್ಕೆ ಸಿಕ್ಕ ಪ್ರತಿಫಲವಿದು ಅಂತ ಹೆಮ್ಮೆ ಪಡ್ತಿದ್ದಾರೆ. ಎರಡೇ ದಿನದಲ್ಲಿ ಹದಿನೈದು ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರೋ 777 ಚಾರ್ಲಿ, ಇಂಡಿಯನ್ ಸಿನಿದುನಿಯಾದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇಲ್ಲಿಯವರೆಗೂ ನಾಯಿ- ಮನುಷ್ಯನ ಅನುಬಂಧದ ಕಥೆ ಹೀಗ್ಯಾರೂ ಮಾಡಿಲ್ಲ, ಇನ್ನು ಮಾಡಲಾರರು ಅಂದ್ರೆ ತಪ್ಪಾಗಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES