ಬೆಂಗಳೂರು: ವಾಹನ ಸವಾರರ ಹಿತದೃಷ್ಟಿಯಿಂದ ಸರ್ಕಾರ ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಅಂತ ಹೇಳಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಸಾರಿಗೆ ಇಲಾಖೆ ಮತ್ತು ಮೋಟಾರು ಕಾಯ್ದೆಯಡಿ ಸಂಚಾರಿ ಪೊಲೀಸರು ದಂಡ ಹಾಕಿ ಶಿಕ್ಷೆ ವಿಧಿಸ್ತಾರೆ. ಆದ್ರೂ ಕೂಡ ಕೆಲವರು ಸಂಚಾರಿ ನಿಯಮಗಳನ್ನ ಬ್ರೇಕ್ ಮಾಡ್ತಾರೆ. ಕೆಲವರು ದಂಡ ಕಟ್ಟಿದರೆ ಇನ್ನೂ ಕೆಲವರು ತಮ್ಮ ಜೀವ , ಜೀವನವನ್ನೇ ದಂಡವಾಗಿ ಕಟ್ಟುತ್ತಿದ್ದಾರೆ.
ಒಬ್ಬ ವಾಹನ ಸವಾರ ಎಷ್ಟೇ ಎಚ್ಚರದಿಂದ ಇದ್ರು ಕೂಡ ಒಮ್ಮೆ ಅನಿರೀಕ್ಷಿತವಾಗಿ ಇಲ್ಲವೇ ಕೆಲವರು ಮಾಡುವ ಯಡವಟ್ಟಿನಿಂದಾಗಿ ಜೀವವೇ ಹೋಗಿ ಬಿಡುತ್ತೆ. ಅಂತಹದ್ದೇ ಒಂದು ಹೃದಯ ವಿದ್ರಾವಕ ಮೈ ಜುಮ್ಮೆನ್ನಿಸುವ ರೀತಿಯ ಅಪಘಾತವೊಂದು ಬೆಂಗಳೂರಿನ ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ಸ್ಟ್ಯಾಂಡ್ ಬಳಿ ನಡೆದಿದೆ. ಹೌದು, ಮೈಸೂರು ರಸ್ತೆಯ ಸ್ಯಾಟ್ ಲೈಟ್ ಬಸ್ ನಿಲ್ದಾಣ ಬಳಿ ಸರಣಿ ಅಪಘಾತವಾಗಿದೆ. ಆಟೋ, ಬಿಎಂಟಿಸಿ ಬಸ್, ಕ್ಯಾಂಟರ್ ಮತ್ತು ಟೆಂಪೋ ಮಧ್ಯೆ ಡಿಕ್ಕಿ ಸಂಭವಿಸಿದೆ.
ಬಸ್ ಮತ್ತು ಟೆಂಪೋ ನಡುವೆ ಸಿಲುಕಿದ ಆಟೋ ಮಾತ್ರ ಸಂಪೂರ್ಣ ನಜ್ಜುಗುಜ್ಜಾಗಿದೆ. ಆಟೋದಲ್ಲಿದ್ದ ಡ್ರೈವರ್ ಚಿಕಿತ್ಸೆ ಫಲಕಾರಿಯಾಗದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಈ ಅಪಘಾತ ದೃಶ್ಯ, ಸಾರ್ವಜನಿಕರು ಮತ್ತು ವಾಹನ ಸವಾರರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಇನ್ನಾದ್ರೂ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸಲಿ. ಅಪಘಾತಗಳು ಸಂಭವಿಸದಿರಲಿ ಅನ್ನೋದೆ ನಮ್ಮ ಆಶಯ.