Wednesday, January 22, 2025

ಆನೆಗಳ ಸಂರಕ್ಷಣೆ ಐಕಾನ್‌ ಆಗಲಿರುವ ‘ಭೋಗೇಶ್ವರ’

ಮೈಸೂರು : ಕಬಿನಿಯ ಶಕ್ತಿಮಾನ್‌ ಎಂದೇ ಖ್ಯಾತಿಯಾಗಿದ್ದ, ದಕ್ಷಿಣ ಏಷ್ಯಾದಲ್ಲಿಯೇ ಅತಿ ಉದ್ದವಾದ ದಂತ ಹೊಂದಿದ್ದ ‘ಭೋಗೇಶ್ವರ’ನನ್ನು ಆನೆಗಳ ಸಂರಕ್ಷಣೆಗೆ ಐಕಾನಿಕ್‌ ಆಗಿ ಬಳಕೆ ಮಾಡಲು ಹಾಗೂ ಇದರ ಉದ್ದವಾದ ದಂತವನ್ನು ಸಂರಕ್ಷಿಸಿಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಸದ್ಯದಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಮೃತಪಟ್ಟ 60 ರಿಂದ 65 ವರ್ಷ ವಯಸ್ಸಿನ ಭೋಗೇಶ್ವರ ಆನೆ ಮಾಹಿತಿ, ಛಾಯಾಚಿತ್ರಗಳು ಜಾಲತಾಣದಲ್ಲಿ ರಾರಾಜಿಸುತ್ತಿವೆ. ಸೌಮ್ಯ ಸ್ವಭಾವದ ಈ ಆನೆ ಎಚ್‌.ಡಿ ಕೋಟೆ ತಾಲೂಕು ಕಬಿನಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರ ಬಹು ಆಕರ್ಷಣೆಯಾಗಿತ್ತು. ಈ ಆನೆಯ ಒಂದು ದಂತ 2.54 ಮೀಟರ್‌ (8 ಅಡಿ), ಇನ್ನೊಂದು ದಂತ 2.34 ಮೀಟರ್‌ (7.5 ಅಡಿ) ಉದ್ದವಿದೆ. ಸಾಮಾನ್ಯವಾಗಿ ಇಷ್ಟು ಉದ್ದದ ದಂತವಿರುವ ಆನೆ ಈವರೆಗೆ ದಕ್ಷಿಣ ಏಷ್ಯಾದಲ್ಲಿ ಕಂಡುಬಂದಿಲ್ಲ. ಈ ಕಾರಣಕ್ಕಾಗಿಯೇ ಭೋಗೇಶ್ವರ ಬಹು ಪ್ರಸಿದ್ಧಿ ಪಡೆದಿದೆ.

ಈ ಒಂಟಿ ಸಲಗ ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ವಾಸವಾಗಿದ್ದುದೇ ಒಂದು ಹೆಗ್ಗಳಿಕೆ. ಯಾರಿಗೂ ತೊಂದರೆ ನೀಡದ ಇದರ ಗುಣ, ಎತ್ತರ, ನೆಲಕ್ಕೆ ಮುಟ್ಟುವಷ್ಟು ಉದ್ದವಾದ ಇದರ ದಂತಗಳು, ದಂತಗಳ ನಡುವೆ ಸೊಂಡಿಲು ಎಳೆದುಕೊಂಡು ಆಹಾರ ಸೇವಿಸುವ ವಿಧಾನ, ಗಾಂಭೀರ್ಯ ನಡಿಗೆಯಿಂದಲೇ ಎಲ್ಲರ ಗಮನ ಸೆಳೆಯುತ್ತಿತ್ತು.

RELATED ARTICLES

Related Articles

TRENDING ARTICLES