ತುಮಕೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಶಾಸಕರ ವಿರುದ್ಧ ಜೆಡಿಎಸ್ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಕೋಲಾರ ಶಾಸಕ ಶ್ರೀನಿವಾಸಗೌಡ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ತುಮಕೂರಿನ ಗುಬ್ಬಿ ಶ್ರೀನಿವಾಸ್ ಮನೆ ಮುಂದೆ ಹೈಡ್ರಾಮವೇ ನಡೆಯಿತು. ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಇಷ್ಟೆ ಅಲ್ಲದೆ ಇಬ್ಬರು ಶಾಸಕ ತಿಥಿ ಕಾರ್ಡ್ ಮಾಡಿಸಿ ತಮ್ಮ ಆಕ್ರೋಶ ಹೊರ ಹಾಕಿದ್ರು.
ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಪ್ರತಿಕಾರ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇಬ್ಬರು ಶಾಸಕರ ವಿರುದ್ಧವೂ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೋಲಾರ ಶಾಸಕ ಶ್ರೀನಿವಾಸಗೌಡ ಮತ್ತು ಗುಬ್ಬಿ ಶ್ರೀನಿವಾಸ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ರು. ತುಮಕೂರಿನಲ್ಲಿರುವ ಶಾಸಕ ಗುಬ್ಬಿ ಶ್ರೀನಿವಾಸ್ ಮನೆ ಮುಂದೆ ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಗುಬ್ಬಿ ಶ್ರೀನಿವಾಸ್ ಮನೆ ಅಕ್ಷರಶಃ ರಣರಂಗವಾಗಿತ್ತು. ವಾಸು ಬೆಂಬಲಿಗರು, ಜೆಡಿಎಸ್ ಮುಖಂಡರ ನಡುವೆ ವಾಕ್ಸಮರವೇ ನಡೆಯಿತು. ಕೆಲ ಕಾಲ ಕೈ ಕೈ ಮಿಲಾಯಿಸುವ ಹಂತ ತಲುಪಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯ್ತು.
ಇನ್ನು, ಈ ಘಟನೆಯಿಂದ ಕೆರಳಿ ಕೆಂಡವಾದ ಎಸ್.ಆರ್.ಶ್ರೀನಿವಾಸ್ HDK ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ರು. ಕುಮಾರಸ್ವಾಮಿ ಉತ್ತಮನಾ..? ಬೆಳಗ್ಗೆ ಒಂದು, ಸಂಜೆ ಒಂದು ಹೇಳ್ತಾನೆ..! ಕುಮಾರಸ್ವಾಮಿ ಒಬ್ಬ ಊಸರವಳ್ಳಿ ಇದ್ದಂಗೆ. ತಾಕತ್ತಿದ್ರೆ ಅವನು ಬಂದು ನನ್ನ ಎದುರಿಗೆ ಸ್ಪರ್ಧೆ ಮಾಡಲಿ ಅಂತ HDKಗೆ ಓಪನ್ ಚಾಲೆಂಜ್ ಹಾಕಿದ್ರು.
ಇನ್ನೂ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ವಿರುದ್ದವೂ ಜಿಲ್ಲೆಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೆಡಿಎಸ್ ಮುಖಂಡರು ಹಾಗು ಕಾರ್ಯಕರ್ತರು ಶ್ರೀನಿವಾಸಗೌಡ ಮನೆ ಎದುರು ಪ್ರತಿಭಟನೆ ನಡೆಸಿದರು. ಕೋಲಾರದ ಮಹಾಲಕ್ಷ್ಮಿ ಲೇಔಟ್ ನಿವಾಸದ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಕಾರ್ಯಕರ್ತರು, ಶಾಸಕರ ರಾಜೀನಾಮೆಗೆ ಆಗ್ರಹಿಸಿದರು. ಜೊತೆಗೆ ಶಾಸಕರ ತಿಥಿ ಕಾರ್ಡ್ ಪ್ರಿಂಟ್ ಮಾಡಿಸಿ ಹಂಚಿದ್ದಾರೆ. ಈ ಕುರಿತ ಕೈಲಾಸ ಸಮಾರಾಧನೆಯ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕುಮಾರ ಸೇನಾ ಪಡೆ ಜೂನ್ 21 ರಂದು ಕೈಲಾಸ ಸಮಾರಾಧನೆ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ.
ಇನ್ನು, ಈ ಎಲ್ಲಾ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಶ್ರೀನಿವಾಸ್ಗೌಡ ದಳಪತಿಗಳ ವಿರುದ್ಧ ವಾಗ್ದಾಳಿ ನೆಡೆಸಿದ್ರು. ನಾನು ಯಾವುದೇ ಪಕ್ಷಕ್ಕೆ ಸೇರಲು ಸ್ವತಂತ್ರವಾಗಿದ್ದೇನೆ. ಕುಮಾರಸ್ವಾಮಿ ನಡತೆ, ಡಿಕ್ಟೇಟರ್‌ಶಿಪ್ ನ್ಯಾಯಯುತವಾಗಿಲ್ಲ. ನನ್ನ ಹಿರಿತನಕ್ಕೆ ಜೆಡಿಎಸ್ ಗೌರವ ಕೊಡದಿರುವುದು ಬೇಸರ ತಂದಿದೆ ಎಂದ್ರು.
ಒಂದು ಪಕ್ಷದ ಚಿನ್ಹೆಯಡಿ ಗೆಲುವು ಸಾಧಿಸಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕೋದಕ್ಕೆ ಆತ್ಮಸಾಕ್ಷಿ ಒಪ್ಪುತ್ತಾ. ಆರಿಸಿ ಕಳುಹಿಸಿದ ಕ್ಷೇತ್ರದ ಮತದಾರರಿಗೆ ಅಗೌರವ ತೋರಿದ್ದಾರೆ ಅಂತ ರಾಜ್ಯದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹಣಕ್ಕೋಸ್ಕರ ಮತ ಮಾರಿಕೊಂಡಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಿಂದ ಹೇಮಂತ್‌ಕುಮಾರ್, ಶ್ರೀನಿವಾಸ್‌ಮೂರ್ತಿ ಪವರ್ ಟಿವಿ ಕೋಲಾರ