ಹಾವೇರಿ : ಊರ ದೇವರ ಗುಡಿಯಲ್ಲಿ ದೇವರೇ ಬಂಧಿ. ಮಂತ್ರಘೋಷ, ಘಂಟೆಗಳ ನಿನಾದವೂ ಬಂದ್, ನಿತ್ಯ ನಡೆಯುತ್ತಿದ್ದ ಪೂಜೆ ಪುನಸ್ಕಾರವು ಬಂದ್, ಅಷ್ಟಕ್ಕೂ ಗುಡಿಯಲ್ಲಿ ದೇವರು ಬಂಧಿಯಾಗಿದ್ದು ಯಾಕೆ? ದೇವರಿಗೇಕೆ ಈ ಶಿಕ್ಷೆ ಅಂತೀರಾ.
ದೇವಸ್ಥಾನ ಅಂದಮೇಲೆ ಅಲ್ಲಿ ಮಂತ್ರಘೋಷ ಮೊಳಗುತ್ತಿರಬೇಕು, ಘಂಟೆಯ ನಿನಾದ ಕೇಳ್ತಿರಬೇಕು, ಪೂಜೆ, ಪುನಸ್ಕಾರ ನಡೆದು ಭಕ್ತರ ದಂಡು ಅಲ್ಲಿ ನೆರೆದಿದ್ದಾಗಲೆ ಭಕ್ತಿಯ ಪರಾಕಾಷ್ಟೆಯನ್ನ ಕಾಣಲು ಸಾಧ್ಯ. ಆದ್ರೆ ಆ ಗ್ರಾಮದ ದೇವಸ್ಥಾನದಲ್ಲಿ ಮಾತ್ರ ಇದ್ಯಾವುದು ಕಾಣುತ್ತಿಲ್ಲ. ಗುಡಿಗೆ ಬೀಗ ಹಾಕಿ ದೇವರನ್ನ ಗುಡಿಯಲ್ಲಿ ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರ ತಾಲೂಕಿನ ಕಡೂರಿನ ಆಂಜನೇಯ ದೇಗುಲಕ್ಕೆ ಬೀಗ ಹಾಕಿ ಆರು ತಿಂಗಳಾಗಿದೆ. ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ಇಲ್ಲದಂತಾಗಿದ್ದು, ಯಾವುದೇ ಪೂಜೆ ಪುನಸ್ಕಾರಗಳು ನಡೆಯುತ್ತಿಲ್ಲ. ಆ ಗ್ರಾಮದಲ್ಲಿ ಗುಡಿಯ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಇದೆ ವಿಚಾರಕ್ಕೆ ಗುಡಿಗೆ ಬೀಗ ಹಾಕಲಾಗಿದೆ.
ಗ್ರಾಮದ ಆಂಜನೇಯ ದೇಗುಲಕ್ಕೆ 49 ಎಕರೆ ಭೂಮಿಯಿದೆ. 12 ವಾಣಿಜ್ಯ ಮಳಿಗೆಗಳಿವೆ. ಮುಜರಾಯಿ ಇಲಾಖೆಗೆ ಸೇರಿದ ಈ ಗುಡಿಗೆ ಲಕ್ಷಾಂತರ ರೂಪಾಯಿ ಆದಾಯವಿದೆ. ಆದ್ರೆ ಕಳೆದ ಹಲವಾರು ವರ್ಷಗಳಿಂದ ನಾಲ್ಕು ಕುಟುಂಬದವರು ಪಂಚಕಮಿಟಿ ಹೆಸರಲ್ಲಿ ದೇಗುಲವನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಹೊಸ ಕಮಿಟಿ ರಚನೆ ಮಾಡುವಂತೆ ನ್ಯಾಯಾಲಯದ ಆದೇಶವಿದ್ರೂ ಇನ್ನೂ ಕಮಿಟಿ ರಚನೆಯಾಗಿಲ್ಲ. ತಲತಲಾಂತರಗಳಿಂದ ಶಿವಪ್ಪ ಪೂಜಾರ ಕುಟುಂಬದವರು ದೇವಸ್ಥಾನದಲ್ಲಿ ಪೂಜೆ ಮಾಡ್ತಿದ್ರು. ಇವರ ಬದಲಿಗೆ ಹೊಸಬರ ನೇಮಕಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಈ ಕಿತ್ತಾಟದಲ್ಲಿ ಗುಡಿಯಲ್ಲಿನ ಆಂಜನೇಯ ಬಂಧಿಯಾಗಿದ್ದಾನೆ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥ ಮಾಡುವ ಮೂಲಕ ದೇವರಿಗೆ ಸಂಪ್ರದಾಯದ ಪ್ರಕಾರ ಪೂಜೆ ಪುನಸ್ಕಾರ ಆರಂಭಕ್ಕೆ ನಾಂದಿ ಹಾಡಬೇಕಿದೆ.
ವೀರೇಶ ಬಾರ್ಕಿ ಪವರ್ ಟಿವಿ ಹಾವೇರಿ.