ಬೆಳಗಾವಿ : 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 30 ಸಾವಿರ ದೇವಾಲಯಗಳನ್ನು ವಾಪಸ್ ಪಡೆಯುತ್ತೇವೆ. ಕಾನೂನುಬದ್ಧವಾಗಿ ಹೋರಾಟ ಮಾಡಿ ವಾಪಸ್ ಪಡೆಯುತ್ತೇವೆ. ನಾವು, ನೀವು ಒಟ್ಟಾಗಿ ಇರಬೇಕು ಅಂದರೆ ಹಿಂದೂ ದೇವಸ್ಥಾನಗಳನ್ನು ವಾಪಸ್ ಕೊಡಬೇಕು. ದೇವಾಲಯ ಅಂತ ಗೊತ್ತಾದ ಮೇಲೆ ಬಿಟ್ಟು ಕೊಡಬೇಕು ಎಂದರು.
ಇನ್ನು ಶಾಸಕ ಅಭಯ್ ಪಾಟೀಲ್‍ಗೂ ನಮ್ಮ ಬೆಂಬಲ ಇದೆ. ಮಾಜಿ ಶಾಸಕ ಫಿರೋಜ್ ಸೇಠ್ ಅಕ್ರಮವಾಗಿ ಜಾಗ ಕಬಳಿಕೆ ಮಾಡಿದ್ದಾರೆ. ಮೊದಲು ಅದನ್ನು ವಾಪಸ್ ಕೊಡಲಿ ಎಂದು ಸವಾಲ್ ಹಾಕಿದರು.
ರೋಹಿತ್ ಚಕ್ರತೀರ್ಥ ಅವರನ್ನ ಪಠ್ಯ ಪರಿಷ್ಕರಣಾ ಸಮಿತಿಯಿಂದ ತೆಗೆದ ವಿಚಾರಕ್ಕೆ ಪ್ರತಿಕ್ರಿಯಿಸಿ, ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ನಿಜವಾದ ರಾಷ್ಟ್ರೀಯತೆ, ದೇಶಭಕ್ತಿಯ ಪಠ್ಯದಲ್ಲಿ ಹಾಕಿದ್ರೆ ಇವರಿಗೆ ಯಾಕೆ ಉರಿಯುತ್ತಿದೆ. ಕೆಲವು ಲೇಖಕರು ನಮ್ಮ ಕವನ ಪಠ್ಯದಲ್ಲಿ ಬೇಡಾ ಎಂದಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದರು.