ನವದೆಹಲಿ: ಪ್ರವಾದಿ ಮಹಮ್ಮದ್ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಬಂಧನಕ್ಕೆ ಒತ್ತಾಯಿಸಿ ಜಾಮಾ ಮಸೀದಿ ಬಳಿ ಪ್ರತಿಭಟನೆ ನಡೆಸಲಾಗಿದೆ.
ಇಂದು ನಮಾಜ್ ಬಳಿಕ ಗುಂಪು ಸೇರಿದ ಸಾವಿರಾರು ಮುಸ್ಲಿಮರು ಘೋಷಣೆಗಳನ್ನು ಕೂಗುತ್ತಾ, ಭಿತ್ತಿ ಪತ್ರ ಪ್ರದರ್ಶಿಸಿ ನೂಪುರ್ ಬಂಧನಕ್ಕೆ ಒತ್ತಾಯಿಸಿದರು. ಸ್ವಲ್ಪ ಸಮಯದ ಬಳಿಕ ಕೆಲ ಪ್ರತಿಭಟನಾಕಾರರು ಸ್ಥಳ ಬಿಟ್ಟು ತೆರಳಿದರೆ, ಮತ್ತೆ ಕೆಲವರು ಪ್ರತಿಭಟನೆ ಮುಂದುವರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆದರೆ, ಮಸೀದಿ ವತಿಯಿಂದ ಪ್ರತಿಭಟನೆಗೆ ಕರೆ ಕೊಟ್ಟಿಲ್ಲ ಎಂದು ಜಾಮಾ ಮಸೀದಿಯ ಶಾಹಿ ಇಮಾಮ್ ತಿಳಿಸಿದ್ದಾರೆ. ದ್ವೇಷ ಹರಡುವಿಕೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ವಿವಾದಿತ ಅರ್ಚಕ ಯತಿ ನರಸಿಂಗಾನಂದ್ ಸೇರಿ 31 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ನೂಪುರ್ ಶರ್ಮಾ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ದೆಹಲಿ ಸೇರಿ 5 ರಾಜ್ಯಗಳಲ್ಲಿ ಮುಸ್ಲಿಮರ ಧರಣಿ ನಡೆಸುತ್ತಿದ್ದಾರೆ. ದೆಹಲಿ, ಮುಂಬಯಿ, ತೆಲಂಗಾಣ, ಕಾಶ್ಮೀರ, ಪಶ್ಚಿಮ ಬಂಗಾಳ
ಉತ್ತರ ಪ್ರದೇಶ ಮತ್ತು ರಾಂವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿದ್ದು, ಎಲ್ಲಾ ರಾಜ್ಯಗಳು ಕಟ್ಟೆಚ್ಚರ ವಹಿಸುವಂತೆ ಕೇಂದ್ರದಿಂದ ಸೂಚನೆ ಹೊರಡಿಸಲಾಗಿದೆ.