ಬೆಂಗಳೂರು : ಕೊವಿಡ್ ಸೋಂಕು ಕಡಿಮೆಯಾಗಿ ಜನಜೀವನ ಸಹಜ ಸ್ಥಿತಿಗೆ ಬಂದು ಆರು ತಿಂಗಳು ಕಳೆದರೂ ಮೆಟ್ರೋ ಪ್ರಯಾಣಿಕರ ಸಂಖ್ಯೆ ಮಾತ್ರ ಕೊವಿಡ್ ಪೂರ್ವದಲ್ಲಿನ ಪ್ರಯಾಣಿಕರ ಸಂಖ್ಯೆಗಿಂತ ಕಡಿಮೆಯೇ ಇದೆ. ಹೀಗಾಗಿ ಮೆಟ್ರೋ ಲಾಸ್ಟ್ ಮೈಲ್ ಕನೆಕ್ಟಿವಿಟಿಗಾಗಿ ಬಿಎಂಟಿಸಿ ಫೀಡರ್ ಬಸ್ ಸೇವೆ ಒದಗಿಸ್ತಿದೆ. ಆದರೆ, ಈ ಫೀಡರ್ ಸರ್ವಿಸ್‌ನಿಂದ ಬಿಎಂಟಿಸಿಗೆ ನಿಗದಿತ ಆದಾಯ ಬರುತ್ತಿಲ್ಲ. ಲಾಸ್ ಮೇಲೆ ಲಾಸ್ ಆಗ್ತಿದೆ ಅನ್ನೋದು ಬಿಎಂಟಿಸಿ ಆರೋಪ. ನಮಗೆ ಆರ್ಥಿಕ ಶಕ್ತಿ ನೀಡಿದ್ರೆ ಮಾತ್ರ ಫೀಡರ್ ಸೇವೆ ನೀಡೋಕೆ ಸಾಧ್ಯ ಅನ್ನೋದು ಬಿಎಂಟಿಸಿ ವಾದ. ಆದರೆ, ಇತ್ತ ಬಿಎಂಆರ್‌ಸಿಎಲ್ ಬೇರೆಯದ್ದೇ ಕತೆ ಹೇಳ್ತಿದೆ. ಬಸ್ ಓಡಿಸಲು ನಮಗೆ ಅವಕಾಶ ಕೊಟ್ರೆ ನಾವೇ ಫೀಡರ್ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಅಂತಿದೆ BMRCL
ಇನ್ನೊಂದು ಕಡೆ ಎಲೆಕ್ಟ್ರಿಕ್ ಬಸ್‌ಗಳನ್ನು ಕೊಂಡು ಕೈಸುಟ್ಟುಕೊಂಡಿರೋ ಬಿಎಂಟಿಸಿ ಭವಿಷ್ಯದಲ್ಲಿ ಮೆಟ್ರೋಗೆ ಎಲೆಕ್ಟ್ರಿಕ್ ಬಸ್ ಫೀಡರ್ ಆಗಿ ಬಳಸಲು ಯೋಚಿಸ್ತಿದೆ. ಆದ್ರೆ, ಬಿಎಂಆರ್‌ಸಿಎಲ್ ಮಾತ್ರ ಇದಕ್ಕೆ ಸುತಾರಾಮ್ ಒಪ್ಪುವ ಲಕ್ಷಣ ಕಾಣಿಸ್ತಿಲ್ಲ. ನೀವು 9 ಮೀಟರ್ ಮಿನಿ ಬಸ್ ನಿಯೋಜಿಸೋದಾದ್ರೆ ನಿಯೋಜಿಸಿ. ಅದನ್ನು ಬಿಟ್ಟು ದೊಡ್ಡ ಬಸ್‌ಗಳನ್ನು ನಿಯೋಜಿಸಿ ಲಾಸ್ ಅಂದ್ರೆ ನಾವು ಜವಾಬ್ದಾರರಲ್ಲ ಎನ್ನುತ್ತಿದೆ.
ಇತ್ತ ಕೊವಿಡ್ ಬಳಿಕ ಬಿಎಂಟಿಸಿ ನಷ್ಟದ ಹಾದಿ ಹಿಡಿದು ಕುಳಿತಿದೆ. ಈಗಾಗಲೇ ನೌಕರರಿಗೆ ಸಂಬಳ ಕೊಡಲಾರದ ಸ್ಥಿತಿಗೆ ಬಂದು ತಲುಪಿರೋ ಬಿಎಂಟಿಸಿಗೆ ಈ ಫೀಡರ್ ಸೇವೆ ಗಾಯದ ಮೇಲೆ ಬರೆ ಎಳೆದಂತಾಗ್ತಿದೆ. ಮತ್ತೊಂದೆಡೆ ಬಿಎಂಟಿಸಿ ಹಾಗೂ ಮೆಟ್ರೋ ನಿಗಮಗಳ ಜಗಳದಲ್ಲಿ ಪ್ರಯಾಣಿಕರು ಬಡವಾಗ್ತಿದ್ದಾರೆ.
ಒಟ್ಟಿನಲ್ಲಿ ಮೆಟ್ರೋ ಹಳಿಗಿಳಿದು 10 ವರ್ಷ ಕಳೆದಿದೆ. ಬಿಎಂಟಿಸಿಯೂ ಆರಂಭದಿಂದ ಮೆಟ್ರೋಗೆ ಫೀಡರ್ ಸೇವೆ ಕೊಡ್ತಲೇ ಬಂದಿದೆ. ಆದ್ರೀಗ ಆರ್ಥಿಕ ಸಂಕಷ್ಟವನ್ನ ಎರಡೂ ಸಂಸ್ಥೆಗಳು ಎದುರಿಸ್ತಿರೋದ್ರಿಂದ ಬೀದಿ ಜಗಳ ಆರಂಭಿಸಿವೆ.