ಬೆಂಗಳೂರು : ಬಹು ನಿರೀಕ್ಷಿತ ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ ಹಿನ್ನಲೆ, ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಡಿಲಿಮಿಟೇಷನ್ ಸಂಬಂಧ ಇಂದು ಅಧಿಕೃತವಾಗಿ ಪಾಲಿಕೆ ವತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ಬಿಬಿಎಂಪಿ ಚುನಾವಣೆ ಸಂಬಂಧ ಪಾಲಿಕೆ ಇಂದು ಅಧಿಕೃತವಾಗಿ ಡಿಲಿಮಿಟೇಷನ್ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದೆ. ಇಂದು ಬೆಳಗ್ಗೆ ವಾರ್ಡ್ ಮರುವಿಂಗಡಣೆ ಪಟ್ಟಿಯನ್ನ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸರ್ಕಾರಕ್ಕೆ ಸಲ್ಲಿಸಿದ್ದು, ಈ ಸಂಬಂಧ ಬಿಬಿಎಂಪಿ ಸ್ಪೆಷಲ್ ಕಮಿಷಿನರ್ ರಂಗಪ್ಪ ಸ್ಪಷ್ಟೀಕರಣ ನೀಡಿದ್ದಾರೆ. ಈ ಹಿಂದೆ ಪಾಲಿಕೆ ವತಿಯಿಂದ ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಕೆಲವೊಂದು ಮಾರ್ಪಡುಗಳನ್ನ ಮಾಡಿ ಪುನಃ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನಲೆ ಇಂದು ಪಾಲಿಕೆ ಅಧಿಕೃತವಾಗಿ ವರದಿ ಸಲ್ಲಿಕೆ ಮಾಡಿದೆ.
ಯಾವ್ಯಾವ ಮಾನದಂಡಗಳ ಮೇಲೆ ಡಿಲಿಮಿಟೇಷನ್ ಮಾಡಲಾಗಿದೆ ಎಂಬುದನ್ನ ನೋಡೊದಾದ್ರೆ :
198 ವಾರ್ಡ್ಗಳನ್ನ 243 ವಾರ್ಡ್ ಗಳಾಗಿ ಪುನರ್ವಿಂಗಡಣೆ.
2011 ರ ಜನಗಣತಿ ಆಧಾರದ ಮೇಲೆ ಡಿಲಿಮಿಟೇಷನ್ ಪ್ರಕ್ರಿಯೆ.
ಒಂದು ವಾರ್ಡಿಗೆ 35 ಸಾವಿರ ಜನಸಂಖ್ಯೆ ನಿಗಧಿ.
ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 86 ಲಕ್ಷ ಮತದಾರರರು.
ಮೊದಲ ಬಾರಿಗೆ 50 – 50 ಮಹಿಳಾ ಮೀಸಲಾತಿಗೆ ಅವಕಾಶ.
ಪಾಲಿಕೆ 198 ಇದ್ದ ವಾರ್ಡ್ಗನ್ನ 243 ವಾರ್ಡ್ ಗೆ ಏರಿಕೆ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದು, ಈ ವರದಿಗೆ ಸರ್ಕಾರದ ಅನುಮೋದನೆ ಸಿಕ್ಕ ನಂತರ ಸಾರ್ವಜನಿಕರ ಮುಂದಿಡಲಿದೆ. ವಾರ್ಡ್ ವಿಂಗಡಣೆ ಪಟ್ಟಿ ಸಂಬಂಧ ಸಾರ್ವಜನಿಕ ಆಕ್ಷೇಪಣೆಗೆ ಒಂದು ವಾರ ಕಾಲಾವಕಾಶ ನೀಡಲಿದೆ. ಗಡಿಗುರುತಿಸಿರುವ ಬಗ್ಗೆ ಸಲಹೆ ಅಭಿಪ್ರಾಯ ಪಡೆಯಲಿದೆ. ನಂತರ ಅಂತಿಮ ಪಟ್ಟಿ ಸಿದ್ದವಾದ ಬಳಿಕ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಇನ್ನೂ ಡಿಲಿಮಿಟೇಷನ್ ವರದಿ ಸಂಬಂದ ಪಾಲಿಕೆಯ ಮಾಜಿ ನಾಯಕರು ಪ್ರತಿಕ್ರಿಯೆ ನೀಡಿದ್ದು ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಲಿ ಅಂತಿದ್ದಾರೆ.
ಅಂತೂ ಇಂತೂ ಹಲವು ಗೊಂದಲದ ನಂತರ ವಾರ್ಡ್ ಪುನರ್ ವಿಂಗಡಣೆ ವರದಿ ಸಿದ್ದವಾಗಿ ಅಧಿಕೃತವಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ಮೂಲಕ ಚುನಾವಣಾ ಕಾರ್ಯ ಚುರುಕಾಗಿದ್ದು ಸೆಪ್ಟೆಂಬರ್ ನಲ್ಲಿ ಬಿಬಿಎಂಪಿ ಚುನಾವಣೆ ನಡೆಯುವ ಎಲ್ಲಾ ಸಾಧ್ಯತೆ ಇದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು.