Sunday, November 3, 2024

777 ಚಾರ್ಲಿಗೆ ಪವರ್ ಟಿವಿ ರೇಟಿಂಗ್ : 4/5

ಸಿಟ್ಟು, ದ್ವೇಷ, ಕೋಪ, ಅಸೂಯೆ ಹೀಗೆ ಮನುಷ್ಯರ ನಡುವಿನ ಸಂಬಂಧಗಳು ಹಳಸಿ ಹಾಳಾಗಿವೆ. ನಿಯತ್ತು , ಪ್ರೀತಿಗೆ ಹೆಸರಾದ ಶ್ವಾನವನ್ನು ಇಟ್ಟುಕೊಂಡು ಥಿಯೇಟರ್​​ ಒಳಗಿದ್ದ ಪ್ರೇಕ್ಷಕರಿಗೆ ಕಣ್ಣೀರಾಕಿಸಿದ್ದು 777ಚಾರ್ಲಿ. ಇಲ್ಲಿ ಚಾರ್ಲಿಯೇ ಹೀರೋ. ಚಾರ್ಲಿ ಮೌನವಾಗಿ ಚಿತ್ರದ ತುಂಬಾ ಮಾತನಾಡಿದ್ದಾಳೆ. ವೀಕೆಂಡ್​​​ಗೆ ಚಾರ್ಲಿ ಬೆಸ್ಟ್​​ ಚಾಯ್ಸ್​​  ಹೌದಾ..? ಅಲ್ವಾ..? ನಾವ್​ ಹೇಳ್ತೀವಿ ಈ ಸ್ಟೋರಿ ನೋಡಿ.

ರಕ್ಷಿತ್ ಗತ್ತು.. ನಾಯಿಯ ನಿಯತ್ತು.. ಪ್ರೇಕ್ಷಕರಿಂದ ಮುತ್ತು

ಭಾವತೀರದಲ್ಲಿ ‘777ಚಾರ್ಲಿ’ ಜೊತೆ  ಪ್ರೀತಿಯ ಪಯಣ

ಗಂಟೆಗೆ 180ಕಿಮೀ ಸ್ಪೀಡ್​​ ಅಲ್ಲಿ ಓಡ್ತಾ ಇರೋ ಫಾಸ್ಟ್​ ಲೈಫಲ್ಲಿ ಪ್ರೀತಿ, ವಿಶ್ವಾಸಕ್ಕೆ  ಹೆಚ್ಚಾಗಿ ಜಾಗ ಇಲ್ಲ ಅಂತ ನಮಗೆಲ್ಲಾ ಗೊತ್ತು. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗಲ್ಲ. ಪ್ರಾಮಾಣಿಕ ಪ್ರೀತಿಯಂತೂ ಗಗನಕುಸುಮವಾಗಿದೆ. ಹಾಗಾಗಿ, ನಾವೆಲ್ಲಾ ಪ್ರಾಣಿಗಳನ್ನೇ ಹೆಚ್ಚಾಗಿ ನಂಬುತ್ತೇವೆ. ಪೆಟ್​ ಅನಿಮಲ್​​ಗಳಲ್ಲಿ ಅನಾದಿಕಾಲದಿಂದಲೂ ಶ್ವಾನಗಳೊಂದಿಗೆ ಮನುಷ್ಯನ ಒಡನಾಟ ಹೆಚ್ಚು. ನಿಯತ್ತಿಗೆ, ನಿಷ್ಠೆಗೆ ನಾಯಿಗಳು ಏವನ್​. ಹೊಸ ಕಥೆಯ ಎಳೆಯೊಂದಿಗೆ, 777ಚಾರ್ಲಿ ಪ್ರೇಕ್ಷಕನಿಗೆ ಹೊಸ ಫೀಲ್ ಕೊಟ್ಟಿದೆ.

ಶೆಟ್ರ ಸಿನಿಮಾಗಳಂದ್ರೆ ಪ್ರೇಕ್ಷಕರಿಗೆ ಎಲ್ಲಿಲ್ಲದ ಹುಚ್ಚು. ಗಟ್ಟಿ ಕಥೆಯೊಂದಿಗೆ ಪಕ್ಕಾ ಪೈಸಾ ವಸೂಲ್​ ಸಿನಿಮಾ ಅನ್ನೋ ಬಲವಾದ ನಂಬಿಕೆ. ಹಾಗಾಗಿಯೇ ಯಾವುದೇ ಕನ್ಫ್ಯೂಶನ್​ ಇಲ್ಲದೆ ಥಿಯೇಟರ್​ ಒಳಗೆ ಕೂರಬಹುದು. 777ಚಾರ್ಲಿ ಕೂಡ ರಿಲೀಸ್​ಗೂ ಮುನ್ನ ಭರವಸೆಗಳ ಬೆಟ್ಟವನ್ನೇ ಹೊರಿಸಿತ್ತು. ಚಾರ್ಲಿ ಅನ್ನೋ ನಾಯಿ ಈ ಚಿತ್ರದಲ್ಲಿ ಹೇಗೆಲ್ಲಾ ಆ್ಯಕ್ಟ್​ ಮಾಡಿರಬಹುದು ಅನ್ನೋ ಕೂತೂಹಲವಿತ್ತು. ಹಾಗಾದ್ರೆ , 777ಚಾರ್ಲಿ ಪಾಸಾ, ಫೇಲಾ..? ಚಿತ್ರದ ಪ್ಲಸ್​​, ಮೈನಸ್​​ಗಳ ಬಗ್ಗೆ ಕಂಪ್ಲೀಟ್​ ಆಗಿ ಹೇಳ್ತೀವಿ ಈ ಸ್ಟೋರಿ ನೋಡಿ.

ಚಿತ್ರ: 777 ಚಾರ್ಲಿ

ನಿರ್ದೇಶನ: ಕಿರಣ್​ರಾಜ್​​ ಕೆ

ನಿರ್ಮಾಣ: ರಕ್ಷಿತ್​ ಶೆಟ್ಟಿ, ಜಿ.ಎಸ್​​. ಗುಪ್ತಾ

ಸಂಗೀತ: ನೊಬಿನ್ ಪೌಲ್​

ಸಿನಿಮಾಟೋಗ್ರಫಿ: ಅರವಿಂದ್​​ ಎಸ್​ ಕಶ್ಯಪ್​

ತಾರಾಗಣ: ರಕ್ಷಿತ್​​ ಶೆಟ್ಟಿ, ರಾಜ್​​ ಬಿ ಶೆಟ್ಟಿ, ಸಂಗೀತಾ ಶೃಂಗೇರಿ, ಬಾಬಿ ಸಿಂಹ, ಡ್ಯಾನಿಶ್​ ಶೇಠ್​​, ಚಾರ್ಲಿ ಶ್ವಾನ ಮುಂತಾದವರು.

777 ಚಾರ್ಲಿಯ ಸ್ಟೋರಿಲೈನ್

ಚಿತ್ರದ ಹೀರೋ ಧರ್ಮ ಅಲಿಯಾಸ್​​ ರಕ್ಷಿತ್​ ಒಂಟಿ ಪಿಶಾಚಿ. ಏಕಾಂತವೇ ಉಸಿರು, ಎರಡು ಇಡ್ಲಿ, ಸಿಗರೇಟ್​​, ಫ್ಯಾಕ್ಟರಿ, ಮನೆ, ಬಿಯರ್​​ ಇಷ್ಟು ಬಿಟ್ಟರೆ ಬೇರೆ ಜಗತ್ತೇ ಗೊತ್ತಿಲ್ಲ. ಈ ಏಕಾಂಗಿ ಲೈಫ್​ಗೆ ಕಾರಣ ಕೂಡ ಇದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಿದ್ದ ತಂದೆ, ತಾಯಿ, ಮುದ್ದಿನ ತಂಗಿ ಚಿಕ್ಕ ವಯಸ್ಸಲ್ಲೇ ಕಾರ್​ ಆಕ್ಸಿಡೆಂಟ್​​ನಲ್ಲಿ ಸಾವನ್ನಪ್ಪುತ್ತಾರೆ. ಸದಾ, ಇನ್​ಸೆಕ್ಯೂರಿಟಿ ಫೀಲ್​ನಲ್ಲಿ ಯಾರ ಪ್ರೀತಿಯ ಆಸರೆಯಿಲ್ಲದೆ ದಿನಗಳನ್ನು ದೂಡೋದು ಧರ್ಮನ ಕರ್ಮ.

ಕುಂಟುತ್ತಾ ಸಾಗೋ ಧರ್ಮನ ಜೀವನದಲ್ಲಿ ಅಚಾನಕ್ಕಾಗಿ ಚಾರ್ಲಿ ಅನ್ನೋ ಶ್ವಾನ ಪ್ರವೇಶ ಮಾಡ್ತಾಳೆ. ಅವಳ ಕಿರಿಕಿರಿಗೆ ಇಡೀ ಕಾಲೋನಿಯೇ ಸುಸ್ತಾಗಿ ಹೋಗುತ್ತೆ. ಬೀದೀಲಿ ಸಿಕ್ಕ ಚಾರ್ಲಿಯನ್ನ ಯಾರಿಗಾದರೂ ಮಾರಿಬಿಡೋ ಪ್ಲ್ಯಾನ್​​ ಧರ್ಮನದ್ದು. ಆದ್ರೆ, ಆಸ್ಪತ್ರೆಯಲ್ಲಿದ್ದ ಧರ್ಮನ ನೋಡೋಕೆ ಆ್ಯಂಬುಲೆನ್ಸ್​ ಹಿಂದೆ ಓಡಿ ಬರೋ ಚಾರ್ಲಿಯ ಪ್ರೀತಿ ನಿಷ್ಕಲ್ಮಶ ಅನ್ನೋದು ಧರ್ಮನಿಗೆ ತಿಳಿಯುತ್ತೆ. ಅಲ್ಲಿಂದ ಚಾರ್ಲಿ, ಧರ್ಮನ ಫ್ರೆಂಡ್ಶಿಪ್​​ ಬಾಂಡಿಂಗ್​ ಸ್ಟ್ರಾಂಗ್ ಆಗುತ್ತೆ.  ಚಾರ್ಲಿಗೆ ಹಿಮದ ಮೇಲೆ ಆಟ ಆಡ್ಬೇಕು ಅನ್ನೋ ಆಸೆ. ಈ ಕನಸನ್ನು ಈಡೇರಿಸೋಕೆ  ಕಾಶ್ಮೀರಕ್ಕೆ ಟ್ರಾವೆಲ್ ಮಾಡೋ ಧರ್ಮನ ಬಾಳಲ್ಲಿ ಏನೆಲ್ಲಾ ಫಜೀತಿಯಾಗುತ್ತೆ ಅನ್ನೋದೇ ಅಸಲಿ ಕಥೆ.

777 ಚಾರ್ಲಿಯ ಆರ್ಟಿಸ್ಟ್ ಪರ್ಫಾಮೆನ್ಸ್ :

ಚಿತ್ರದಲ್ಲಿ ಚಾರ್ಲಿಯೇ ನಾಯಕಿ ಅಂದ್ರೆ ತಪ್ಪಾಗಲಾರದು. ಪ್ರತಿ ಫ್ರೇಮ್​ನಲ್ಲೂ ಅವಳ ಅಭಿನಯಕ್ಕೆ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯಾಗುತ್ತೆ. ನಾಯಕನಾಗಿ ರಕ್ಷಿತ್​ ಅನೇಕ ಕಡೆ ಚಾರ್ಲಿಯ ಮುಂದೂ ಸೋಲುತ್ತಾರೆ . ಆ ಮಟ್ಟಿಗೆ ನೋಡುಗರ ಮನ ಕಲಕುವ ಚಾರ್ಲಿ, ದಿ ಬೆಸ್ಟ್​ ಆ್ಯಕ್ಟರ್​ ಆಗಿ ಕಮಾಲ್ ಮಾಡಿದ್ದಾಳೆ. ಚಾರ್ಲಿಯ ತರಲೆ, ತಮಾಷೆ, ಚೇಷ್ಠೆ ನೋಡುಗರ ಹೊಟ್ಟೆಯೊಳಗೆ ನಗುವಿನ ಚಿಟ್ಟೆ ಹೊರಹೊಮ್ಮಿಸಿದ್ದಾಳೆ.

ರಕ್ಷಿತ್​ ಮುಖದ ಭಾವ ನಿಮ್ಮನ್ನು ಕಂಬನಿಯ ಭಾವತೀರಕ್ಕೆ ಕರೆದೊಯ್ಯೋದು ಪಕ್ಕಾ. ಇಲ್ಲಿಯವರೆಗಿನ ಸಿನಿಮಾಗಳಿಗಿಂತ ಇಲ್ಲಿ ಪಕ್ವವಾಗಿ ನಟಿಸಿದ್ದಾರೆ ರಕ್ಷಿತ್​​. ಚಾರ್ಲಿ ಮೇಲಿನ ಪ್ರೇಮದ ಪರಾಕಾಷ್ಠೆಯನ್ನು ಎಕ್ಸ್​ಪ್ರೆಸ್​​ ಮಾಡಿರೋ ರಕ್ಷಿತ್,​​ ಎಲ್ಲರ ಕಣ್ಣನ್ನ ಒದ್ದೆಯಾಗಿಸ್ತಾರೆ. ಡಾಕ್ಟರ್​ ರೋಲ್​ನಲ್ಲಿ ರಾಜ್​​ ಬಿ ಶೆಟ್ಟಿಯದ್ದು 100% ಕಾಮಿಡಿ. ನಾಯಕಿಯಾಗಿ ಸಂಗೀತ ಶೃಂಗೇರಿ ಬೆಸ್ಟ್​ ಫರ್ಮಾಮೆನ್ಸ್​. ಡ್ಯಾನಿಶ್​​ ಶೇಟ್​​ ಎಂಟ್ರಿ ಡ್ಯಾಶಿಂಗ್​ ಆಗಿಲ್ಲದಿದ್ದರೂ, ಕಥೆಗೆ ಅವರ ರೋಲ್​ ಹೈಲೆಟ್​​.

777 ಚಾರ್ಲಿಯ ಪ್ಲಸ್ ಪಾಯಿಂಟ್ಸ್ :

1. ಚಾರ್ಲಿಯ ಅನ್​ಬೀಟಬಲ್​ ಆ್ಯಕ್ಟಿಂಗ್​

2. ಧರ್ಮ- ಚಾರ್ಲಿಯ ಫ್ರೆಂಡ್ಶಿಪ್​

3. ರಾಜ್​​ ಬಿ ಶೆಟ್ಟಿ ಕಾಮಿಡಿ ಕಚಗುಳಿ

4. ಚಾರ್ಲಿಯ ಕನಸಿಗೆ ರೆಕ್ಕೆಯಾಗೋ ಧರ್ಮ

5. ನಿರೀಕ್ಷೆ ಮಾಡದ ಕ್ಲೈಮ್ಯಾಕ್ಸ್​​

6. ಹೃದಯ ಕಲಕುವ ಸನ್ನಿವೇಶಗಳು

7. ಗುಂಗಿಡಿಸೋ ನೊಬಿನ್​ ಪೌಲ್​​ ಸಂಗೀತ

777 ಚಾರ್ಲಿ ಮೈನಸ್ ಪಾಯಿಂಟ್ಸ್ :

ಮಾತು ಬಾರದ ಮೂಕಪ್ರಾಣಿ ಚಾರ್ಲಿಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು, ಯಾರೂ ನಿರೀಕ್ಷೆ ಮಾಡದ ಬೆಸ್ಟ್​ ಫರ್ಮಾಮೆನ್ಸ್​ ನಟನೆಯನ್ನು ತೆಗೆದಿರುವಾಗ, ಸಿನಿಮಾದಲ್ಲಿ ನೆಗಟಿವ್​ ಅಂಶಗಳನ್ನು ಹುಡುಕೋಕೆ ಸ್ವಲ್ಪ ಕಷ್ಠವಾದರೂ ಅಲ್ಲಲ್ಲಿ ಸಣ್ಣ ಪುಟ್ಟ ತಪ್ಪುಗಳು ಕಾಣಬಹುದು. ಸಿನಿಮಾದ ಮೊದಲಾರ್ಧ ಸ್ವಲ್ಪ ನಿಧಾನ ಎನಿಸುತ್ತದೆ. ಮಸಾಲೆ ಕೊಂಚ ಜಾಸ್ತಿ ಆಗಿದ್ದಿದ್ರೆ, ಕಿಕ್ ಕೂಡ ಜಾಸ್ತಿ ಸಿಗ್ತಿತ್ತು. ಎನಿವೇ  ಸೆಕೆಂಡ್​ ಹಾಫ್​ ಸಖತ್​ ಅಗಿ ವರ್ಕೌಟ್ ಆಗಿದೆ. ಚಿತ್ರಪ್ರೇಮಿಗಳಿಗೆ ಎಮೋಷನಲ್​ ಟ್ರಾವೆಲ್​ ಫೀಲ್ ಕೊಡುತ್ತದೆ.

777 ಚಾರ್ಲಿಗೆ ಪವರ್ ಟಿವಿ ರೇಟಿಂಗ್: 4/5

777 ಚಾರ್ಲಿಯ ಫೈನಲ್ ಸ್ಟೇಟ್​ಮೆಂಟ್ :

ನಾಯಕ ರಕ್ಷಿತ್​ ಹಾಗೂ ಚಾರ್ಲಿ ಹಠಕ್ಕೆ ಬಿದ್ದವರಂತೆ ಪಾತ್ರದೊಳಗೆ ಇಳಿದಿದ್ದಾರೆ. ಪ್ರತಿ ಸನ್ನಿವೇಶದಲ್ಲೂ ಚಾರ್ಲಿ, ರಕ್ಷಿತ್​ ಜೊತೆ ಹೊಂದಿಕೊಂಡು ನಟಿಸಿದ್ದಾಳೆ. ಕಾಶ್ಮೀರ ಕಣಿವೆಯ ಕೊರೆಯುವ ಚಳಿಯಲ್ಲಿನ ಇವರಿಬ್ರ ನಟನೆಗೆ ಸಿನಿಮಾ ಹಾಲ್​ನಲ್ಲಿದ್ದವರೆಲ್ಲಾ​​ ಎದ್ದು ನಿಂತು ಗೌರವ ಸಲ್ಲಿಸಬೇಕು. ಚಾಲೆಂಜಿಂಗ್​ ಪಾತ್ರದಲ್ಲಿ ರಕ್ಷಿತ್​ ಅಭಿನಯಕ್ಕೆ, ಚಾರ್ಲಿಯ ಟ್ರೈನಿಂಗ್​ ಮಾಡಿರೋ ಟೀಚರ್​ಗೆ ಹ್ಯಾಟ್ಸ್​​ ಆಫ್​ ಹೇಳಲೇಬೇಕು. ದೊಡ್ಡಮ್ಮನ ಆರ್ಭಟದ ಸದ್ದಿನಿಂದ ಹೊರಬಂದು ಕಾಶ್ಮೀರದ ಸುಂದರ ಲೋಕೇಷನ್​ಗಳಲ್ಲಿ ವಿಹರಿಸಬೇಕಾದ್ರೆ 777ಚಾರ್ಲಿ ಸಿನಿಮಾ ನೋಡಬೇಕು. ಇದು ನಿರ್ದೇಶಕ ಕಿರಣ್ ರಾಜ್​ರ ಕ್ರಿಯಾಶೀಲತೆಯ ಕೈಗನ್ನಡಿಯೂ ಹೌದು. ವೀಕೆಂಡ್​ಗೆ ಯಾವ ಸಿನಿಮಾ ನೋಡಲಿ ಅಂತ ನಮ್ಮನ್ನ ಕೇಳಿದ್ರೆ, ಮುಲಾಜಿಲ್ಲದೆ 777ಚಾರ್ಲಿ ಫಸ್ಟ್​ ನೋಡಿ ಅಂತೀವಿ. ಡೋಂಟ್​ ಪೈರಸಿ. ಕನ್ನಡ ಸಿನಿಮಾಗಳನ್ನ ಉಳಿಸಿ.

ರಾಕೇಶ್​​ ಆರುಂಡಿ, ಫಿಲ್ಮ್ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES