ಬೆಂಗಳೂರು : ಪಠ್ಯ ಪುಸ್ತಕ ಗೊಂದಲ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಇಂದು ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಮುಂಭಾಗ ಹೋರಾಟ ಮಾಡಿದ್ರು. ಪರಿಷ್ಕರಣೆ ಕೈಬಿಟ್ಟು ಬರಗೂರು ಸಮಿತಿಯ ಪಠ್ಯವನ್ನು ಮುಂದುವರಿಸುವಂತೆ ಆಗ್ರಹಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಸಿಡಿದೆದ್ದಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸರಿಯಾಗಿ ಆಗಿಲ್ಲ. ಇನ್ನು ಹಲವಾರು ಲೋಪವಾಗಿದೆ ಎಂದು ಆಗ್ರಹಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಧರಣಿ ನಡೆಸಲಾಯ್ತು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ಭಾಗವಹಿಸಿ, ಪಠ್ಯಪುಸ್ತಕ ಪರಿಷ್ಕರಣೆ ಕೈಬಿಡುವಂತೆ ಆಗ್ರಹಿಸಿದ್ದಾರೆ.
ಅಂದು ಭಗತ್ ಸಿಂಗ್, ರಾಣಿ ಅಬ್ಬಕ್ಕನವರ ಪಾಠವಿತ್ತು. ಆದ್ರೆ, ಇಂದು ಹೆಡ್ಗೆವಾರ್, ಸಾವರ್ಕರ್, ಸೂಲಿಬೆಲೆ ಪಾಠವಿದೆ. ನಾವು ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದೇವೆ. ಆದ್ರೆ, ಸರ್ಕಾರ ಅಂಬೇಡ್ಕರ್‌ಗೆ ಅಪಮಾನ ಮಾಡಿದೆ. ಕನ್ನಡ ವಿರೋಧಿ ಕೈಯಲ್ಲಿ ಪಠ್ಯಪುಸ್ತಕವನ್ನು ಕೊಟ್ಟಿದ್ದೀರಿ. ಹಿಂದೆ ಇದ್ದ ಪಠ್ಯಪುಸ್ತಕವನ್ನೇ ಮುಂದುವರಿಸಬೇಕು. ಪರಿಷ್ಕರಣೆ ಆದ ಪಠ್ಯವನ್ನು ಕಸದ ಬುಟ್ಟಿಗೆ ಎಸೆಯಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಅಲ್ಲದೇ ತಕ್ಷಣವೇ ಪಠ್ಯವನ್ನು ಕೈಬಿಟ್ಟು ಹಳೆ ಪಠ್ಯ ಮುಂದುವರಿಸಿ ಇಲ್ಲದಿದ್ರೆ ತಾಲೂಕು ಮಟ್ಟದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಒಟ್ಟಿನಲ್ಲಿ ಸ್ವಾಮೀಜಿಗಳು, ಸಮುದಾಯದ ಮುಖಂಡರು ಸೇರಿದಂತೆ ಹಲವರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಹೋರಾಟ ಮಾಡೋರ ಪರ ನಿಲ್ಲಲು ಕಾಂಗ್ರೆಸ್ ನಿರ್ಧರಿಸಿದೆ. ಹೋರಾಟಕ್ಕೆ ಸರ್ಕಾರ ಮಣಿಯುತ್ತಾ ಕಾದುನೋಡಬೇಕಿದೆ.
ಕ್ಯಾಮರಾಮ್ಯಾನ್ ರಮೇಶ ಜೊತೆ ರೂಪೇಶ್ ಬೈಂದೂರು ಪವರ್ ಟಿವಿ