ಹಾವೇರಿ : ಮೀಸಲಾತಿ ಕೊಟ್ಟು ಸಮಾಜದ ಋಣ ತೀರಿಸಬೇಕು ಎಂದು ಶಿಗ್ಗಾಂವಿ ಪಟ್ಟಣದಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಸುಮಾರು ಇಪ್ಪತ್ತು ತಿಂಗಳುಗಳಿಂದ ಹೋರಾಟ ಮಾಡುತ್ತಿದ್ದು, ಜೂನ್ 27,ರಂದು ಶಿಗ್ಗಾಂವಿ ಪಟ್ಟಣದಲ್ಲಿರೋ ಸಿಎಂ ಬಸವರಾಜ ಬೊಮ್ಮಾಯಿಯವರ ನಿವಾಸದ ಮುಂದೆ ಸತ್ಯಾಗ್ರಹ ಮಾಡಲಿದ್ದೇವೆ ಎಂದರು.
ಅದಲ್ಲದೇ, ಸಿಎಂ ನಿವಾಸದ ಮುಂದೆ ಸತ್ಯಾಗ್ರಹ ಕುಳಿತಾಗ ತೊಂದ್ರೆಗಳು ಆಗಬಾರ್ದು ಅಂತಾ ಸಿಎಂಗೆ ಪತ್ರ ಬರೆದಿದ್ದು, ಮೀಸಲಾತಿ ಕೊಟ್ಟು ಸಮಾಜದ ಋಣ ತೀರಿಸಬೇಕು. ಮೀಸಲಾತಿ ಕೊಡುವ ದಿನಾಂಕ ಘೋಷಣೆ ಮಾಡಬೇಕು. ಮೀಸಲಾತಿ ಕೊಡಲು ಆಗುವುದಿಲ್ಲ ಎಂದಾದ್ರೂ ಹೇಳಬೇಕು. ನೀವು ಹೀಗೆ ಆಶೀರ್ವಾದ ಮಾಡಿ, ನಾವು ಹೀಗೆ ಬೆಳಕ್ಕೋಂತ ಹೋಗ್ತೀವಿ ಅಂತಾದ್ರೂ ಸ್ಪಷ್ಟವಾಗಿ ಹೇಳಿ. ನಾವು ಯಾವುದೇ ಕಾರಣಕ್ಕೂ ಸಿಎಂಗೆ ಮುಜುಗುರ ಮಾಡಲು ಹೋಗುವುದಿಲ್ಲ. ಮೀಸಲಾತಿ ವಿಳಂಬ ಖಂಡಿಸಿ ಸಿಎಂ ಬೊಮ್ಮಾಯಿಯವರ ಸ್ವಕ್ಷೇತ್ರದಿಂದಲೇ ಹೋರಾಟ ಶುರು ಮಾಡುತ್ತಿದ್ದೇವೆ ಎಂದು ಹೇಳಿದರು.