Wednesday, January 22, 2025

ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸುತ್ತೇವೆ : ಬಿ.ಸಿ.ನಾಗೇಶ್​

ಧಾರವಾಡ : ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಏನಾದರೂ ತಪ್ಪುಗಳಾಗಿದ್ದರೆ ಅದನ್ನು ಸರಿಪಡಿಸುತ್ತೇವೆ ಎಂದು ಧಾರವಾಡದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ತಪ್ಪುಗಳಾಗಿವೆ, ಅದನ್ನು ಸರಿಪಡಿಸಿದ್ದೇವೆ. ಇದಕ್ಕಾಗಿ ಕ್ಷಮೆ ಕೇಳಿದ್ದೇವೆ. ಸಾಣೆಹಳ್ಳಿ ಶ್ರೀಗಳು ಬಸವಣ್ಣನವರ ವಿಚಾರದಲ್ಲಿ ಲೋಪ ಆಗಿದೆ ಎಂದು ಹೇಳಿದ್ದರು. ಅದನ್ನು ಸರಿಪಡಿಸಲು ಸರ್ಕಾರ ಸಿದ್ದವಿದೆ. ಬರಗೂರು ರಾಮಚಂದ್ರಪ್ಪನವರ ಸಮಿತಿಯಲ್ಲಿಯೂ ಬಹಳಷ್ಟು ವಿಷಯಗಳನ್ನು ಕೈಬಿಟ್ಟಿದ್ದರು. ಕುವೆಂಪು ಅವರಿಗೆ ರೋಹಿತ ಚಕ್ರವರ್ತಿಗಿಂತ ರಾಮಚಂದ್ರಪ್ಪನವರಿಂದ ಹೆಚ್ಚು ಅವಮಾನವಾಗಿದೆ ಎಂದರು.

ಅದಲ್ಲದೇ. ಕುವೆಂಪು ಅವರ ಕುರಿತು ರೋಹಿತ ಚಕ್ರವರ್ತಿ ಅವಮಾನ ಮಾಡಿದ್ದಾರೆ ಎಂದು ನಿರ್ಮಲಾನಂದ ಶ್ರೀಗಳು ತಿಳಿಸಿದ್ದರು. ಹಾಗಾಗಿ ರೋಹಿತ ಮೇಲೆ ಕೇಸ್ ದಾಖಲಿಸಲಾಗಿದೆ. ಈ ಹಿಂದೆ ಇತಿಹಾಸವನ್ನು ಮರೆ ಮಾಚಿ ಕೇವಲ ಇಸ್ಲಾಂ ಹಾಗೂ ಕ್ರೈಸ್ತ ಧರ್ಮದ ಬಗ್ಗೆ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿತ್ತು. ಹಿಂದೂ ಧರ್ಮದ ಬಗ್ಗೆ, ವೀರರ ಬಗ್ಗೆ ಎಲ್ಲಿಯೂ ಉಲ್ಲೇಖ ಇರಲಿಲ್ಲ. ಸರ್ಕಾರ ಇದೀಗ ಅದನ್ನು ಸರಿಪಡಿಸುತ್ತದೆ ಎಂದು ಹೇಳಿದರು.

ಇನ್ನು, ಅಂಬೇಡ್ಕರಗೆ ” ಸಂವಿಧಾನ ಶಿಲ್ಪಿ ” ಎಂಬ ಶಬ್ದ ತೆಗೆದು ವಿಚಾರವಾಗಿ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಬಾಬಾಸಾಹೇಬ ಅಂಬೇಡ್ಕರ ಹೆಸರಿನ ಜೊತೆ ಕರೆಯಲಾಗುತ್ತಿದ್ದ “ಸಂವಿಧಾನ ಶಿಲ್ಪಿ ” ಕೈ ಬಿಡಲಾಗಿತ್ತು. ಇದೀಗ ಅಂಬೇಡ್ಕರರ ಮುಂದೆ ಸಂವಿಧಾನ ಶಿಲ್ಪಿ ಎಂದು ಸೇರಿಸಲು ಸೂಚಿಸಲಾಗಿದೆ. ಬಿಜೆಪಿ ಸರ್ಕಾರ ಸಾಹಿತಿಗಳನ್ನು, ಅವರ ಅಭಿಪ್ರಾಯಗಳನ್ನು ಗೌರವಿಸುತ್ತದೆ. ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಭಂದಿಸಿದಂತೆ ದೇವನೂರು ಮಹಾದೇವ ತೆಗೆದುಕೊಂಡ ನಿಲುವು ನೋವು ನೀಡಿದೆ. ದೇವನೂರು, ನಾಡಿನ ಹಿರಿಯ ಸಾಹಿತಿಗಳು, ಅವರು ಮಾರ್ಗದರ್ಶನ ನೀಡಬಹುದಾಗಿತ್ತು. ಈಗಾಗಲೇ ಶೇಕಡಾ 85 ರಷ್ಟು ಪುಸ್ತಕಗಳು ಶಿಕ್ಷಣ ಕಚೇರಿ ತಲುಪಿವೆ. ಆದಷ್ಟು ಬೇಗ ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸಲಾಗುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯನವರ ಚಡ್ಡಿ ಸಂಘರ್ಷ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಬೇರೆ ಯಾವದೇ ವಿಷಯವಿಲ್ಲ. ಒಂದು ಸಮುದಾಯವನ್ನು ಓಲೈಸಲು ಕೇವಲ ಹಿಜಾಬ್ ಪರವಾಗಿ ಮಾತ್ರ ಮಾತನಾಡುತ್ತಾರೆ. RSS ಬಗ್ಗೆ ಕೀಳಾಗಿ ಮಾತನಾಡುವ ಸಿದ್ದರಾಮಯ್ಯನವರಿ ಕೆಲಸ ಇಲ್ಲದಂತಾಗಿದೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಸಿದ್ದರಾಮಯ್ಯ ಅದರ ಬಗ್ಗೆ ಮಾತನಾಡಲಿ. ಬಿಜೆಪಿ ಸರ್ಕಾರ 27 ಸಾವಿರ ಶಿಕ್ಷಕರನ್ನು ನೇಮಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಮಕ್ಕಳಲ್ಲಿ ಗೊಂದಲ ಉಂಟಾಗದಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಧಾರವಾಡದಲ್ಲಿ ಬಿ ಸಿ ನಾಗೇಶ ಹೇಳಿದ್ದಾರೆ.

RELATED ARTICLES

Related Articles

TRENDING ARTICLES