Monday, May 20, 2024

ಮತ್ತೊಮ್ಮೆ ಯಡವಟ್ಟು ಮಾಡಿಕೊಂಡ ಹಂಪಿ ಕನ್ನಡ ವಿಶ್ವವಿದ್ಯಾಲಯ

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಅದೇನಾಗಿದೆಯೋ ಗೊತ್ತಿಲ್ಲ.. ಪದೇ ಪದೇ ಒಂದಲ್ಲಾ ಒಂದು ಯಡವಟ್ಟಿನಿಂದ ಸುದ್ದಿಯಾಗುತ್ತಲೇ ಇದೆ. ಈಗಲೂ ಸಹ ಅಷ್ಟೇ.. ಗಣ್ಯರಿಗೆ ಸಾಧಕರಿಗೆ ನೀಡುವ ನಾಡೋಜ ಪದವಿಯನ್ನೇ ಅವರ ಹೆಸರ ಮುಂದೆ ಬಳಸಬಾರದು ಎಂದು ಫರ್ಮಾನು ಹೊರಡಿಸೋ ಮೂಲಕ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಇದೀಗ ಸಾಧಕರು ಹಾಗೂ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ಕನ್ನಡ ಭಾಷಿಕರಿಗಾಗಿಯೇ ರಾಜ್ಯದಲ್ಲಿರುವ ಏಕೈಕ ಕನ್ನಡ ವಿಶ್ವವಿದ್ಯಾಲಯ ಮತ್ತೊಂದು ಯಡವಟ್ಟು ಮಾಡಿಕೊಂಡು ಹೋರಾಟಗಾರರು, ಸಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು, ಪ್ರತಿವರ್ಷ ನಡೆಯುವ ನುಡಿಹಬ್ಬದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಶ್ವವಿದ್ಯಾಲಯವು ನಾಡೋಜ ಪದವಿಯನ್ನು ನೀಡಿ ಗೌರವಿಸುತ್ತಾ ಬಂದಿದೆ. ಇದುವರೆಗೂ ಸುಮಾರು 90 ಕ್ಕೂ ಅಧಿಕ ಸಾಧಕರು ನಾಡೋಜ ಪದವಿಗೆ ಭಾಜನರಾಗಿದ್ದಾರೆ. ಆದರೀಗ ಅವರ ಹೆಸರಿನ ಮುಂದೆ ನಾಡೋಜ ಪದವಿಯನ್ನು ಬಳಸಬಾರದು ಎಂದು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಮೂಲಕ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ದುಡುಕಿನ ನಿರ್ಧಾರ ಕೈಗೊಂಡಿದೆ. ಇದು ಸಾಧಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದೇ ವರ್ಷ ಫೆಬ್ರವರಿ 14 ರಂದು ನಡೆದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಮೊದಲನೇ ಚರ್ಚೆ ವಿಚಾರವೇ ಇದಾಗಿದೆ. ನಾಡೋಜ ಪ್ರಶಸ್ತಿಗೆ ಭಾಜನರಾಗಿರೋ ಮಹೇಶ್ ಜೋಷಿ ಅವರು ನಾಡೋಜ ಪದ ಬಳಕೆಯ ಕುರಿತು ಪತ್ರ ಬರೆದು ವಿವರಣೆ ಕೇಳಿದ್ರು. ಇದಕ್ಕೆ ಸಂಬಂಧಿಸಿದಂತೆ ವಿವಿ ಸಿಂಡಿಕೇಟ್ ಸಭೆಯಲ್ಲಿ ಈ ದುಡುಕಿನ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನೂ ಈ ಕುರಿತು ಸ್ಪಷ್ಟನೆ ಕೇಳಲು ಕುಲಪತಿ ಡಾ. ಸ.ಚಿ. ರಮೇಶ್ ಅವರಿಗೆ ಕರೆ ಮಾಡಿದ್ರೆ ಸಚಿವರ ಜೊತೆ ಮೀಟಿಂಗ್‌ನಲ್ಲಿರೋದಾಗಿ ಹೇಳ್ತಾರೆ.‌ ಮತ್ತೊಮ್ಮೆ ಕರೆ ಮಾಡಿದ್ರೆ ಕರೆಯನ್ನೂ ಸಹ ಸ್ವೀಕರಿಸಲ್ಲ. ಇನ್ನು ನಾಡೋಜ ಪದ ಬಳಕೆ ಬೇಡ ಎಂದು ತೆಗೆದುಕೊಂಡಿರೋ ತೀರ್ಮಾನಕ್ಕೆ ಹೋರಾಟಗಾರರಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ಅಸ್ಮಿತೆಗಾಗಿ ಹೋರಾಡಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಅವಮಾನ ತರುವ ತೀರ್ಮಾನ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ನಿರ್ಧಾರ ವಾಪಸ್ ಪಡೆಯದಿದ್ರೆ ಹೋರಾಟ ಅನಿವಾರ್ಯ ಎಂದೂ ಸಹ ಎಚ್ಚರಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದ ಈಗಿನ ಆಡಳಿತ ವ್ಯವಸ್ಥೆಯನ್ನು ನೋಡಿದ್ರೆ ಇದು ಲಗಾಮಿಲ್ಲದ ಕುದುರೆಯಂತಾಗಿದೆ ಎನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಗೌರವ ಪದವಿಯನ್ನು ನೀಡಿ, ಅದನ್ನು ಬಳಸಬೇಡಿ ಎಂದರೆ ಅದ್ಯಾವ ಲೆಕ್ಕವೋ ಅರ್ಥವಾಗುತ್ತಿಲ್ಲ. ವಿವಿಯ ಕುಲಾಧಿಪತಿಗಳೂ ಆದ ರಾಜ್ಯದ ರಾಜ್ಯಪಾಲರು ಕೂಡಲೇ ಇದನ್ನು ಸರಿಪಡಿಸೋದಲ್ಲದೆ, ಮುಂದೆ ವಿವಿಯು ಇಂತಹ ಯಡವಟ್ಟು ಮಾಡದ ಹಾಗೇ ಸೂಚಿಸೋದು ಅನಿವಾರ್ಯವಾಗಿದೆ…

ಶಿವಕುಮಾರ್ ಪವರ್ ಟಿವಿ ಬಳ್ಳಾರಿ

RELATED ARTICLES

Related Articles

TRENDING ARTICLES