ಚಿತ್ರದುರ್ಗ : ಪಠ್ಯ ವಿವಾದದ ಹಿನ್ನೆಲೆಯಲ್ಲಿ ಹೊಸ ಸಮಿತಿ ರಚನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶನಿವಾರ ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಹೊಸ ಸಮಿತಿ ರಚನೆ ಆಗುವ ಪ್ರಶ್ನೆ ಇಲ್ಲ. ಪಠ್ಯ ಪರಿಷ್ಕರಣೆ ಮುಗಿದ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದರು.
ಪಠ್ಯದಲ್ಲಿ ಬಸವಣ್ಣ ವಿಚಾರಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಬೇರೆ ಬೇರೆ ಸ್ವಾಮೀಜಿಗಳು ಪತ್ರ ಬರೆದಿದ್ದಾರೆ. ನಮ್ಮದು ಬಸವ ಪಥ ಸರ್ಕಾರ. ನಿನ್ನೆ ಎಲ್ಲ ತರಿಸಿ ನೋಡಿದ್ದೇನೆ. ಕಾಂಗ್ರೆಸ್ ಅವಧಿಯಲ್ಲಿ ಬರಗೂರು ರಾಮಚಂದ್ರ ಸಮಿತಿ ಹಾಗೂ ಈಗ ನಡೆದ ಪರಿಷ್ಕರಣೆ ಒಂದೇ ಲೈನ್ ಅಷ್ಟೇ ವ್ಯತ್ಯಾಸ ಇದೆ ಎಂದರು. ಲಿಂಗ ದೀಕ್ಷೆಯ ಬಗ್ಗೆ ಈ ಹಿಂದೆ ಪಠ್ಯದಲ್ಲೂ ಇದೆ. ಈ ಎಲ್ಲಾ ನಿಟ್ಟಿನಲ್ಲಿ ಸಮಗ್ರವಾದ ಬದಲಾವಣೆ ಮಾಡಿ ಬಸವಣ್ಣ ನಿಜವಾದ ಸ್ವರೂಪ ಹಾಗೂ ವಚನ ಸಾಹಿತ್ಯ ಪರಿಚಯ ಆಗಬೇಕು ಎಂದು ಎಲ್ಲರ ಇಚ್ಚೆಯಾಗಿದೆ ಎಂದರು.
ಆದಷ್ಟು ಶೀಘ್ರದಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕ ಒದಗಿಸುತ್ತೇವೆ. ಇನ್ನು ಹೆಗಡೇವಾರ್ ಭಾಷಣದ ಪಠ್ಯ ಕೈ ಬಿಡುವುದಿಲ್ಲ ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.
ಇನ್ನು ಮಂದಿರ ಮಸೀದಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಲು ಸಿಎಂ ನಕಾರ ತೋರಿದ್ದಾರೆ.