Monday, November 18, 2024

ಹಳ್ಳಿ ಹಳ್ಳಿಗಳಲ್ಲಿ ಕರಪತ್ರ ಹಂಚಿ ಹೋರಾಟಕ್ಕೆ ಸಿದ್ಧತೆ

ಶ್ರೀರಂಗಪಟ್ಟಣ : ಜ್ಞಾನ​ವಾಪಿ ಮಸೀದಿ ವಿವಾದದ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮೀಯಾ ಮಸೀದಿ ಈಗ ವಿವಾದದ ಕೇಂದ್ರಬಿಂದುವಾಗಿದೆ. ವಿಶ್ವ ಹಿಂದೂ ಪರಿಷತ್ ಇಂದು ಜಾಥಾ ಹಮ್ಮಿಕೊಂಡಿದೆ. ಈ ಜಾಥಾದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದು, ಅಲರ್ಟ್ ಆಗಿರೋ ಮಂಡ್ಯ ಜಿಲ್ಲಾಡಳಿತ ಶ್ರೀರಂಗಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು ಬಿಗಿ ಭದ್ರತೆ ಕೈಗೊಂಡಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರೋ ಜಾಮೀಯಾ ಮಸೀದಿ ಈಗ ವಿವಾದದ ಕೇಂದ್ರಬಿಂದುವಾಗಿದೆ.
ಟಿಪ್ಪು ಕಾಲದಲ್ಲಿ ನಿರ್ಮಾಣವಾಗಿದೆ ಎನ್ನಲಾಗ್ತಿರೊ ಈ ಮಸೀದಿ ನೋಡಿದ ಯಾರಿಗಾದ್ರೂ ಒಂದು ಕ್ಷಣ ಅಚ್ಚರಿ ಆಗೋದು ಸಹಜ. ಕಾರಣ ಮಸೀದಿಯೊಳಗೆ ಕಲ್ಯಾಣಿ ಸೇರಿದಂತೆ ಹಲವು ಹಿಂದೂ ಕುರುಹುಗಳಿವೆ.
ಕಳೆದ ಹಲವು ವರ್ಷಗಳಿಂದ ಹನುಮ ಜಯಂತಿಯ ಸಂದರ್ಭದಲ್ಲಿ ಇಲ್ಲಿ ಮೆರವಣಿಗೆ ಮಾಡ್ತಿದ್ದ ಹನುಮ ಭಕ್ತರು ಕಳೆದ ವರ್ಷದ ನವೆಂಬರ್​ ತಿಂಗಳಲ್ಲೂ ಇಲ್ಲಿ ಮೆರವಣಿಗೆ ನಡೆಸಿದ್ದರು. ಅದೇ ರೀತಿಯಲ್ಲಿ ನಾಳೆಯೂ ಶ್ರೀರಂಗಪಟ್ಟಣದಲ್ಲಿ ಕುವೆಂಪು ವೃತ್ತದಿಂದ ಮಸೀದಿ ವರೆಗೆ ಜಾಥಾ ಹಮ್ಮಿಕೊಂಡಿದ್ದು ಸಾವಿರಾರು ಸಂಖ್ಯೆಯಲ್ಲಿ ಹನುಮ ಭಕ್ತರು ಭಾಗವಹಿಸಲಿದ್ದಾರೆ.

ಶ್ರೀರಂಗಪಟ್ಟಣದಲ್ಲಿನ ಜಾಮೀಯಾ ಮಸೀದಿಯು ಈ ಹಿಂದೆ ಮೂಡಲ ಬಾಗಿಲು ಆಂಜನೇಯ ದೇಗುಲವಾಗಿತ್ತು ಟಿಪ್ಪುವಿನ ಆಡಳಿತದ ಕಾಲದಲ್ಲಿ ಅದು ಮಸೀದಿಯಾಗಿ ಪರಿವರ್ತನೆಯಾಯ್ತು ಎಂದು ಜನ ಹಿಂದಿನಿಂದಲೂ ಮಾತನಾಡಿಕೊಳ್ಳುತ್ತಿದ್ದರು. ಅದನ್ನ ಬಿಡಿಸಿಕೊಡುವಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರು. ಈಶ್ವರಪ್ಪ, ಸಿ.ಟಿ.ರವಿ ಸೇರಿದಂತೆ ಅನೇಕ ನಾಯಕರು ಅದು ಹನುಮ ದೇವಾಲಯವೇ, ಹನುಮ ಮಂದಿರ ಒಡೆದು ಮಸೀದಿ ನಿರ್ಮಿಸಲಾಗಿದೆ ಎಂದು ಧ್ವನಿಗೂಡಿಸಿದ್ರು. ಇನ್ನು, ನಿಷೇಧಾಜ್ಞೆ ನಡುವೆಯೂ ಸ್ವತ: ಬಿಜೆಪಿ ಕಾರ್ಯಕರ್ತರೇ ಹಳ್ಳಿ – ಹಳ್ಳಿಗಳಿಗೆ ಹೋಗಿ ಮಸೀದಿ ವಿವಾದ ವಿವರಿಸಿ ಕರಪತ್ರ ಹಂಚಿ ಅಪಾರ ಸಂಖ್ಯೆಯಲ್ಲಿ ಜನ ಭಾಗವಹಿಸುವಂತೆ ಆಹ್ವಾನ ನೀಡಿದ್ದಾರೆ.

ಮಸೀದಿಯಲ್ಲಿ ಕೆಲವರು ಅಕ್ರಮವಾಗಿ ನೆಲೆಸಿದ್ದಾರೆ. ಅಲ್ಲೇ ಮದರಸಾವನ್ನ ನಡೆಸುತ್ತಿದ್ದಾರೆ ಎಂದೂ ಹಿಂದೂ ಮುಖಂಡರು ಆರೋಪಿಸಿದ್ದರು. ಈಗ ಅಲ್ಲಿನ ವಿಡಿಯೋ ಒಂದು ವೈರಲ್ ಆಗಿದ್ದು ವಿಡಿಯೊದಲ್ಲಿ ಹಲವು ಜನರಿರುವುದು ಬೆಳಕಿಗೆ ಬಂದಿದೆ.

ಇನ್ನು,ನಿಷೇಧಾಜ್ಞೆ ನಡುವೆ ನಡೆಯುತ್ತಿರೋ ಜಾಥಾ ಯಶಸ್ವಿಯಾಗುತ್ತಾ, ಜಿಲ್ಲಾಡಳಿತದ ತಂತ್ರ ಫಲಿಸುತ್ತಾ? ನಾಳೆ ಶ್ರೀರಂಗಪಟ್ಟಣದಲ್ಲಿ ಏನಾಗಲಿದೆ ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES