ಕಲಬುರಗಿ: ಸರ್ಕಾರ ಕೂಡಲೇ ಮಸೀದಿ ತೆರವುಗೊಳಿಸಿ, ಮದರಸಾದಲ್ಲಿನ ಮಕ್ಕಳನ್ನ ಓಡಿಸಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಜನೇಯ ದೇವಸ್ಥಾನ ಇದ್ದಿದ್ದನ್ನು ಮಸೀದಿಯಾಗಿ ಮಾಡಿದ್ದು ಅಕ್ಷಮ್ಯ ಅಪರಾಧ. ಅದು ಪ್ರಾಚ್ಯವಸ್ತು ಇಲಾಖೆಯ ಕಟ್ಟಡ, ಅಲ್ಲಿ ಸಂರಕ್ಷಣ ಕಟ್ಟಡ ಅಂತಾ ಬೋರ್ಡ್ ಇದೆ ಅದನ್ನ ಉಲ್ಲಂಘಿಸಿ ಅಲ್ಲಿ ಮಸೀದಿ ಮದರಸಾ ನಿರ್ಮಾಣ ಮಾಡಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಟಿಪ್ಪು ದೇಗುಲ ಧ್ವಂಸ ಮಾಡಿ ಮಸೀದಿ ನಿರ್ಮಾಣ ಮಾಡಿರುವ ಬಗ್ಗೆ ಅನೇಕ ದಾಖಲೆಗಳು ಸಿಕ್ಕಿವೆ. ಮಸೀದಿಯಲ್ಲಿ ಅನೇಕ ಹಿಂದೂ ದೇಗುಲಗಳು ಇರುವ ಬಗ್ಗೆ ಕುರುಹು ಸಿಕ್ಕಿವೆ. ಮಸೀದಿ ತೆರವು ಸಂಬಂಧ ಕಳೆದ 20 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಮಸೀದಿಯನ್ನ ಪ್ರಾಚ್ಯವಸ್ತು ಕಟ್ಟಡವನ್ನಾಗಿ ರಕ್ಷಿಸಬೇಕು. ಇವರನ್ನ ತಡೆಯುವ ಬದಲು ಹಿಂದೂ ಸಂಘಟನೆಗಳ ಹೋರಾಟ ಹತ್ತಿಕ್ಕುವುದು ಎಷ್ಟರ ಮಟ್ಟಿಗೆ ಸರಿ? ಎಂದು ವಾಗ್ದಾಳಿ ನಡೆಸಿದರು.
ಪೂಜೆ ತಡೆಯುವುದಕ್ಕೆ ಅಲ್ಲಿ ಸಾವಿರಾರು ಪೊಲೀಸರನ್ನ ಹಾಕಿದ್ದು ಅಕ್ಷಮ್ಯ ಅಪರಾಧ, ಅಲ್ಲಿ ತಡೆಯಬೇಕಾಗಿದ್ದು ಮದರಸಾ ಮಸೀದಿ ನಿರ್ಮಿಸಿದವರನ್ನ ಹೀಗಾಗಿ ಇದನ್ನು ನಾನು ಖಂಡಿಸುತ್ತೇನೆ ಎಂದರು.
ಅತಿಕ್ರಮಣ ಮಾಡಿದವರನ್ನ ತಡೆದರೆ ಮಾತ್ರ ಹೋರಾಟ ಶಾಂತವಾಗುತ್ತದೆ. ಇಲ್ಲಾಂದ್ರೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.