ಶಿವಮೊಗ್ಗ : ಆರ್.ಎಸ್.ಎಸ್. ಚಡ್ಡಿ ಹಾಕಿಕೊಂಡು ಸಂಸ್ಕಾರ ಕಲಿತು ಮೋದಿ ದೇಶ ಆಳುತ್ತಿದ್ದಾರೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಡ್ಡಿ ಅಭಿಯಾನ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳು ಕೂಡ ಚಡ್ಡಿ ಹಾಕಿಕೊಂಡವರೇ ಆಗಿದ್ದಾರೆ. ಚಡ್ಡಿ ಹಾಕಿಕೊಂಡು ಸಂಸ್ಕಾರ ಕಲಿತವರೇ ದೇಶ ನಡೆಸಿ, ಇಡೀ ಜಗತ್ತಿನಲ್ಲೇ ಹೆಸರು ಮಾಡುತ್ತಿದ್ದಾರೆ. ಈ ಹುಚ್ಚ ಸಿದ್ಧರಾಮಯ್ಯನಿಗೆ ಹುಚ್ಚು ಬಿಡಿಸುವ ಔಷಧಿ ಇಲ್ಲ. ಇವನಿಗೆ ಏನು ಹೇಳಬೇಕು ಗೊತ್ತಿಲ್ಲ. ಇವನನ್ನು ನಿಮಾನ್ಸ್ಗೆ ಸೇರಿಸಬೇಕಿದೆ. ಆದ್ರೆ ಅಲ್ಲಿಯೂ ಈ ಹುಚ್ಚನಿಗೆ ಔಷಧಿ ಸಿಗಲ್ಲ ಅನಿಸುತ್ತೆ ಎಂದು ಕಿಡಿಕಾರಿದರು.
ಇನ್ನು ಕಾಂಗ್ರೆಸ್ನಲ್ಲಿಯೇ ಈ ಹುಚ್ಚನ ಮಾತಿಗೆ ಬೆಲೆ ಇಲ್ಲ. ನಾನು ಮುಖ್ಯಮಂತ್ರಿ ಆಗಲ್ಲ ಅಂತಾನೆ. ತಮ್ಮ ಕಾರ್ಯಕರ್ತರ ಮೂಲಕ ಸಿದ್ಧರಾಮಯ್ಯನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಾನೆ. ಸೋನಿಯಾ ಗಾಂಧಿ ಹೇಳಿದರೂ ಅರ್ಥವಾಗಲ್ಲ. ನಾವು ಹೇಳಿದರೂ ಆಗಲ್ಲ. ಈ ಚಡ್ಡಿ ವಿಚಾರದಲ್ಲಿ ಕೀಳು ಮಟ್ಟದಲ್ಲಿ ಮಾತನಾಡಿದ್ದಾನೆ. ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯ ಏಕೆ ಸೋತ? ನೂರು ಕಡೆ ನಿಂತರೂ ಕೂಡ ಸೋಲುವುದು ನಿಶ್ಚಿತ ಎಂದು ವ್ಯಂಗ್ಯವಾಡಿದರು.
ಅವನಿಗೆ ಆರ್.ಎಸ್.ಎಸ್. ಬಗ್ಗೆ ಗೌರವ ಕೊಡಬೇಕು ಅನಿಸುತ್ತಿಲ್ಲ, ಮತ್ತೊಮ್ಮೆ ಆರ್.ಎಸ್.ಎಸ್. ಚಡ್ಡಿ ವಿಚಾರಕ್ಕೆ ಬಂದರೆ ಹುಷಾರ್. ವಿಪಕ್ಷ ನಾಯಕ ಎಂದು ಗೌರವ ನೀಡಲು ಕೂಡ ಇಷ್ಟವಾಗುತ್ತಿಲ್ಲ. ಅದಕ್ಕಾಗಿ ಹುಚ್ಚ ಎಂಬ ಪದ ಬಳಸಿ, ಏಕವಚನ ಬಳಸಿದ್ದೇನೆ. ಈ ರೀತಿ ಅಸಂಬದ್ಧವಾಗಿ ಮಾತನಾಡಿದರೆ, ಬೀದಿಯಲ್ಲಿ ಹೋಗುವ ನಾಯಿಗೂ ಕೂಡ ಬೆಲೆ ಕೊಡಬೇಕು ಅನಿಸಲ್ಲ. ಈ ಹುಚ್ಚುತನ ಬಿಡು, ಇದರಿಂದಲೇ ಚಾಮುಂಡೇಶ್ವರಿಯಲ್ಲಿ ಸ್ಥಾನ ಕಳೆದುಕೊಂಡೆ, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದು. ಇಂತಹ ಗೂಂಡಾಗಳ ಕೈಯಲ್ಲಿ ಸರ್ಕಾರ ಇರಬಾರದು ಎಂದು ಇವರನ್ನು ಜನರು ದೂರ ತಳ್ಳಿದ್ದಾರೆ ಎಂದರು.
ನಾವು ಆರ್.ಎಸ್.ಎಸ್.ನವರೇ, ಆಗಿದ್ದೇವೆ. ಬಿಜೆಪಿ ಕಟ್ಟಿ ಬೆಳೆಸಿದ್ದೇವೆ. ನಾವು ಆರ್.ಎಸ್.ಎಸ್.ನಿಂದಲೇ ಸಂಸ್ಕಾರ ಕಲಿತು ಬಿಜೆಪಿ ನಡೆಸುತ್ತಿದ್ದೇವೆ. ನಮ್ಮ ಹಿರಿಯರು RSSನಲ್ಲಿ ಇರಬೇಕು ಇಲ್ಲವಾದರೇ, ಜನಸಂಘದಲ್ಲಿ ಇರಬೇಕು ಎಂದು ಆದೇಶ ಮಾಡಿದ್ದರು. ಹೀಗಾಗಿ ಈ ಬಗ್ಗೆ ಉತ್ತರ ನೀಡುತ್ತಿದ್ದೇವೆ.
ರಾವಣ ಬಾಲಕ್ಕೆ ಬೆಂಕಿ ಹಚ್ಚಿದ, ಲಂಕೆಯೇ ಸುಟ್ಟು ಹೋಯಿತು ಎಂದು ಸಿದ್ಧರಾಮಯ್ಯನವರನ್ನು ರಾವಣನಿಗೆ ಹೋಲಿಸಿದರು. ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ.ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ..? ಚಡ್ಡಿಗೆ ನೀವು ಬೆಂಕಿ ಹಚ್ಜಿ ನೋಡಿ. ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ ಮತ್ತು RSS ತಂಟೆಗೆ ಬರಬೇಡಿ ಹುಷಾರ್ ಎಂದು ಪತ್ರಿಕಾಗೋಷ್ಟಿಯಲ್ಲಿ ಈಶ್ವರಪ್ಪ ಆಕ್ರೋಶ ಹೊರ ಹಾಕಿದರು.