Sunday, May 19, 2024

ಕಾಶ್ಮೀರಿ ಪಂಡಿತರ ಮೇಲೆ ದಾಳಿ: 177 ಶಿಕ್ಷಕರ ವರ್ಗಾವಣೆ

ಶ್ರೀನಗರ: ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಸರಣಿ ಹತ್ಯೆ ಮಾಡುತ್ತಿದ್ದಾರೆ. ಪರಿಣಾಮ 177 ಕಾಶ್ಮೀರಿ ಪಂಡಿತ ಶಿಕ್ಷಕರನ್ನು ಶ್ರೀನಗರದಿಂದ ಇತರೆ ಪ್ರದೇಶಗಳಿಗೆ ವರ್ಗಾವಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಭಯೋತ್ಪಾದಕರ ಸರಣಿ ದಾಳಿಯ ಹಿನ್ನೆಲೆ ಕೇಂದ್ರಾಡಳಿತ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯ ನಂತರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

2012 ರಲ್ಲಿ ಪ್ರಧಾನಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕಾಶ್ಮೀರಿ ಪಂಡಿತರು ಉದ್ಯೋಗಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ಮೇ 12 ರಂದು ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿಗೆ ರಾಹುಲ್ ಭಟ್ ಹತ್ಯೆಯಾಗಿದ್ದರು.

ಘಟನೆಯಿಂದ ತಲ್ಲಣಗೊಂಡಿದ್ದ ಪಂಡಿತರು, ವರ್ಗಾವಣೆ ಮಾಡಿ ಇಲ್ಲದಿದ್ದರೆ, ಸಾಮೂಹಿಕ ವಲಸೆ ಹೋಗುವ ಬೆದರಿಕೆ ಹಾಕಿ ಪ್ರತಿಭಟನೆಗಳನ್ನು ನಡೆಸುತ್ತಿದ್ದರು. ಭಟ್ ಹತ್ಯೆಯ ನಂತರ ಸುಮಾರು 6,000 ಸಿಬ್ಬಂದಿ ವರ್ಗಾವಣೆ ಕೋರಿ ಮನವಿ ಮಾಡಿದ್ದರು. ಆದರೆ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಆದರೆ ನಿಯೋಜಿತ ದಾಳಿಗಳು ಹೆಚ್ಚಿದ ಹಿನ್ನೆಲೆ ಸರ್ಕಾರ ವರ್ಗಾವಣೆ ಮಾಡಲು ಆದೇಶಿಸಿದೆ.

ಗುರುವಾರ ಬ್ಯಾಂಕ್ ಉದ್ಯೋಗಿ ಮತ್ತು ಓರ್ವ ಇಟ್ಟಿಗೆ ಗೂಡು ಕಾರ್ಮಿಕರನ್ನು ಎರಡು ಪ್ರತ್ಯೇಕ ಘಟನೆಗಳಲ್ಲಿ ಹತ್ಯೆ ಮಾಡಲಾಗಿತ್ತು. ಮೇ 1 ರಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಉದ್ದೇಶಿತ ಹತ್ಯೆಗಳಿಗೆ ಬ್ಯಾಂಕ್ ಮ್ಯಾನೇಜರ್ ಎಂಟನೇ ಮತ್ತು ಕಾರ್ಮಿಕ ಒಂಬತ್ತನೇ ಬಲಿಪಶುವಾಗಿದ್ದರು.

RELATED ARTICLES

Related Articles

TRENDING ARTICLES