ತುಮಕೂರು : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಬಳಿ ನಡೆದ ಅಹಿತಕರ ಘಟನೆ ರಾಜ್ಯಾದ್ಯಂತ ಸುದ್ದಿಯಾದ ಬೆನ್ನಲ್ಲೆ ಇಂದು ಹಿರಿಯ ಪೊಲೀಸ್ ಅಧಿಕಾರಿಗಳು, ಹಾಲಿ ಮಾಜಿ ಸಚಿವರು ಹಾಗೂ ಸ್ವಾಮೀಜಿಗಳು ಸೇರಿ ಹಲವರು ಭೇಟಿ ನೀಡಿದ್ದಾರೆ. ಸಚಿವರ ಮನೆ ಬಳಿ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ. ಏತನ್ಮಧ್ಯೆ ಮಾಜಿ ಸಚಿವರೊಬ್ಬರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ಬೆನ್ನಲ್ಲೇ ಬುಧವಾರ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿರುವ ಸಚಿವ ಬಿ.ಸಿ.ನಾಗೇಶ್ ಮನೆ ಬಳಿ ದೊಡ್ಡ ಹೈಡ್ರಾಮಾವೇ ನಡೆದಿತ್ತು. ಬೆಂಗಳೂರು, ದಾವಣಗೆರೆ, ಹಾಸನ ಸೇರಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಹಲವಾರು ಮಂದಿ ಎನ್.ಎಸ್.ಯು.ಐ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಪ್ರತಿಭಟನಾಕಾರರು ಆರ್.ಎಸ್.ಎಸ್ ಖಾಕಿ ಚಡ್ಡಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು. ಈ ವೇಳೆ ಪೊಲೀಸರ ಸಮಯಪ್ರಜ್ಞೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.
ಇನ್ನು ಘಟನೆ ನಂತರ ಪ್ರತಿಭಟನಾಕಾರರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಸಚಿವರ ಮನೆ ಬಳಿ ಪ್ರತಿಭಟನೆ ನಡೆಸಿ ಬೆಂಕಿ ಹಚ್ಚಿದ ಆರೋಪದಲ್ಲಿ 15 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವರು ಹೇಳುವ ಮೂಲಕ ಫಟನೆಯ ದಿಕ್ಕು ಬದಲಾಗಿತ್ತಲ್ಲದೆ, ಬುಧವಾರ ಸಂಜೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಪಟೂರಿನ ಶಿಕ್ಷಣ ಸಚಿವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ನಂತರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಎಸ್.ಪಿ. ರಾಹುಲ್ ಕುಮಾರ್ ಶಹಪುರ್ವಾಡ್ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕರೆಸಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದ್ದಾರೆ.
ಇನ್ನು ಈ ಬೆನ್ನಲ್ಲೇ ಸಚಿವ ಬಿ.ಸಿ.ನಾಗೇಶ್ ಮನೆಗೆ ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ ನೀಡಿ, ಬಳಿಕ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ರು. ದಾಂಧಲೆ ನಡೆಸಿದವರನ್ನು ಬಂಧಿಸುವ ಬದಲು ಗುಂಡಿಕ್ಕಿ ಕೊಲ್ಲಿ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ರು. RSS ಚಡ್ಡಿಗೆ ಬೆಂಕಿ ಹಾಕಿರೋದನ್ನು ನೋಡಿದ್ರೆ ಎನ್ ಎಸ್ ಯು ಐ ಕಾರ್ಯಕರ್ತರು ಪ್ಲ್ಯಾನ್ ಮಾಡಿಕೊಂಡೇ ಬಂದಿದ್ದಾರೆ. ಆರು ಮಂದಿ ಮುಸ್ಲಿಮರು ಹಾಗೂ ಹಿಂದೂಗಳು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ರು.
ಒಟ್ಟಾರೆ ಎನ್.ಎಸ್.ಯು.ಐ.ಕಾರ್ಯಕರ್ತರು ನಡೆಸಿದ ಸಚಿವರ ಮನೆ ಮುತ್ತಿಗೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗಾಗಲೇ ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ತಿಪಟೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.