ರಾಮನಗರ: ಜಗತ್ತು ಬದಲಾದಂತೆ ಮನುಷ್ಯನ ಬೇಡಿಕೆಗಳು ಅಗತ್ಯತೆಗಳು ಬದಲಾಗುತ್ತವೆ. ಇಂದಿನ ಹೊಸ ಅನ್ವೇಷಣೆ ನಾಳೆ ಹಳೆಯದೆನಿಸಿಕೊಳ್ಳುತ್ತದೆ. ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಕುಂಬಾಪುರ ಗ್ರಾಮದ ಬಳಿ ಸರ್ಕಾರವೇ ಕಾವೇರಿ ಕುಂಬಾರಿಕೆ ಕಲಾ ಸಂಕೀರ್ಣವನ್ನ ತೆರೆದಿತ್ತು. ಅದು ಕುಂಬಾರಿಕೆ ವೃತ್ತಿ ಮಾಡುತ್ತಿದ್ದ ಮಂದಿಗೆ ಆಸರೆಯಾಗಿತ್ತು.
1990ರಲ್ಲಿ ರಾಜ್ಯ ಸರ್ಕಾರ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಕುಂಬಾರಿಕೆ ಸಂಕೀರ್ಣವನ್ನ ಸ್ಥಾಪಿಸಲಾಗಿತ್ತು. ಇಲ್ಲಿ ಸ್ಥಳೀಯ ಕುಂಬಾರಿಕೆ ಕುಟುಂಬಗಳಲ್ಲದೆ ಉತ್ತರ ಕರ್ನಾಟಕದ 15 ಕುಟುಂಬಗಳು ಇಲ್ಲಿ ಕುಂಬಾರಿಕೆ ನಡೆಸುತ್ತಿದ್ದವು. ಆದ್ರೆ ಕಾಲ ಬದಲಾದಂತೆ ಮಣ್ಣಿನ ಕಲಾಕೃತಿಗಳಿಗೆ ಬೇಡಿಕೆ ಇಲ್ಲಾದಂತಾಗಿ ಹೋಗಿದೆ. ಸರ್ಕಾರವೂ ಇತ್ತ ಗಮನ ಹರಿಸುತ್ತಿಲ್ಲ. ಇದರಿಂದ ಕುಂಬಾರಿಕೆ ಸಂಕೀರ್ಣವು ಕೂಡ ನಿಂತು ಹೊಗಿದ್ದು ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳು ಕೂಡ ಇಲ್ಲಿಂದ ಕಾಲ್ಕಿತ್ತಿವೆ.
ಅಂದಹಾಗೆ, ಸರ್ಕಾರವೇ ಪ್ರಾರಂಭಿಸಿದ್ದ ಕುಂಬಾರಿಕೆ ಕಲಾ ಸಂಕೀರ್ಣದಲ್ಲಿ ಹಲವು ಗೃಹ ಉಪಯೋಗಿ ವಸ್ತುಗಳನ್ನ ತಯಾರು ಮಾಡಲಾಗುತಿತ್ತು. ಕರಕುಶಲ ಬೊಂಬೆಗಳು, ಪಾಟ್‌ಗಳು, ತುಳಸಿ ಪಾಟ್, ವಾಸ್ತು ಭರಣಿ, ದೀಪಗಳು, ಗಣೇಶ ಮೂರ್ತಿಗಳು, ಮಡಿಕೆಗಳು ಹೀಗೆ ಹತ್ತು ಹಲವು ಗೃಹ ಅಲಂಕಾರಿಕ ವಸ್ತುಗಳನ್ನ ತಯಾರು ಮಾಡಲಾಗುತಿತ್ತು. ಗ್ರಾಹಕರ ಅಗತ್ಯಕ್ಕೆ ತಕ್ಕಂತಹ ವಸ್ತುಗಳು ಸಿದ್ದವಾಗುತಿದ್ದವು. ಆದರೆ, ಈಗ ಈ ಕಲಾ ಸಂಕೀರ್ಣಕ್ಕೆ ಸರ್ಕಾರದ ಪ್ರೋತ್ಸಹ ಸಿಗದ ಕಾರಣ ಕುಂಬಾರಿಕ ಕುಟುಂಬಗಳು ಇಲ್ಲಾದಂತಾಗಿ ಗ್ರಾಹಕರು ಕೂಡ ಇತ್ತ ಬಾರದಂತಾಗಿದೆ.
ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಹಲವು ಕರಕುಶಲ ಕಾರ್ಖಾನೆಗಳು ಅವನತಿಯ ಅಂಚಿನಲ್ಲಿವೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕರಕುಶಲ ಕಾರ್ಖಾನೆಯನ್ನ ಪುನಶ್ಚೇತನ ಮಾಡಬೇಕಿದೆ.