ಕೋಲಾರ : ಒಂದೆಡೆ ಸುಂದರವಾದ ಪುರಾತನ ಕಾಲದ ದೇವಸ್ಥಾನ. ದೇವಸ್ಥಾನದ ಗೋಪುರದ ಬಳಿ ಪುಟಾಣಿ ಗೂಡು ಕಟ್ಕೊಂಡು ವಾಸಿಸುತ್ತಿರುವ ಪಾರಿವಾಳಗಳ ಹಿಂಡು. ಆ ಪಾರಿವಾಳಗಳಿಗೆ ತಮ್ಮ ಸದಸ್ಯರಂತೆ ಆಹಾರ ನೀಡಿ ಗ್ರಾಮಸ್ಥರು.ಅಂದಹಾಗೆ ಈ ರೀತಿ ಸುಂದರವಾದ ದೃಶ್ಯಗಳು ಕಂಡು ಬರೋದು ಕೋಲಾರ ತಾಲ್ಲೂಕಿನ ಕಿತ್ತಂಡೂರು ಗ್ರಾಮದಲ್ಲಿ.
ಊರಿನ ಮಧ್ಯದಲ್ಲಿ ಪುರಾತನ ಕಾಲದ ವೇಣುಗೋಪಾಲ ಸ್ವಾಮಿಯ ದೇಗುಲದ ಗೋಪುರದ ಮೇಲೆ ಪಾರಿವಾಳಗಳ ಲೋಕವೆ ಸೃಷ್ಟಿಯಾಗಿದ್ದು ಇದಕ್ಕೆ ನೂರಾರು ವರ್ಷಗಳ ಇತಿಹಾಸ ಸಹ ಇದೆ. ಒಂದು ಕಾಲದಲ್ಲಿ ಇದೇ ಪಾರಿವಾಳವನ್ನ ರಾಜ ಮಹಾರಾಜರು ಮಾಹಿತಿ ವಿನಿಮಯ ಮಾಡೋದಕ್ಕೆ ಬಳಕೆ ಮಾಡಿಕೊಳ್ತಿದ್ರು. ಕಾಲ ಕಳೆದಂತೆ ಆಧುನಿಕ ತಂತ್ರಜ್ಞಾನ ಬಳಕೆ ಹೆಚ್ಚಿ, ಟವರ್ ಗಳಿಂದ ಬರುವ ತರಂಗಗಳಿಂದ ಪಾರಿವಾಳಗಳು ಅಳಿವಿನ ಅಂಚಿಗೆ ಬಂದು ತಲುಪಿದೆ.
ಆದ್ರೆ, ಕಿತ್ತಂಡೂರು ಗ್ರಾಮದ ಈ ದೇವಸ್ಥಾನದಲ್ಲಿ ಇಂದಿಗೂ ನಮಗೆ ಸಾವಿರಾರು ಪಾರಿವಾಳಗಳು ಒಂದೇ ಕಡೆಯಲ್ಲಿ ಕಾಣಸಿಗ್ತಿದ್ದು, ಈ ಗೋಪುರವೇ ಇವುಗಳ ಪಾಲಿನ ಅರಮನೆ ಆಗಿದ್ದು, ಪಾರಿವಾಳಗಳ ಮೇಲೂ ಗ್ರಾಮಸ್ಥರಿಗೆ ಅಪಾರ ಪ್ರೀತಿ ಇರೋದ್ರಿಂದ, ಪ್ರತಿ ನಿತ್ಯ ಧಾನ್ಯ ಕಾಳುಗಳನ್ನು ರಕ್ಷಣೆ ಮಾಡ್ತಿದ್ದಾರೆ. ಇವುಗಳ ಚಟುವಟಿಕೆಗಳು ಸಹ ಗ್ರಾಮದ ಜನರ ಮನಸ್ಸಿಗೆ ಮುದ ನೀಡುತ್ತಿದೆ.
ಒಟ್ನಲ್ಲಿ, ಇಂತಹ ಕಾಲಘಟ್ಟದಲ್ಲೂ ಈ ಗ್ರಾಮದ ಜನ ಪ್ರೀತಿಯಿಂದ ಪಾರಿವಾಳಗಳ ಪೋಷಣೆ ಮಾಡುತ್ತಿರುವುದು ಪಕ್ಷಿ ಪ್ರೇಮಕ್ಕೆ ಹಿಡಿದ ಕೈಗನ್ನಡಿಯಿದ್ದಂತಿದೆ.