ಹಾಸನ: ರಾಜಕೀಯ ಶಕ್ತಿಕೇಂದ್ರ ಹಾಸನದಲ್ಲಿ ಡಾ. ರಾಜ್ ಕುಟುಂಬದ ಜೊತೆ ಆತ್ಮೀಯ ಒಡನಾಟ ಹೊಂದಿದ್ದ ಹಾ.ರಾ.ನಾಗ್ರಾಜ್ ಪುತ್ರ ನಗರಸಭೆ ಸದಸ್ಯ ಪ್ರಶಾಂತ್‌ರನ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ. ಪ್ರಶಾಂತ್ ಹತ್ಯೆಯಿಂದ ಹಾಸನದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಪೊಲೀಸ್ ವೈಫಲ್ಯದಿಂದಲೇ ಮರ್ಡರ್ ನಡೆದಿರೋದು ಅಂತಾ ರೇವಣ್ಣ ಆರೋಪಿಸಿದ್ದು, ಓರ್ವ ಪೊಲೀಸ್ ಇನ್ಸ್ಪೆಕ್ಟರ್ಗೆ ನೊಟೀಸ್ ನೀಡಿದ್ದಾರೆ. ಮೂವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನಗರದ ಜವೇನಹಳ್ಳಿ ಮಠದ ರಸ್ತೆಯ, ಲಕ್ಷ್ಮಿಪುರ ಬಡಾವಣೆಯಲ್ಲಿ ಒಬ್ಬರೇ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿದ ಹಂತಕರು ಅಟ್ಟಾಡಿಸಿ ಬರ್ಬರವಾಗಿ ಕೊಂದು ಪರಾರಿಯಾಗಿದ್ದಾರೆ. ಸಂಜೆ ಕೆಲಸ ಮುಗಿಸಿ ಮನೆ ತಲುಪಲು ಕೇವಲ ಅರ್ಧ ಕಿ.ಮೀ ಇದ್ದಾಗ ದಿಢೀರ್ ಅಟ್ಯಾಕ್ ಮಾಡಿ ದುರುಳರು ಜೀವ ತೆಗೆದಿದ್ದಾರೆ. ಪ್ರಶಾಂತ್ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಮ್ಸ್ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಯಾವುದೇ ಕಾರಣಕ್ಕೂ ಮೃತದೇಹವನ್ನು ಆಂಬುಲೆನ್ಸ್‌ನಿಂದ ಕೆಳಗಿಳಿಸಕೂಡದು. ನಗರದಲ್ಲಿ ರೌಡಿಸಂಗೆ ಪೊಲೀಸ್ ಇಲಾಖೆ ಬೆಂಬಲವಾಗಿ ನಿಂತಿದೆ. ಇದರಿಂದಲೇ ಗೂಂಡಾಗಿರಿ ಹೆಚ್ಚಿ, ಚುನಾಯಿತ ಪ್ರತಿನಿಧಿಯ ಕೊಲೆ ನಡೆದಿದೆ ಎಂದು ಗುಡುಗಿದರು.
ಪ್ರಕರಣ ಸಂಬಂಧ ಬೆಸ್ತರ ಬೀದಿಯ ಪೂರ್ಣಚಂದ್ರ ವಿರುದ್ಧ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮಾಜಿ ಸಚಿವ ರೇವಣ್ಣ ಆರೋಪದ ಹಿನ್ನೆಲೆಯಲ್ಲಿ ಹಾಸನ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇಣುಕಾ ಪ್ರಸಾದ್ ಗೆ ಎಸ್ಪಿ ಶ್ರೀನಿವಾಸ್‌ಗೌಡ ನೋಟಿಸ್ ನೀಡಿದ್ದಾರೆ. ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿದ್ದಾರೆ.
ಇತ್ತ ನಗರದೆಲ್ಲೆಡೆ ಆತಂಕದ ವಾತಾವರಣ ಇರೋದ್ರಿಂದ ಇಂದು ರಾತ್ರಿ 10 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ. ಪ್ರಶಾಂತ್, ಗ್ಯಾರಳ್ಳಿ ತಮ್ಮಯ್ಯ ಕೊಲೆ ಕೇಸಿನಲ್ಲಿ ಖುಲಾಸೆಗೊಂಡ ನಂತರ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ತನ್ನ ಪಾಡಿಗೆ ತಾನಿದ್ದ ಪ್ರಶಾಂತ್, ಇದೀಗ ಏಕಾಏಕಿ ಹೆಣವಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.