Thursday, January 23, 2025

ಮುಂದಿನ ಚುನಾವಣೆಗೆ ‘ಕೈ’ ಭರ್ಜರಿ ತಯಾರಿ..!

ದೇವನಹಳ್ಳಿ : ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳಿಂದ ಭರ್ಜರಿ ತಾಲೀಮು ನಡೆಯುತ್ತಿದೆ. ಶತಾಯ/ಗತಾಯ ಅಧಿಕಾರ ಉಳಿಸಿಕೊಳ್ಳಬೇಕೆಂದು ಆಡಳಿತ ಪಕ್ಷ ಸಿದ್ಧತೆ ನಡೆಸುತ್ತಿದೆ. ಏತನ್ಮಧ್ಯೆ ವಿಪಕ್ಷ ಕಾಂಗ್ರೆಸ್ ಕೂಡ ನಾವೇ ಅಧಿಕಾರಕ್ಕೇರಬೇಕೆಂದು ಎಲ್ಲಿಲ್ಲದ ಕಸರತ್ತು ಮಾಡುತ್ತಿದೆ. ಇದರ ಮುಂದುವರಿದ ಭಾಗವಾಗಿ ದೇವನಹಳ್ಳಿಯ ಸಾದಹಳ್ಳಿ ಬಳಿಯ ಕ್ಲಾರ್ಕ್ ಎಕ್ಸೋಟಿಕಾ ರೆಸಾರ್ಟ್‌ನಲ್ಲಿ ಕೆಪಿಸಿಸಿ ವತಿಯಿಂದ ಎರಡು ದಿನದ ನವ ಸಂಕಲ್ಪ ಶಿಬಿರ ಕಾರ್ಯಕ್ರಮ ಆಯೋಜಿಸಿತ್ತು. ಮೊದಲ ದಿನದ ಶಿಬಿರ  ಪ್ರಾರಂಭವಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೇರಿ ರಾಜ್ಯದ ಅನೇಕ ನಾಯಕರು ಭಾಗವಹಿಸಿದ್ದರು. ಇನ್ನೂ ಎರಡು ದಿನಗಳ ಈ ಶಿಬಿರದಲ್ಲಿ ಆರು ಸಮಿತಿಗಳನ್ನು ರಚಿಸಲಾಗಿತ್ತು. ಆರು ಸಮಿತಿಗಳಿಗೆ ಒಬ್ಬೊಬ್ಬರು ನಾಯಕರನ್ನು ನೇಮಿಸಿ ಶಿಬಿರದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ವಿವಿಧ ಹಿರಿಯ ನಾಯಕರು ಶಿಬಿರಕ್ಕೆ ಗೈರಾಗುವ ಮೂಲಕ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನು ಇತ್ತೀಚೆಗೆ ರಾಜ್ಯ ವಿಧಾನ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಸಾಕಷ್ಟು ಅಸಮಾಧಾನ ಪ್ರಾರಂಭವಾಗಿದೆ. ಕೆಪಿಸಿಸಿಯಲ್ಲಿ ಒಂದು ಕಡೆ ಪಕ್ಷ ಸಂಘಟನೆ ಮತ್ತೊಂದು ಕಡೆ ಅಸಮಾಧಾನದ ಹೊಗೆ ಆರಂಭವಾಗಿದೆ. ನವ ಸಂಕಲ್ಪ ಶಿಬಿರಕ್ಕೆ ಹಿರಿಯ ನಾಯಕರು ಗೈರಾಗಿದ್ದಾರೆ. ಪರಿಷತ್ ಟಿಕೆಟ್ ಎರಡನೇ ಬಾರಿ ಕೈತಪ್ಪಿದ ಕಾರಣ ಮುನಿಸಿಕೊಂಡಿರುವ ಎಸ್ ಆರ್ ಪಾಟೀಲ್, ರಾಜ್ಯ ಸಭೆ ಪರಿಷತ್ ಎರಡೂ ಕಡೆ ಪರಿಗಣಿಸದಿರುವುದಕ್ಕೆ ಮುದ್ದಹನುಮೇಗೌಡ , ಎಂ ಆರ್ ಸೀತಾರಾಂ ಮತ್ತು ಪಕ್ಷದ ಬೆಳವಣಿಗೆ ಬಗ್ಗೆ ಅಸಮಾಧಾನ ಹೊಂದಿರುವ ಜಮೀರ್ ಅಹಮ್ಮದ್ ಸೇರಿದಂತೆ ಅನೇಕ ನಾಯಕರು ನವ ಸಂಕಲ್ಪ ಶಿಬಿರಕ್ಕೆ ಗೈರಾದರ ಮೂಲಕ ತಮ್ಮ ಅಸಮಾಧನ ಹೊರ ಹಾಕಿದ್ದಾರೆ. ಇನ್ನೂ ಇದೇ ವೇಳೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪತ್ರಿಕಾಗೋಪ್ಠಿ ನಡೆಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದರು.

ಒಟ್ಟಾರೆ ಎರಡು ದಿನಗಳ ಕಾಲ ನಡೆಯುವ ನವ ಸಂಕಲ್ಪ ಶಿಬಿರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಗೈರಾಗುವ ಮೂಲಕ ತಮ್ಮ ತಮ್ಮ ಅಸಮಾಧನ ಹೊರ ಹಾಕಿದ್ದಾರೆ. ರಾಜ್ಯ ಸಭಾ ಮತ್ತು ಪರಿಷತ್ ಚುನಾವಣೆಯಲ್ಲಿ ಟಿಕೇಟ್ ಕೈತಪ್ಪಿದ ನಾಯಕರನ್ನು ರಾಜ್ಯ ಕಾಂಗ್ರೆಸ್ ಯಾವ ರೀತಿ ಸಮಾಧನ ಪಡಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES