ಬೆಂಗಳೂರು: ಬಹುನಿರೀಕ್ಷಿತ ಬಿಬಿಎಂಪಿ ವಾರ್ಡ್ ಮರುವಿಂಗಡಣಾ ಕರಡು ಪ್ರತಿ ಕೊನೆಗೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. 198 ವಾರ್ಡ್‌ನಿಂದ 243 ಕ್ಕೆ ಏರಿಕೆ ಮಾಡಿರೋ ಈ ಕರಡನ್ನ ಬಿಬಿಎಂಪಿ ಸಲ್ಲಿಸಿದ ವೇಗದಲ್ಲಿಯೇ ಸರ್ಕಾರ ತಿರಸ್ಕಾರ ಮಾಡಿದೆ. ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿ ವಾರ್ಡ್ ಸಮಿತಿ ವಾರ್ಡ್‌ಗಳನ್ನು ವಿಂಗಡಿಸಿದೆ ಅಂತ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದೆ ಅಂತ ಹೇಳಲಾಗ್ತಿದೆ. ಮಾಧ್ಯಮಗಳಲ್ಲಿ ಬಿಬಿಎಂಪಿ ಸಲ್ಲಿಕೆ ಮಾಡಿರೋ ಕರಡು ಪ್ರತಿಗಳು ಹರಿದಾಡ್ತಿದ್ದರೂ ಬಿಬಿಎಂಪಿ ಮಾತ್ರ ನಾವಿನ್ನೂ ಕರಡು ಪ್ರತಿ ಸಲ್ಲಿಕೆನೇ ಮಾಡಿಲ್ಲ. ಇನ್ನೆರಡು ದಿನಗಳಲ್ಲಿ ಸಲ್ಲಿಕೆ ಮಾಡ್ತೀವಿ ಅಂತ ಮುಜುಗರ ತಪ್ಪಿಸಿಕೊಳ್ಳೋ ಯತ್ನ ಮಾಡ್ತಿದೆ. ಇದ್ರಿಂದ ಚುನಾವಣೆ ನಡೆಸೋಕೆ ಶಾಸಕರಂತೆಯೇ ಅಧಿಕಾರಿಗಳು ಕೂಡ ನುಣುಚಿಕೊಳ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬರ್ತಿದೆ.
ಇನ್ನು ಬಿಬಿಎಂಪಿ ವಾರ್ಡ್ ವಿಂಗಡಣೆ ವಿಚಾರದಲ್ಲಿ ಬಿಬಿಎಂಪಿ ಪಕ್ಷಾತೀತವಾಗಿ ನಡೆದುಕೊಂಡಿಲ್ಲ ಅನ್ನೋದು ಸರ್ಕಾರದ ವಾದ. ಹೀಗಾಗಿ ಸರ್ಕಾರ ಬಿಬಿಎಂಪಿ ಸಲ್ಲಿಸಿದ ಕರಡು ಪ್ರತಿಯಲ್ಲಿ ಕೆಲ ದೋಷಗಳನ್ನು ಪತ್ತೆ ಹಚ್ಚಿದೆ. ಅವುಗಳನ್ನು ನೋಡೋದಾದ್ರೆ. ಒಂದು ವಾರ್ಡ್ ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಇರುವಂತೆ ವಿಂಡಗಣೆ ಮಾಡಿಲ್ಲ ಅನ್ನೋದು ಮೊದಲ ದೋಷ. ಆದ್ರೆ, ಪಾಲಿಕೆಗೆ ಹೆಚ್ಚು ಅದಾಯ ಬರುವ ವಾರ್ಡ್ಗಳು ಚಿಕ್ಕದಾಗಿ ಹಾಗೆನೇ ಕಡಿಮೆ ಆದಾಯ ಬರುವ ವಾರ್ಡ್‌ಗಳ ಗಾತ್ರವನ್ನು ಹೆಚ್ಚಿಸಲಾಗಿದೆ ಅಂತ ಪತ್ತೆ ಹಚ್ಚಿದೆ. ಜೊತೆಗೆ ಕನ್ನಡ & ಇಂಗ್ಲಿಷ್ ಭಾಷೆಯಲ್ಲಿ ಕರಡು ಪಟ್ಟಿ ಸಲ್ಲಿಸುವಂತೆ ಸೂಚನೆಯನ್ನ ಸರ್ಕಾರ ಕೊಟ್ಟಿದೆಯಂತೆ. ಇದಕ್ಕಿಂತ ಮುಖ್ಯವಾಗಿ ಹೊಸ ವಾರ್ಡ್ಗಳಿಗೆ ಇತಿಹಾಸ ಹೊಂದಿದ ಹಳೆಯ ಹೆಸರು ಇಟ್ಟಿಲ್ಲವಂತೆ. ಇದನ್ನೆಲ್ಲಾ ಗಮನಿಸಿದ್ರೆ ಕರಡು ವಾಪಸ್ ಬರೋದಕ್ಕೆ ಬೆಂಗಳೂರಿನ ಸಚಿವರ ಕೈವಾಡ ಇದೆ ಅನ್ನೋ ಅನುಮಾನವನ್ನು ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳು ಮಾಡ್ತಿದ್ದಾರೆ.
ಡೀಲಿಮಿಟೇಷನ್ ಕ್ಯಾಟಗಿರಿ ರಿಸರ್ವೇಷನ್ ಆಗ್ಲಿ. ಆ ಮೇಲೆ ಚುನಾವಣೆ ನೋಡೋಣ ಅಂತ ಕಾಂಗ್ರೆಸ್ ಮತ್ತು ಜೆಡಿಎಸ್ ಕಾದು ನೋಡ್ತಿದ್ರೆ. ಇತ್ತ ಚುನಾವಣೆಗೆ ನಾವು ರೆಡಿ ಎನ್ನುವಂತೆ ಬಿಜೆಪಿ ನಾಯಕರು ಈಗಾಗಲೇ ಚುನಾವಣಾ ರೂಪು ರೇಷೆಗಳನ್ನು ಸಿದ್ಧಪಡಿಸಿದ್ದು,ಈಗಾಗಲೇ ಮೂರು ಮೀಟಿಂಗ್‌ಗಳನ್ನು ಕೂಡ ಬಿಜೆಪಿ ಮುಗಿಸಿ, ಪಾಲಿಕೆ ಮೇಲೆ ಹಿಡಿತ ಸಾಧಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.
ಈಗಾಗಲೇ ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಸುಪ್ರೀಂ ಕೊಟ್ಟ ಗಡುವಿನಲ್ಲಿ ಎರಡು ವಾರ ಕಳೆದಿದೆ. ಇನ್ನು ಬಾಕಿ ಉಳಿದಿರೋದು 6 ವಾರಗಳು ಮಾತ್ರ. ಇದ್ರಿಂದ ಕೂಡಲೇ ಚುನಾವಣಾ ಸಿದ್ಧತೆಗಳು ಪೂರ್ಣಗೊಳ್ಬೇಕಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.