ಧಾರವಾಡ : ಜಿಲ್ಲೆಯಲ್ಲಿ ರಸಗೊಬ್ಬರಕ್ಕಾಗಿ ಹಾಹಾಕಾರ ಉಂಟಾಗಿದೆ. ಸೊಸೈಟಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರವೇ ಸಿಗುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಬರೀ ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಸದ್ಯ ಬಿತ್ತನೆ ಕಾರ್ಯ ಆರಂಭವಾಗಿದ್ದು, ಬಿತ್ತನೆಗೆ ಪೂರಕವಾದ ಡಿಎಪಿ ಗೊಬ್ಬರವೇ ಸಿಗುತ್ತಿಲ್ಲ. ಶಾಸಕ ಅರವಿಂದ ಬೆಲ್ಲದ್ ಅವರು ಸರ್ಕಾರದಲ್ಲಿದ್ದು, ಅವರು ಈ ಸಮಸ್ಯೆ ಬಗೆಹರಿಸಬೇಕು ಎಂದು ರೈತರು ಅವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಿತ್ತನೆ ಸಮಯದಲ್ಲಿ ರಸಗೊಬ್ಬರ ಪೂರೈಕೆ ಮಾಡಿದರೆ ಅದು ಪ್ರಯೋಜನವಾಗುತ್ತದೆ. ಬಿತ್ತುವ ಸೀಸನ್ ಮುಗಿದು ಹೋದ ಮೇಲೆ ಗೊಬ್ಬರ ಪೂರೈಕೆ ಮಾಡಿದರೆ ಅದು ಪ್ರಯೋಜನಕ್ಕೆ ಬರುವುದಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ.
ಧಾರವಾಡದಲ್ಲಿರುವ ಶಾಸಕ ಅರವಿಂದ ಬೆಲ್ಲದ್ ಅವರ ನಿವಾಸಕ್ಕೆ ರೈತರು ಮುತ್ತಿಗೆ ಹಾಕುತ್ತಿದ್ದಂತೆ ಸ್ಥಳಕ್ಕೆ ಬಂದ ಕೃಷಿ ಇಲಾಖೆ ಅಧಿಕಾರಿಗಳು ರೈತರ ಮನವೊಲಿಕೆ ಮಾಡಿದರು. ಒಂದೆರಡು ದಿನದಲ್ಲಿ ರೈತರಿಗೆ ಗೊಬ್ಬರ ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ ಮೇಲೆ ರೈತರ ಆಕ್ರೋಶ ಕಡಿಮೆ ಆಯಿತು.