ಬೆಂಗಳೂರು: ಬಿಡಿಎದಲ್ಲಿ ಬ್ರೋಕರ್‌ಗಳಿಂದ ಅದೆಷ್ಟು ಜನ ಮೋಸ ಹೋಗಿದ್ದಾರೋ ಲೆಕ್ಕವೇ ಸಿಗಲ್ಲ. ಇಲ್ಲೊಬ್ಬ ಆದಿತ್ಯ ಮಲ್ಲೇಶ್ ಅನ್ನೋ ವ್ಯಕ್ತಿ ತಾನು ಬಿಲ್ಡರ್ ಅಂತಾ ಹೇಳಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ಕೆಜಿಎಫ್ ಮೂಲದ ಶ್ರೀಧರ್ ರಾವ್ ಶಿಂಧೆ ಅನ್ನೋ ವಯಸ್ಸಾದ ವ್ಯಕ್ತಿಯನ್ನೂ ಬಿಡದೇ ಲಕ್ಷಾಂತರ ರೂಪಾಯಿ ಪೀಕಿದ್ದಾನೆ. ವಂಚನೆಗೊಳಗಾದ ಶ್ರೀಧರ್ ರಾವ್‌ಗೆ ಬನಶಂಕರಿ 5ನೇ ಹಂತದಲ್ಲಿ ಬಿಡಿಎ ಸೈಟ್ ಅಲಾಟ್ ಆಗಿತ್ತು. ಕಾರಣಾಂತರಗಳಿಂದ ಬೇರೆಡೆ ಬದಲಿ ನಿವೇಶನ ಸಿಕ್ಕಿತ್ತು. ರಿಜಿಸ್ಟರ್ ಕೂಡ ಆಗಿತ್ತು. ಆದ್ರೆ, ಆ ಸೈಟ್‌ನಲ್ಲಿ ಹೈ ಟೆನ್ಷನ್ ವೈರ್ ಬಂದ ಹಿನ್ನೆಲೆ ಮತ್ತೊಮ್ಮೆ ಬದಲಿ ನಿವೇಶನ ಕೊಡಬೇಕು ಅಂತಾ ಬಿಡಿಎದಲ್ಲಿ ತೀರ್ಮಾನ ಆಯ್ತು. ಆರೇಳು ವರ್ಷ ಆದ್ರೂ ಸೈಟ್ ಕೊಡಲೇ ಇಲ್ಲ. ಇಂಥಹವರನ್ನೇ ಟಾರ್ಗೆಟ್ ಮಾಡ್ತಿದ್ದ ಆದಿತ್ಯ ಮಲ್ಲೇಶ್, ಬದಲಿ ನಿವೇಶನ ಕೊಡಿಸುತ್ತೇನೆಂದು ಹಲವರಿಂದ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣ ಪೀಕಿ, ಪಂಗನಾಮ ಹಾಕ್ತಿದ್ದ. ಶ್ರೀಧರ್ ರಾವ್ ಶಿಂಧೆಯಿಂದಲೂ 11.50 ಲಕ್ಷ ಹಣ ತಿಂದಿದ್ದಾನೆ.
ಇಷ್ಟೇ ಅಲ್ಲ ಈ ಆಸಾಮಿ ಖಾಸಗಿ ಲೇಔಟ್‌ಗಳಲ್ಲಿ ಖಾಲಿ ಸೈಟ್ ತೋರಿಸಿ, ಇದೇ ಬಿಡಿಎ ಸೈಟ್ ಅಂತಿದ್ದ. ಅದಕ್ಕೊಂದು ನಕಲಿ ಸಿಡಿ ತಯಾರಿಸಿ, ನಂಬಿಸಿ ಲಕ್ಷಾಂತರ ರೂಪಾಯಿ ಹಣ ಖಮಾಯಿಸುತ್ತಿದ್ದ. ಹೇಗೋ ಸೈಟ್ ಸಿಕ್ತು ಅಂತಾ ಮನೆ ಕಟ್ಟೋಕೆ ಹೋದ್ಮೇಲೆ ಮೋಸ ಗೊತ್ತಾಗ್ತಾ ಇತ್ತು, ಇದು ಬಿಡಿಎ ಸೈಟ್ ಅಲ್ಲ. ಖಾಸಗಿ ಲೇಔಟ್ ಅಂತಾ. ಇವನಿಂದ ಅನ್ಯಾಯ ಆಗಿದೆ ಅಂತಾ ಗೊತ್ತಾಗಿ ಬಿಡಿಎ ಜಾಗೃತ ದಳಕ್ಕೆ ಶ್ರಿಧರ್ ರಾವ್ ಶಿಂಧೆ ದೂರು ನೀಡಿದ್ದಾರೆ.. ಶೇಷಾದ್ರಿಪುರಂ ಪೊಲೀಸ್ ಸ್ಟೇಶನ್‌ನಲ್ಲೂ ಎಫ್‌ಐಆರ್ ದಾಖಲಾಗಿದೆ.
ಇನ್ನು ಈ ಬ್ರೋಕರ್ ಜಯನಗರ ಪೊಲೀಸ್ ಸ್ಟೇಶನ್ ಎದುರಲ್ಲೇ ಆದಿತ್ಯ ಡೆವೆಲಪರ್ಸ್ ಅಂತಾ ಕಚೇರಿ ಮಾಡಿಕೊಂಡಿದ್ದಾನೆ. ಈ ಗಂಭೀರ ಆರೋಪದ ಬಗ್ಗೆ ಕೇಳಿದ್ರೆ ನಮಗೆ ಏನೂ ಗೊತ್ತೇ ಇಲ್ಲ. ನಾನು ಹಣವೇ ತೆಗೆದುಕೊಂಡಿಲ್ಲ ಅಂತಾನಂತೆ. ಈತನಿಂದ ಒಬ್ಬಿಬ್ಬರಲ್ಲ 20 ಕ್ಕೂ ಹೆಚ್ಚು ಮಂದಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ ಅಂತಾ ವಂಚನೆಗೊಳಗಾದವರು ದೂರಿದ್ದಾರೆ.