Thursday, January 9, 2025

ಮಾಲೇಕಲ್ ತಿರುಪತಿ ದೇವಾಲಯದಲ್ಲಿ ಆತಂಕ

ಹಾಸನ : ಜಿಲ್ಲೆಯ ಅರಸೀಕೆರೆ ತಾಲೂಕಿನ ಐತಿಹಾಸಿಕ ಮಾಲೇಕಲ್ ತಿರುಪತಿಯ ಶ್ರೀನಿವಾಸನ ಸನ್ನಿಧಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಗ್ರಹಗಳನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ. ದೇಗುಲದ ಆವರಣದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ 250 ಮೂರ್ತಿಗಳನ್ನ ಬಳಸಿ ಶ್ರೀನಿವಾಸ ಕಲ್ಯಾಣ ಶಿಲ್ಪ ರೂಪಕ ಮ್ಯೂಸಿಯಂ ನಿರ್ಮಾಣ ಮಾಡಲಾಗ್ತಿದೆ. ಅರಸೀಕೆರೆ ಪಟ್ಟಣದ ಶ್ರೀಧರ್ ಮೂರ್ತಿ ಎಂಬುವವರು ತಮ್ಮ ಸ್ವಂತ ಖರ್ಚಿನಲ್ಲಿ ದೇವಾಲಯಕ್ಕಾಗಿ ಮ್ಯೂಸಿಯಂ ನಿರ್ಮಾಣ ಮಾಡಿಸ್ತಿದ್ದಾರೆ. ಸಿಮೆಂಟ್ ಮೂರ್ತಿಗಳನ್ನು ನಿರ್ಮಿಸಿ ಜೋಡಣೆಗೆ ಅಂತಿಮ ಹಂತದಲ್ಲಿರುವಾಗ ಇಂತಹ ಅವಘಡ ಸಂಭವಿಸಿದೆ.

ಸೋಮವಾರ ಸಂಜೆ ಮ್ಯೂಸಿಯಂ ಆವರಣದ ಕಲ್ಯಾಣಿಯಲ್ಲಿ ನಾಲ್ವರು ಯುವಕರು ಈಜಾಟ ನಡೆಸಿದ ಬಳಿಕ, ದೇವರ ಮೂರ್ತಿಯನ್ನು ವಿರೂಪಗೊಳಿಸಿರೋ ಅನುಮಾನವನ್ನ ವ್ಯಕ್ತಪಡಿಸಲಾಗ್ತಿದೆ. ಸ್ಥಳಕ್ಕೆ ಎಸ್ಪಿ ಶ್ರೀನಿವಾಸಗೌಡ ಹಾಗೂ ಅರಸೀಕೆರೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇತಿಹಾಸ ಪ್ರಸಿದ್ಧವಾದ ದೇವಾಲಯವಾಗಿದ್ರೂ ಸಿಸಿ ಕ್ಯಾಮರಾವನ್ನ ಹಾಕದೇ ಇರೋದು ತಾಲೂಕು ಆಡಳಿತ ಹಾಗೂ ದೇವಾಲಯದ ಅಡಳಿತ ಮಂಡಳಿಯ ವೈಫಲ್ಯ ಎದ್ದು ಕಾಣ್ತಿದೆ. ಇನ್ನು ರಾಜ್ಯದಲ್ಲಿ ಒಂದು ರೀತಿಯಲ್ಲಿ ಧರ್ಮ ದಂಗಲ್ ನಡೆಯೋ ಸಮಯದಲ್ಲಿ ಇಂತಹ ಘಟನೆ ನಡೆದಿದ್ರಿಂದ ಸ್ಥಳದಲ್ಲಿ ಆತಂಕದ ವಾತಾವಾರಣ ನಿರ್ಮಾಣವಾಗಿತ್ತು. ಬಿಜೆಪಿ ಹಾಗೂ ಸಂಘಸಂಸ್ಥೆಗಳ ಮುಖಂಡರು ಸ್ಥಳ ಪರಿಶೀಲಿಸಿದರು. ಈ ಘಟನೆಯ ಹಿಂದಿರೋ ಕಾಣದ ಕೈಗಳನ್ನೂ ಬಂಧಿಸಬೇಕೆಂದು ಆಗ್ರಹಿಸಿದ್ರು.

13 ಕ್ಕೂ ಹೆಚ್ಚು ವಿಗ್ರಹಗಳ ಕೈ, ಕಾಲು ಸೇರಿ ಹಲವು ಭಾಗಗಳನ್ನು ವಿರೂಪಗೊಳಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಒಟ್ನಲ್ಲಿ, ಧರ್ಮಗಳ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ ಈ ಘಟನೆ ನಡೆದಿರುವುದು ಆತಂಕ ಹೆಚ್ಚಿಸಿದೆ. ಪೊಲೀಸರು ಶೀಘ್ರ ಆರೋಪಿಗಳನ್ನ ಪತ್ತೆ ಹಚ್ಚಬೇಕಿದೆ.

RELATED ARTICLES

Related Articles

TRENDING ARTICLES